ಭಾನುವಾರ, ಸೆಪ್ಟೆಂಬರ್ 22, 2019
22 °C

ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿಗೆ 120ಲೀ ನೀರು ನೀಡಲು ಯೋಜನೆ

Published:
Updated:

ಧಾರವಾಡ: ‘ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿಗೆ ಪ್ರತಿನಿತ್ಯ ಲಭ್ಯವಾಗುತ್ತಿರುವ ಗರಿಷ್ಠ 55 ಲೀ. ನೀರಿನ ಪ್ರಮಾಣವನ್ನು 120 ಲೀ.ಗೆ ಹೆಚ್ಚಿಸುವ ಯೋಜನೆ ಇದ್ದು, ಮುಂದಿನ ದಿನಗಳಲ್ಲಿ ಇದರ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.

ಧಾರವಾಡ ಜರ್ನಲಿಸ್ಟ್ ಗಿಲ್ಡ್ ಗುರುವಾರ ಆಯೋಜಿಸಿದ್ದ ಆಹ್ವಾನಿತ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷದ ದಾಖಲೆಗಳ ಪ್ರಕಾರವೇ ಜಿಲ್ಲೆಯಲ್ಲಿ ಸರಾಸರಿ 55 ಲೀಟರ್‌ನ ಶೇ 25ರಷ್ಟು ಮಾತ್ರ ನೀರು ಪೂರೈಕೆಯಾಗುತ್ತಿರುವ ಒಂಭತ್ತು ಹಳ್ಳಿಗಳು ಇದ್ದವು. ಇವುಗಳಲ್ಲಿ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳುವ ಯೋಜನೆ ಪ್ರಗತಿಯಲ್ಲಿದೆ. ಜತೆಗೆ ನೀರಿನ ಪ್ರಮಾಣ ಹೆಚ್ಚಿಸಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟು 388 ಜನವಸತಿ ಪ್ರದೇಶಗಳಿವೆ. ಇದರಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಧಾರವಾಡ, ಹುಬ್ಬಳ್ಳಿ ಹಾಗೂ ಕುಂದಗೋಳದ 72 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದೆ. ನೆಲದಡಿಯ ನೀರಿನ ಮೂಲಕ್ಕಿಂತ ನೆಲದ ಮೇಲಿನ ನೀರಿನ ಮೂಲವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುವ ಯೋಜನೆ ಇದ್ದು, ಮಲಪ್ರಭಾ ನೀರನ್ನೇ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ವಿಸ್ತರಿಸುವ ಕುರಿತೂ ಚಿಂತನೆ ಇದೆ’ ಎಂದರು.

‘ಜಲಧಾರೆ ಯೋಜನೆ ಅಡಿಯಲ್ಲಿ ₹1043 ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಪ್ರಾಥಮಿಕ ವರದಿಯೂ ಸಲ್ಲಿಕೆಯಾಗಿದೆ. ಆದರೆ ಯೋಜನೆ ತುಸು ದುಬಾರಿಯಾಗಿದೆ ಎಂಬ ಅಭಿಪ್ರಾಯಪಟ್ಟಿರುವ ಉನ್ನತ ಮಟ್ಟದ ಸಮಿತಿಯು, ಅನಗತ್ಯ ಖರ್ಚು ಕಡಿತಗೊಳಿಸಲು ಸೂಚಿಸಿದೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಜಿಲ್ಲೆಯ ನೀರಿನ ಬವಣೆ ನೀಗುವ ಭರವಸೆ ಇದೆ’ ಎಂದು ಡಾ. ಸತೀಶ ಹೇಳಿದರು.

‘ಈ ಬಾರಿ ಬೇಸಿಗೆಯಲ್ಲಿನ ನೀರಿನ ಬವಣೆಯನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆ. ಹೊಸ ಕೊಳವೆಭಾವಿ, ನಿರ್ಮಾಣ ಕಾಮಗಾರಿಗಳಿಗಿಂತ ಇರುವ ಕೊಳವೆಭಾವಿಗಳನ್ನೇ ಬಳಕೆ ಯೋಗ್ಯವನ್ನಾಗಿಸುವುದು, ಗ್ರಾಮೀಣ ಉದ್ಯೋಗ ಖಾತ್ರಿ ಮೂಲಕ ರೈತರ ಹೊಲಗಳಲ್ಲಿ ಕೃಷಿಹೊಂಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಹಾಗೆಯೇ ನೀರು ಪೋಲಾಗುವುದನ್ನು ತಪ್ಪಿಸಲು, ಟ್ಯಾಂಕ್ ತುಂಬಿ ಹರಿಯುವ ಪ್ರದೇಶದಲ್ಲಿ ನೀರಿನ ತೊಟ್ಟಿ ನಿರ್ಮಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.

‘ಯಾವುದೇ ಮೂಲದಿಂದ ನೀರು ಲಭ್ಯವಾಗುತ್ತಿದ್ದರೂ, ಅದನ್ನು ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀಡುವುದು ನಮ್ಮ ಜವಾಬ್ದಾರಿ. ಪ್ರಯೋಗಾಲಯವನ್ನು ಈಗ ಸುಸ್ಥಿತಿಗೆ ತರಲಾಗಿದೆ. ಇದಕ್ಕೆ ಇನ್ನಷ್ಟು ತಜ್ಞರ ನೇಮಕವಾಗಬೇಕಿದೆ. ಸದ್ಯ ಜಿಲ್ಲೆಯಲ್ಲಿ 468 ಶುದ್ಧ ಕುಡಿಯುವ ನಿರಿನ ಘಟಕಗಳಲ್ಲಿ 402 ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವೆಡೆ ಈ ಘಟಕಗಳ ಕುರಿತು ಜನರಿಗೆ ನಿರಾಸಕ್ತಿ ಇದೆ. ಇನ್ನೂ ಕೆಲವೆಡೆ ಇದನ್ನು ಧ್ವಂಸಗೊಳಿಸಿದ್ದಾರೆ. ಜನರಲ್ಲಿ ನೀರಿನ ಸಾಕ್ಷರತೆ ಮೂಡಿಸವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಬರುವ ಮಳೆಗಾಲದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದಿಂದ 175 ಮತ್ತು ನರೇಗಾ ಮೂಲಕ 109 ಚೆಕ್‌ ಡ್ಯಾಂಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಎರಡು ಕಮಾನುಗಳ ಚೆಕ್‌ಡ್ಯಾಂಗೆ ₹4.12ಲಕ್ಷದಂತೆ ವಿನಿಯೋಗಿಸಲಾಗುತ್ತಿದೆ. ಬಹಳಷ್ಟು ರೈತರು ಇದಕ್ಕೆ ಆಸಕ್ತಿ ತೋರಿದ್ದು, ಅವರ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅರಣ್ಯ ಇಲಾಖೆಯೂ ನಮಗೆ ಸಹಕಾರ ನಿಡಿದ್ದು, ಕೆಲವು ಚೆಕ್‌ ಡ್ಯಾಂಗಳು ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿವೆ. ಇದು ಸಹಜವಾಗಿ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಜತೆಗೆ ಜೂನ್ 5ರಂದು ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರವನ್ನೂ ಹಮ್ಮಿಕೊಳ್ಳಲಾಗಿದೆ’ ಎಂದು ಡಾ. ಸತೀಶ ಹೇಳಿದರು.

ಅಧಿಕಾರಿಗಳಾದ ಆರ್‌.ಬಿ.ಮುನುವಳ್ಳಿ, ಎ.ಎಂ.ಪಾಟೀಲ, ಷಣ್ಮುಖ, ಅಬ್ದುಲ್ ರಹೀಮ ಇದ್ದರು.

Post Comments (+)