ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಎಸ್‌ ಸುಪರ್ದಿಗೆ ರಾಮಲಿಂಗೇಶ್ವರ ದೇಗುಲ

ಪೊಲೀಸ್ ಭದ್ರತೆಯಲ್ಲಿ ಪ್ರಕ್ರಿಯೆ ಮುಗಿಸಿದ ಅಧಿಕಾರಿಗಳು; ಪ್ರವೇಶ ನಿಷೇಧಕ್ಕೆ ಸ್ಥಳೀಯರ ವಿರೋಧ
Last Updated 16 ಸೆಪ್ಟೆಂಬರ್ 2022, 4:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಉಣಕಲ್‌ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ಜಾಗವನ್ನು ಬಿಆರ್‌ಟಿಎಸ್‌ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಸುಪರ್ದಿಗೆ ಪಡೆದರು. ಹೈಕೋರ್ಟ್‌ ಆದೇಶದಂತೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಜುಬೇರ್ ಅಹ್ಮದ್ ಅವರು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರು.

‘ದೇವಸ್ಥಾನ ಇರುವ ಸಿಟಿಎಸ್‌ ನಂ–3448 ಜಾಗವನ್ನು ಬಿಆರ್‌ಟಿಎಸ್‌ ಸುಪರ್ದಿಗೆ ಪಡೆದಿದ್ದು, ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ನೋಟಿಸ್‌ ಅನ್ನು ಲಗತ್ತಿಸಿದರು. ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌., ಪ್ರಧಾನ ವ್ಯವಸ್ಥಾಪಕ (ಸಿವಿಲ್‌) ರಮೇಶ ಗುಡ್ಡರೆಡ್ಡಿ ಹಾಗೂ ಜಾಗದ ಮಾಲೀಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಂದೋಬಸ್ತ್: ಹುಬ್ಬಳ್ಳಿ–ಧಾರವಾಡವನ್ನು ಸಂಪರ್ಕಿಸುವ ಬಿಆರ್‌ಟಿಎಸ್‌ ಕಾರಿಡಾರ್‌ನ ಮೇಲ್ಸೇತುವೆ ಕೆಳಗಿರುವ ದೇವಸ್ಥಾನವನ್ನು ಅಧಿಕಾರಿಗಳು ಸುಪರ್ದಿಗೆ ಪಡೆಯುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ, ವಿದ್ಯಾನಗರ ಠಾಣೆ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಹಾಗೂ ಭೈರಿದೇವರಕೊಪ್ಪದ ದರ್ಗಾ ಬಳಿ ತಲಾ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.

ಸ್ಥಳಾಂತರಿಸಿರಲಿಲ್ಲ: ‘ಸರ್ವಿಸ್‌ ರಸ್ತೆ ನಿರ್ಮಾಣ‌ಕ್ಕಾಗಿ ಇಲ್ಲಿನ 16 ಸಾವಿರ ಚದರ ಅಡಿ ಭೂಮಿಯನ್ನುಹಿಂದೆ ಬಿಆರ್‌ಟಿಎಸ್‌ ಸ್ವಾಧೀನಕ್ಕೆ ಪಡೆದಿತ್ತು. ದೇವಸ್ಥಾನ ಸ್ಥಳಾಂತರ ಮಾಡದ ಕಾರಣ 2,258 ಚದರ ಅಡಿ ಜಾಗದ ಹೊರತಾಗಿ ಉಳಿದ ಜಾಗಕ್ಕೆ ಹಣ ನೀಡಲಾಗಿತ್ತು. ಜಾಗದ ಮಾಲೀಕ ಸತೀಶ ಮೆಹರವಾಡೆ ಇದಕ್ಕೆ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದರು’ ಎಂದುಬಿಆರ್‌ಟಿಎಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಜಡೆನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಳಿದ ಜಾಗವನ್ನೂ ಸ್ವಾಧೀನಪಡಿಸಿಕೊಳ್ಳುವಂತೆ ಸೆ.12ರಂದು ಹೈಕೋರ್ಟ್‌ ಆದೇಶಿಸಿತ್ತು. ಹಿಂದೆಯೇ, 15,000 ಚದರ ಅಡಿ ಹೆಚ್ಚುವರಿ ಭೂಮಿ ಪಡೆದು, ಸರ್ವಿಸ್‌ ರಸ್ತೆ ನಿರ್ಮಿಸಲಾಗಿದೆ. ಹಾಗಾಗಿ, ಸದ್ಯ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಯುವುದಿಲ್ಲ. ಹೈಕೋರ್ಟ್‌ ಆದೇಶಿಸಿದರೆ ಹಣ ನೀಡಲಾಗುತ್ತದೆ. ದೇಗುಲವನ್ನು ಸುಪರ್ದಿಗೆ ಪಡೆಯುವ ಸಂಬಂಧ ಟ್ರಸ್ಟ್‌ ಕಮಿಟಿಗೆ ತಿಳಿಸಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT