ಶನಿವಾರ, ಮೇ 21, 2022
27 °C

ಕಾರ್ಗಿಲ್‌ ವೀರಗೆ ಸಂದ ಗೌರವ: ಕ್ಯಾ. ನವೀನ್‌ ನಾಗಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರ ನಗರದ ಹಾಲಿ ಬೆಂಗಳೂರು ನಿವಾಸಿ ಕ್ಯಾಪ್ಟನ್‌ ನವೀನ್‌ ನಾಗಪ್ಪ ಅಣಬೇರು ಅವರುಭಾರತೀಯ ಸೈನ್ಯದಲ್ಲಿ  ಸಲ್ಲಿಸಿದ ಸೇವೆ ಹಾಗೂ ಕಾರ್ಗಿಲ್‌ ಯುದ್ಧದ ಯಶೋಗಾಥೆ ಪರಿಗಣಿಸಿ ರಾಜ್ಯ ಸರ್ಕಾರ ಸೈನಿಕ ಕ್ಷೇತ್ರದಲ್ಲಿ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.

1973ರ ಸೆ. 5ರಂದು ನಗರದಲ್ಲಿ ಜನಿಸಿರುವ ನವೀನ್‌, ಇಲ್ಲಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಿ.ಸಿ. ಜಾಬಿನ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ವಿದ್ಯಾಲಯದಲ್ಲಿ 1996ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ವಿದೇಶ ವ್ಯಾಸಂಗಕ್ಕೆ ತೆರಳಲೆಂದು, ಜಿಆರ್‌ಇ, ಟೊಪಲ್ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದರು. ಆದರೆ, ವಿದೇಶಕ್ಕೆ ತೆರಳದೆ ಬಾಲ್ಯದ ಕನಸಿನಂತೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾದರು.

1999ರಲ್ಲಿ ಡೆಹರಾಡೂನಿನ ಭಾರತೀಯ ಸೈನಿಕ ಅಕಾಡೆಮಿಯಲ್ಲಿ ತರಬೇತಿ ಪಡೆದು, ತುಪಾಕಿ ಹಾರಿಸುವುದು ಹಾಗೂ ಅಶ್ವಾರೋಡಣೆಯಲ್ಲಿ  ‘ಏ’ ಶ್ರೇಣಿ ಪಡೆದರು. ತರಬೇತಿ ನಂತರ ಜಮ್ಮು-ಕಾಶ್ಮೀರ ರೈಫಲ್ಸ್‌ನ 13ನೇ ಬೆಟಾಲಿಯನ್‌ನಲ್ಲಿ ನಿಯುಕ್ತಿಗೊಂಡರು. ಅದೇ ಸಂದರ್ಭದಲ್ಲಿ ಕಾರ್ಗಿಲ್ ಗಡಿಯಲ್ಲಿ ಯುದ್ಧ ಶುರುವಾಗಿತ್ತು.

ಯುದ್ಧದಲ್ಲಿ ಪಾಲ್ಗೊಂಡ ನವೀನ್‌, ಶತ್ರುಗಳ ಹಲವಾರು ಬಂಕರ್‌ಗಳನ್ನು ನಾಶಪಡಿಸಿ, ಶತ್ರುಗಳ ಸಂಹಾರಗೈದರು. ಮರಗಟ್ಟುವ ಚಳಿಯಲ್ಲಿ ಅನ್ನ–ಆಹಾರ, ನಿದ್ರೆಗಳಿಲ್ಲದೆ, 48 ಗಂಟೆ ಯುದ್ಧ ನೆಡೆಯಿತು. ಯುದ್ಧ ನಿರ್ಣಾಯಕ ಹಂತ ತಲುಪುವಾಗ ಪ್ರಾಣಕ್ಕೆ ಇರುವ ಅಪಾಯ ಲೆಕ್ಕಿಸದೇ ಶತ್ರುವಿನ ಬಂಕರ್ ಎಡೆಗೆ ನುಗ್ಗಿದರು. ಈ ವೇಳೆ ಶತ್ರುಗಳು ಎಸೆದ ಗ್ರೆನೇಡ್ ಸ್ಫೋಟಿಸಿ ಇವರ ಎರಡು ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾದವು. ಎಡಗಾಲಿನ ಹೆಬ್ಬೆರಳು ಇಲ್ಲವಾಯಿತು. ಆಂಶಿಕ ಲಕ್ವದಿಂದಾಗಿ ಬಲಗಾಲು ಆಕಾರ ಕಳೆದುಕೊಂಡಿತು. ಇದರಿಂದಾಗಿ ಇವರ ಬಲಗಾಲು ಎಡಗಾಲಿಗಿಂತ ಗಿಡ್ಡವಾಯಿತು.

21 ತಿಂಗಳ ಆಸ್ಪತ್ರೆವಾಸದಲ್ಲಿ ಎಂಟು ಶಸ್ತ್ರಚಿಕಿತ್ಸೆಗಳನ್ನು ನವೀನ್‌ ಅವರಿಗೆ ಮಾಡಲಾಯಿತು. ಅವರು ದೈಹಿಕವಾಗಿ ಸದೃಢರಲ್ಲ ಎಂದು ಘೋಷಿಸಿ ಭಾರತೀಯ ಸೈನ್ಯ ಅವರನ್ನು ಸೇವೆಯಿಂದ ಬಿಡುಗಡೆ ಮಾ ಡಿತು. ಕಾರ್ಗಿಲ್ ಯುದ್ಧದಲ್ಲಿ ಇವರ ಶೌರ್ಯ ಸಾಹಸಗಳನ್ನು ಗುರುತಿಸಿ ಭಾರತ ಸರ್ಕಾರ ‘ಸೇನಾ ಮೆಡಲ್’ ಪುರಸ್ಕಾರ ನೀಡಿ ಗೌರವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು