ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಆಗಲಿದೆ ‘ಮೊಬಿಲಿಟಿ ಕಾರಿಡಾರ್‌’!

ಸ್ಮಾರ್ಟ್‌ಸಿಟಿ ಯೋಜನೆಯಡಿ ಉಣಕಲ್‌ನಿಂದ ಗಬ್ಬೂರು ಕ್ರಾಸ್‌ ವರಗೆ ರೂಪಾಂತರ
Last Updated 21 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತ್ಯಾಜ್ಯದಿಂದ ತುಂಬಿಹರಿಯುವ, ಸದಾ ದುರ್ವಾಸನೆ ಬೀರುತ್ತಿರುವ ಮಹಾನಗರದ ರಾಜಕಾಲುವೆ ಮುಂದಿನ ಒಂದು ವರ್ಷದಲ್ಲೇ ‘ಮೊಬಿಲಿಟಿ ಕಾರಿಡಾರ್‌’ ಆಗಿ ರೂಪಾಂತರವಾಗಲಿದೆ.

ಹೌದು, ಉಣಕಲ್‌ನಿಂದ ಗಬ್ಬೂರು ಕ್ರಾಸ್‌ ವರಗೆ ಇರುವ 10.5 ಕಿ.ಮೀ. ಉದ್ದನೆಯ ರಾಜಕಾಲುವೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 120 ಕೋಟಿ ವೆಚ್ಚದಲ್ಲಿ ‘ಮೊಬಿಲಿಟಿ ಕಾರಿಡಾರ್‌’ ಆಗಿ ಅಭಿವೃದ್ಧಿ ಪಡಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಕ್ರಿಯಾಯೋಜನೆ (ಡಿಪಿಆರ್‌)ಯನ್ನು ಸಿದ್ಧಪಡಿಸಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌, ಸ್ಮಾರ್ಟ್‌ಸಿಟಿ ಯೋಜನೆಯಡಿ ದೇಶದ 15 ನಗರಗಳಲ್ಲಿ ‘ಮೊಬಿಲಿಟಿ ಕಾರಿಡಾರ್‌’ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಇದರಲ್ಲಿ ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ಸಿಟಿಯೂ ಒಂದಾಗಿದೆ ಎಂದರು.

‘ಮೊಬಿಲಿಟಿ ಕಾರಿಡಾರ್‌’ ನಿರ್ಮಾಣಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರವು ₹ 120 ಕೋಟಿ ಅನುದಾನ ನೀಡಲಿದೆ ಎಂದು ತಿಳಿಸಿದರು.

ರಾಜಕಾಲುವೆಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಪೂರ್ಣ ಶುದ್ಧೀಕರಿಸಲಾಗುತ್ತಿದೆ. ಕಾಲುವೆಯಲ್ಲಿ ತ್ಯಾಜ್ಯ ನೀರು ಹರಿಯದಂತೆ ಅಲ್ಲಲ್ಲಿ ಇಂಗಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ರಾಜಕಾಲುವೆ ದುರ್ವಾಸನೆ ಮುಕ್ತವಾಗಲಿದೆ.

ರಾಜಕಾಲುವೆಗೆ ಹೊಂದಿಕೊಂಡಂತೆ ಇಕ್ಕೆಲಗಳಲ್ಲಿ ನಿರ್ಮಾಣವಾಗುವ ಮೊಬಿಲಿಟಿ ಕಾರಿಡಾರ್‌ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುತ್ತದೆ. ಕೇವಲ ಸೈಕಲ್‌ ಟ್ರ್ಯಾಕ್‌ ಮತ್ತು ಪಾದಚಾರಿ ಮಾರ್ಗ ಇರುತ್ತಿದೆ. ಇದರಿಂದ ನಗರದ ಜನರಿಗೆ ಶಾಲೆ, ಕಾಲೇಜು, ಆಸ್ಪತ್ರೆ, ಮಾರುಕಟ್ಟೆಗೆ ತೆರಳಲು ಅನುಕೂಲವಾಗಲಿದೆ ಎಂದರು.

ರಾಜಕಾಲುವೆ ಇಕ್ಕೆಲಗಳಲ್ಲಿ ನಿರ್ಮಾಣವಾಗುವ ಮೊಬಿಲಿಟಿ ಕಾರಿಡಾರ್‌ ಪಿ.ಬಿ.ರಸ್ತೆಗೆ ಪರ್ಯಾಯ ಮಾರ್ಗವಾಗಿ ರೂಪುಗೊಳ್ಳಲಿದೆ. ಇದರಿಂದ ನಗರದ ಇತರೆ ರಸ್ತೆಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಕಾಲುವೆ ಉದ್ದಕ್ಕೂ ಎರಡೂ ಕಡೆ ವೈವಿಧ್ಯಮಯವಾದ ಗಿಡಗಳನ್ನು ನೆಟ್ಟು ಬೆಳಸುವ ಮೂಲಕ ಗ್ರೀನ್‌ ಕಾರಿಡಾರ್‌ ಆಗಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲಲ್ಲಿ ಉದ್ಯಾನ, ಜಿಮ್‌, ಯೋಗಾ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಮೊಬಿಲಿಟಿ ಕಾಡಿಡಾರ್‌ನಲ್ಲೇ ತರಕಾರಿ, ಹಣ್ಣು, ತಿಂಡಿ, ತಿನಿಸು ಮಾರಾಟಕ್ಕೆ, ಬೆಳಿಗ್ಗೆ, ಸಂಜೆ ವಾಯು ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕಾರಿಡಾರ್‌ನಲ್ಲಿ ಸಿಸಿಟಿವಿ, ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜಕಾಲುವೆಯು 12 ಮೀಟರ್‌ನಿಂದ 26 ಮೀಟರ್‌ ವಿಸ್ತಾರ ಹೊಂದಿದೆ. ಆಗಸ್ಟ್‌ನಲ್ಲಿ ನಡೆದ ಸರ್ವೇ ಸಂದರ್ಭದಲ್ಲಿ ಈ ಕಾಲುವೆಯನ್ನು ಅಲ್ಲಲ್ಲಿ ಒತ್ತುವರಿ ಮಾಡಿ, 130ಕ್ಕೂ ಅಧಿಕ ಕಟ್ಟಡಗಳನ್ನು ನಿರ್ಮಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ಅವುಗಳನ್ನು ಶೀಘ್ರದಲ್ಲೇ ತೆರವುಗೊಳಿಸಲು ಸಹ ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT