ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಆಚರಣೆ; ಸಾಧಕರಿಗೆ ಪ್ರಶಸ್ತಿ

Last Updated 27 ಜನವರಿ 2023, 6:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮನ ನೇತೃತ್ವದಲ್ಲಿ ಕಿತ್ತೂರು ಸಂಸ್ಥಾನ ದೊಡ್ಡ ಹೋರಾಟ ಮಾಡಿತ್ತು. ಈ ಹೋರಾಟಕ್ಕೆ ಬಲವಾಗಿ ನಿಂತವರು ಸಂಗೊಳ್ಳಿ ರಾಯಣ್ಣ. ರಾಯಣ್ಣನ ಹೋರಾಟ, ಶೌರ್ಯ, ಧೈರ್ಯ ಹಾಗೂ ಬಲಿದಾನ ಇಂದಿನ ಯುವ ಜನರಿಗೆ ಸ್ಫೂರ್ತಿಯಾಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ರಾಯಣ್ಣ ಹುತಾತ್ಮ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು ಎಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಈ ಕುರಿತು ಪ್ರಸ್ತಾವ ಸಲ್ಲಿಕೆಯೂ ಆಗಿತ್ತು. ಅದು ಸದ್ಯ ಮೂಲಸೌಕರ್ಯ ಇಲಾಖೆಯ ಸಚಿವ ವಿ. ಸೋಮಣ್ಣ ಬಳಿ ಇದೆ. ಅದರ ಕುರಿತು ಕ್ರಮ ವಹಿಸುವಂತೆ ಅವರಿಗೆ ಕಳೆದ ವಾರ ಕೋರಿದ್ದೆ. ಅವರು ಸಂಪುಟ ಸಭೆಗೆ ಕಳಿಸುವುದಾಗಿ ಹೇಳಿದ್ದಾರೆ. ಅಲ್ಲಿ ಪಾಸಾದರೆ, ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಮುಖ್ಯಮಂತ್ರಿ ಅವರ ಗಮನ ಸೆಳೆಯುವೆ. ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೆರವಿನೊಂದಿಗೆ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡಲು ಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಪ್ರಜಾವಾಣಿ’ ಹಿರಿಯ ಛಾಯಾಗ್ರಹಕ ಗೋವಿಂದರಾಜ ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳ 25ಕ್ಕೂ ಸಾಧಕರಿಗೆ ‘ಸಂಗೊಳ್ಳಿ ರಾಯಣ್ಣ’ ‍ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಫ್. ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಲಿಂಗರಾಜ ಪಾಟೀಲ, ಪ್ರಭು ನವಲಗುಂದ ಮಠ, ಡಾ.‌ಕ್ರಾಂತಿಕಿರಣ, ನಾಗೇಶ ಕಲಬುರಗಿ ಇದ್ದರು. ಗುರುರಾಜ ಮೆಲೋಡಿಸ್‌ನಿಂದ ದೇಶಭಕ್ತಿ, ಭಾವಗೀತೆಗಳ ಗಾಯನ ನಡೆಯಿತು. ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯ ತಂಡವು ನೀಡಿದ ಮಲ್ಲಕಂಬ ಪ್ರದರ್ಶನ ಜನಾಕರ್ಷಿಸಿತು.

ಹೊರಕೇರಿ ಮಾಸ್ತರ ಪ್ರತಿಷ್ಠಾನ: ರಾಯಣ್ಣ ಹುತಾತ್ಮ ದಿನದ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಪ್ರತಿಮೆಗೆ ಹೊರಕೇರಿ ಮಾಸ್ತರ ಪ್ರತಿಷ್ಠಾನ, ಬಸವ ಪರಿಸರ ಸಂರಕ್ಷಣಾ ಸಮಿತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸದಾನಂದ ಡಂಗನವರ, ಸುರೇಶ ಹೊರಕೇರಿ, ಮೃತ್ಯುಂಜಯ ಮಟ್ಟಿ, ಅನಿಲ ಬುನಿಯನ್, ಸಿ.ಜಿ. ಧಾರವಾಡಶೆಟ್ಟರ, ಚಂದ್ರಕಾಂತ ಜಾದವ, ಶೋಭಾ ಸಾಂಗಲಿ, ಸದಾನಂದ ತೇರದಾಳ, ಪ್ರಕಾಶ ಬೆಂಗಳೂರು, ಚೇತನ ಹಿರೇಕೆರೂರ, ಸುಧಾ, ಅಮಿತ, ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT