ಶುಕ್ರವಾರ, ನವೆಂಬರ್ 15, 2019
24 °C
ರಾಜ್ಯಪಾಲರಿಗೆ ಮನವಿ ಸಲ್ಲಿಸಲು ರೈತ ಸೇನಾದಿಂದ ಬೆಂಗಳೂರು ಚಲೋ

ಮಹದಾಯಿ ತೀರ್ಪು ಅಧಿಸೂಚನೆಗೆ ಆಗ್ರಹ

Published:
Updated:
Prajavani

ಹುಬ್ಬಳ್ಳಿ: ಮಹದಾಯಿ, ಕಳಸಾ–ಬಂಡೂರಿ ಯೋಜನೆಗೆ ಸರ್ಕಾರ ಅಧಿಸೂಚನೆ ಹೊರಡಿಸಲು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ, ರೈತ ಸೇನಾ ವತಿಯಿಂದ ಬುಧವಾರ ಬೆಂಗಳೂರು ಚಲೋ ನಡೆಯಿತು.

ನಗರದ ಮೂರು ಸಾವಿರ ಮಠದ ಆವರಣದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಜಮಾಯಿಸಿದ ಸೇನಾದ ಕಾರ್ಯಕರ್ತರು, ಅಲ್ಲಿಂದ ಚನ್ನಮ್ಮ ವೃತ್ತ, ದಾಜಿಬಾನಪೇಟೆ, ಚನ್ನಮ್ಮನ ವೃತ್ತ, ಕೋರ್ಟ್‌ ಸರ್ಕಲ್, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ರೈಲು ನಿಲ್ದಾಣಕ್ಕೆ ಬಂದು, ಬೆಂಗಳೂರಿಗೆ ತೆರಳಿದರು.

ಈ ವೇಳೆ ಮಾತನಾಡಿದ ಸೇನಾದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ‘ಮಹದಾಯಿ ಯೋಜನೆಗಾಗಿ ನಾಲ್ಕು ಜಿಲ್ಲೆಯ ಹನ್ನೊಂದು ತಾಲ್ಲೂಕುಗಳ ರೈತರು ನಿರಂತರವಾಗಿ ಹೋರಾಡುತ್ತಿದ್ದಾರೆ. ಇದಕ್ಕಾಗಿ, 12 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೂ, ಸರ್ಕಾರ ಸಮಸ್ಯೆಯನ್ನು ಬಗೆಹರಿಸಲು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀರಿನ ವಿವಾದಕ್ಕೆ ಸಂಬಂಧಿಸಿದಂತೆ, ಮಹದಾಯಿ ನ್ಯಾಯಾಧೀಕರಣವು 2018ರ ಆಗಸ್ಟ್‌ನಲ್ಲಿ ತೀರ್ಪು ನೀಡಿದೆ. ರಾಜ್ಯಕ್ಕೆ ಕುಡಿಯುವ ಉದ್ದೇಶಕ್ಕಾಗಿ 5.5 ಟಿಎಂಸಿ ಹಾಗೂ ವಿದ್ಯುತ್ ಉತ್ಪಾದನೆಗೆ 8 ಟಿಎಂಸಿ ಸೇರಿ, ಒಟ್ಟು 13.5 ಟಿಎಂಸಿ ನೀರನ್ನು ರಾಜ್ಯಕ್ಕೆ ನೀಡಿದೆ. ಆದರೆ, ಇದುವರೆಗೆ ಸರ್ಕಾರ ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ’ ಎಂದರು.

‘ಮಹದಾಯಿ ಯೋಜನೆ ಚಾಲನೆ ಸಿಕ್ಕರೆ, ನಾಲ್ಕು ಜಿಲ್ಲೆಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ, ಅಧಿಸೂಚನೆ ಹೊರಡಿಸುವ ಕುರಿತು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಸಲ್ಲಿಸಲು ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)