ಭಾನುವಾರ, ಆಗಸ್ಟ್ 25, 2019
28 °C

ಬಂತು ರಾಯರ ಆರಾಧನೆ...

Published:
Updated:
Prajavani

ಪ್ರತಿ ವರ್ಷ ಆಗಸ್ಟ್‌ ಬಂದಾಗಲೆಲ್ಲ ರಾಯರ ಭಕ್ತರಿಗೆ ಸಂಭ್ರಮ. ಮೂರು ದಿನಗಳ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಅಂಗವಾಗಿ ಹತ್ತಾರು ಕಾರ್ಯಕ್ರಮಗಳು ನಡೆಯುತ್ತವೆ. ಇದಕ್ಕಾಗಿ ಒಂದು ತಿಂಗಳ ಮೊದಲೇ ಸಿದ್ಧತೆ ನಡೆದಿರುತ್ತವೆ.

ಹುಬ್ಬಳ್ಳಿ–ಧಾರವಾಡದಲ್ಲಿರುವ ರಾಯರ ಮಠಗಳಲ್ಲಿ 348ನೇ ವರ್ಷದ ಆರಾಧನೆ ಆಚರಣೆಗೆ ಸಿದ್ಧತೆ ಚುರುಕು ಪಡೆದುಕೊಂಡಿವೆ. ಮಠದ ಆವರಣಗಳಲ್ಲಿ ಚಟುವಟಿಕೆ ರಂಗೇರಿವೆ. ಆ. 16ರಂದು ಪೂರ್ವಾರಾಧನೆ, 17ರಂದು ಮಧ್ಯಾರಾಧನೆ ಮತ್ತು 18ರಂದು ಉತ್ತರಾರಾಧನೆ ನಡೆಯುತ್ತವೆ. ನಿತ್ಯವೂ ಎಲ್ಲ ಮಠಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ಇರುತ್ತವೆ.

ಹುಬ್ಬಳ್ಳಿಯ ಅತ್ಯಂತ ಹಳೆಯ ಮಠವಾದ ತೊರವಿಗಲ್ಲಿಯ ಹಾದಿಬೀದಿಯಲ್ಲಿ ಬಣ್ಣಬಣ್ಣದ ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ. ಆರಾಧನೆಗಾಗಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ ದಿನಸಿ ಪದಾರ್ಥಗಳನ್ನು ಭಕ್ತರು ನಿತ್ಯ ನೀಡುತ್ತಿದ್ದಾರೆ. ಕೆಲವರು ಹಣ ನೀಡಿ ನೆರವಾಗುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಭವಾನಿ ನಗರದಲ್ಲಿ ನಂಜನಗೂಡು ರಾಘವೇಂದ್ರಸ್ವಾಮಿ ಮಠ, ಕುಸುಗಲ್‌ ರಸ್ತೆಯಲ್ಲಿರುವ ಮಠ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ರಾಘವೇಂದ್ರ ಸ್ವಾಮಿಗಳ ವೃಂದಾವನ, ತೊರವಿಗಲ್ಲಿ, ಉತ್ತರಾಧಿಮಠ, ವಿದ್ಯಾನಗರದ ಪರಿಮಳ ಮಾರ್ಗ, ಶಕ್ತಿ ಕಾಲೊನಿ, ರಾಮಕೃಷ್ಣ ನಗರ ಭಕ್ತಾದಿಗಳ ರಾಯರಮಠ, ಶಾಂತಿಕಾಲೊನಿ ಮತ್ತು ನವನಗರದಲ್ಲಿ ಮಠಗಳು ಇವೆ.

ಧಾರವಾಡದಲ್ಲಿ ಮಾಳಮಡ್ಡಿಯಲ್ಲಿ ಕಂಪ್ಲಿ ರಾಯರ ಮಠ, ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿ ಪುರಂದರ ಮಂಟಪ, ವನವಾಸಿ ರಾಮಮಂದಿರ, ಸಪ್ತಾಪುರ ಶ್ರೀನಗರದಲ್ಲಿ, ವಿದ್ಯಾಗಿರಿ ಬಳಿಯ ಹಾಲಗಣೇಶ ಗುಡಿ, ಹೊಸ ಯಲ್ಲಾಪುರದಲ್ಲಿರುವ ಹಾವನೂರು ರಾಯರ ಮಠಗಳು ಇವೆ.

ಈ ಎಲ್ಲ ಮಠಗಳಲ್ಲಿ ಆರಾಧನೆಯ ಮೂರೂ ದಿನ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಬ್ರಾಹ್ಮಣ ಅಲಂಕಾರ ಪೂಜೆ, ಅನ್ನಸೇವೆ, ಪಲ್ಲಕ್ಕಿ ಸೇವೆ, ಸತ್ಯನಾರಾಯಣ ಪೂಜೆ, ಗೋಪೂಜೆ, ಧ್ವಜಾರೋಹಣ ವ್ಯಂಜನ ಪೂಜೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ.

ವಾಣಿಜ್ಯನಗರಲ್ಲಿರುವ ಪ್ರತಿ ಮಠಗಳ ಆರಂಭ ಕೂಡ ರೋಚಕ ಇತಿಹಾಸ ಹೊಂದಿವೆ. ತೊರವಿಗಲ್ಲಿ ರಾಯರ ಮಠ 220 ವರ್ಷಗಳ ಹಿಂದೆ ಶೀನಪ್ಪ ನಾಯಕ್ ವಾಳ್ವೇಕರ್‌ ಅವರಿಂದ ಪ್ರತಿಷ್ಠಾಪನೆಗೊಂಡಿತು. ಅವರ ಆರನೇ ತಲೆಮಾರಿನವರು ಈಗ ಮಠದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

‘ಶೀನಪ್ಪನಾಯಕ್ ಪ್ರತಿ ವರ್ಷ ಆರಾಧನೆಗೆ ಮಂತ್ರಾಲಯಕ್ಕೆ ತಪ್ಪದೇ ಹೋಗುತ್ತಿದ್ದರು. ಕೆಲ ವರ್ಷ ಹೋಗಲು ಸಾಧ್ಯವಾಗದ ಕಾರಣ ಅವರ ಕನಸಿನಲ್ಲಿ ರಾಯರು ಬಂದು ತೊರವಿಗಲ್ಲಿಯಲ್ಲಿ ವೃಂದಾವನ ಪ್ರತಿಷ್ಠಾಪಿಸುವಂತೆ ಆದೇಶ ನೀಡಿದ್ದರಂತೆ. ಆದ್ದರಿಂದ ಎಂ.ಕೆ. ಹುಬ್ಬಳ್ಳಿ ಬಳಿ ಸಿಕ್ಕ ವೃಂದಾವನವನ್ನು ಇಲ್ಲಿ ತಂದು ಪ್ರತಿಷ್ಠಾಪಿಸಲಾಗಿದೆ ಎನ್ನುವ ಪ್ರತೀತಿಯಿದೆ’ ಎಂದು ಈಗ ಮಠದ ನಿರ್ವಹಣೆ ನೋಡಿಕೊಳ್ಳುತ್ತಿರುವ ಗುಂಡಪ್ಪ ವಾಳ್ವೇಕರ್‌ ತಿಳಿಸಿದರು.

‘ಮಠದಲ್ಲಿ ರಾಯರ ಆರಾಧನೆ ಜೊತೆಗೆ ಟೀಕಾರಾಯರ ಪಂಚಮಿ, ಗೋಪಾಲದಾಸರ ಆರಾಧನೆ ಮಾಡಿಕೊಂಡು ಬಂದಿದ್ದೇವೆ. ನೇತ್ರ ತಪಾಸಣಾ ಶಿಬಿರ, ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತೇವೆ’ ಎಂದರು.

ಪರಿಮಳ ಮಾರ್ಗದಲ್ಲಿರುವ ಮಠವನ್ನು 1998ರ ಜೂನ್‌ 3ರಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಯರ ಮೃತಿಕಾ ವೃಂದಾವನ ಪ್ರತಿಷ್ಠಾಪಿಸಿದರು.

ಭವಾನಿ ನಗರದಲ್ಲಿರುವ ಮಠದಲ್ಲಿ 28 ವರ್ಷಗಳಿಂದ ಆರಾಧನೆ ನಡೆದುಕೊಂಡು ಬಂದಿದೆ. 1991ರಲ್ಲಿ ಇಲ್ಲಿನ ಮಠ ಅರಂಭವಾಯಿತು.

‘ಸುಜೀಯಿಂದ್ರ ತೀರ್ಥರು ಅದೊಮ್ಮೆ ಹುಬ್ಬಳ್ಳಿಯ ಅಪರಂಜಿ ಎಂಬುವರ ಮನೆಗೆ ಬಂದಿದ್ದರು. ಆಗ ಸಿಂಧಿ ಎನ್ನುವವರು ಅಂಬಾಸಿಡರ್‌ ಕಾರು ಹೊಂದಿದ್ದರು. ಅವರ ಕಾರಿನಲ್ಲಿ ತೆರಳಿದ ಸ್ವಾಮೀಜಿಗೆ ನೀವು ಎಷ್ಟು ದೂರ ನಡೆಯುತ್ತೀರೊ ಅಷ್ಟು ದೂರ ಜಾಗಕೊಡುತ್ತೇನೆ ಎಂದು ಸಿಂಧಿ ಹೇಳಿದ್ದರು. ಸ್ವಾಮೀಜಿ ನಡೆದಷ್ಟು ಅವರು ಜಾಗ ಕೊಟ್ಟರು. ಅದೇ ಜಾಗದಲ್ಲಿ ಈಗ ಮಠ ಕಟ್ಟಲಾಗಿದೆ’ ಎಂದು ಭವಾನಿ ನಗರದ ಮಠದ ಮುಖ್ಯ ಅರ್ಚಕ ಗುರಾಚಾರ್ ಸಾಮಗ ತಿಳಿಸಿದರು.

‘ಮಠದಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. ಇವುಗಳು ಜೊತೆ ಮಠ ಸಾಮಾಜಿಕವಾಗಿಯೂ ಅನೇಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಮಠದ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಪ್ರತಿ ಗುರುವಾರ ವೈದ್ಯ ಗುರುರಾಜ ನಾಡಗೌಡರು ಉಚಿತ ಚಿಕಿತ್ಸೆ ಹಾಗೂ ಔಷಧ ವಿತರಣೆ ಮಾಡುತ್ತಾರೆ. ಮಠದಿಂದಲೇ ಭಾವದೀಪ ಶಾಲೆ ನಡೆಸಲಾಗುತ್ತಿದೆ’ ಎಂದರು.

ಭವಾನಿ ನಗರದಲ್ಲಿ ರಾಯರ ಆರಾಧನೆ ಜೊತೆಗೆ ಈ ಬಾರಿ ಶ್ರೀವಾರಿ ಫೌಂಡೇಷನ್‌ ವತಿಯಿಂದ ಶ್ರೀನಿವಾಸ ಕಲ್ಯಾಣ ಹಮ್ಮಿಕೊಳ್ಳಲಾಗಿದೆ. ಆಗಮ ಶಾಸ್ತ್ರದ ಬಗ್ಗೆ ಕಲ್ಯಾಣ ಇರುತ್ತದೆ. ಹೆಸರಾಂತ ಗಾಯಕ ಪಂಡಿತ್ ಎಂ. ವೆಂಕಟೇಶ ಕುಮಾರ್ ದಾಸವಾಣಿ ಕಾರ್ಯಕ್ರಮ ನಡೆಸಿಕೊಡುವರು.

ರಾಯರು ವೃಂದಾವನ ಪ್ರವೇಶ ಮಾಡಿದ ಕಾರಣಕ್ಕೆ ಪ್ರತಿವರ್ಷದ ಮಧ್ಯಾರಾಧನೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕೊನೆಯ ದಿನ ರಥೋತ್ಸವ ನಡೆಯುತ್ತದೆ.

ದಕ್ಷಿಣ ಕನ್ನಡದ ದ್ರಾವಿಡ ಸಂಘದಿಂದ ಕೃಷ್ಣ ಕಲ್ಯಾಣ ಮಂಟಪದಲ್ಲಿ 1979ರಲ್ಲಿ ರಾಯರ ವೃಂದಾವನ ಪ್ರತಿಷ್ಠಾಪಿಸಲಾಯಿತು. ಅದೇ ವರ್ಷದಿಂದ ಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ.

‘ಸಂಘದ ಅನೇಕ ಹಿರಿಯರು ಸೇರಿ ಮಠ ಆರಂಭಿಸಿದರು. ಮಠದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಏಳೆ ನೀರು ಅಭಿಷೇಕ, ತುಳಸಿ ಆರ್ಚನೆ ಜರುಗುತ್ತವೆ’ ಎನ್ನುತ್ತಾರೆ ಮಠದ ಪ್ರಧಾನ ಆರ್ಚಕ ಕೃಷ್ಣಮೂರ್ತಿ ತೆಂಕಿಲಾಯ. ಈ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ, ದೀಪೋತ್ಸವ. ರಾಮನವವಿ, ವಸಂತೋತ್ಸವ ಕೂಡ ಜರುಗುತ್ತವೆ. 

ಹುಬ್ಬಳ್ಳಿಯಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಸಡಗರ

ಹುಬ್ಬಳ್ಳಿಯ ದೇಶಪಾಂಡೆನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಆ.16ರಿಂದ 18ರವರೆಗೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ.

ಹುಬ್ಬಳ್ಳಿಯ ಭವಾನಿ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.15ರಿಂದ 19ರವರೆಗೆ ಏರ್ಪಡಿಸಲಾಗಿದೆ.

ಹುಬ್ಬಳ್ಳಿಯ ತೊರವಿಗಲ್ಲಿಯ ಲಕ್ಷ್ಮಿ ವೆಂಕಟೇಶ್ವರ ಹಾಗೂ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆ.16ರಿಂದ 18ರವರೆಗೆ ಏರ್ಪಡಿಸಲಾಗಿದೆ. ಪ್ರವಚನಕಾರ ಶ್ರೀಹರಿ ಆಚಾರ್ಯ ವಾಳ್ವೇಕರ್‌ ಅವರು ನಿತ್ಯ ಸಂಜೆ 6.45ಕ್ಕೆ ರಾಯರ ಗ್ರಂಥಗಳ ಕುರಿತು ಪ್ರವಚನ ನಡೆಸಿಕೊಡುವರು.

ಹುಬ್ಬಳ್ಳಿಯ ವಿದ್ಯಾನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವನ್ನು ಆ.16ರಿಂದ 18ರವರೆಗೆ ಆಯೋಜಿಸಲಾಗಿದೆ.

ನವನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವನಗರದ ರಾಘವೇಂದ್ರ ಭಕ್ತ ಮಂಡಳಿ ಆಶ್ರಯದಲ್ಲಿ ಆ.16ರಿಂದ 18ರವರೆಗೆ ಏರ್ಪಡಿಸಲಾಗಿದೆ.

ಕುಸುಗಲ್‌ ರಸ್ತೆಯ ಕುಬೇರಪುರಂನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನಾ ಪಂಚರಾತ್ರೋತ್ಸವ ಆ.15ರಿಂದ 19ರವರೆಗೆ ನಡೆಯಲಿದೆ.

***

ಮಠ ಸ್ಥಾಪನೆಯಾದ ವರ್ಷದಿಂದ ಆರಾಧನೆ ನಡೆದುಕೊಂಡು ಬಂದಿದೆ. 1968ರಿಂದ ಹೆಚ್ಚು ವೈಭವದಿಂದ ನಡೆದಿದೆ. ಮೂರು ದಿನದಲ್ಲಿ 7–8 ಸಾವಿರ ಜನರಿಗೆ ಪ್ರಸಾದ ಸೇವೆ ಇರುತ್ತದೆ.

ಗುಂಡಪ್ಪ ವಾಳ್ವೇಕರ್‌, ತೊರವಿಗಲ್ಲಿ ಮಠದ ಮುಖ್ಯಸ್ಥ

ಮಠದ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನೂ ಮಾಡಲಾಗುತ್ತಿದೆ. ಪ್ರವಾಹ ಪೀಡಿತ ಜನರ ಸಂತ್ರಸ್ತರಿಗಾಗಿ ರಾಯರ ಪ್ರಸಾದ ಎನ್ನುವ ವಾಹನದ ವ್ಯವಸ್ಥೆ ಮಾಡಿದ್ದೇವೆ. ಭವಾನಿ ನಗರದಲ್ಲಿ ನಿತ್ಯ ಉಚಿತ ಆರೋಗ್ಯ ಸೇವೆ ಒದಗಿಸುವ ಗುರಿಯಿದೆ.

–ಗುರಾಚಾರ್ ಸಾಮಗ, ಮಠದ ಪ್ರಧಾನ ಅರ್ಚಕ

ಪ್ರತಿವರ್ಷ 20ರಿಂದ 25 ಸಾವಿರ ಜನ ಆರಾಧನೆಯಲ್ಲಿ ಭಾಗಿಯಾಗುತ್ತಾರೆ. ಜಾತಿ, ಮತದ ಭೇದವಿಲ್ಲದೇ ಎಲ್ಲರಿಗೂ ಪ್ರಸಾದ ನೀಡಲಾಗುತ್ತದೆ

–ಶ್ಯಾಮಾಚಾರ್ಯ ರಾಯಸ್ಥ, ಮಠದ ವ್ಯವಸ್ಥಾಪಕ

ಆರಾಧನೆಗೆ ಪ್ರತಿ ವರ್ಷ ಸಾಕಷ್ಟು ಭಕ್ತರು ಕಾಣಿಕೆ ನೀಡಿ ನೆರವಾಗುತ್ತದೆ. ಎಲ್ಲ ಧರ್ಮಗಳ ಜನ ಮಠಕ್ಕೆ ಬರಬೇಕು ಎಂಬುದು ನಮ್ಮ ಆಶಯ.

–ಕೆ. ರಘೋತ್ತಮರಾವ್, ಭವಾನಿ ನಗರ ಮಠದ ವಿಚಾರಣಾಕರ್ಥರು

ದಿನಕ್ಕೆ ಮೂರ್ನಾಲ್ಕು ಸಾವಿರ ಜನರಿಗೆ ಊಟದ ವ್ಯವಸ್ಥೆ ಇರುತ್ತದೆ. ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯ ಈಗಲೂ ಮುಂದುವರಿದಿದೆ.

–ಶ್ರೀಪತಿ ಓಕುಡೆ, ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ

1979ರಿಂದ ನಿರಂತರವಾಗಿ ರಾಯರ ಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಜನರಿಗೆ ಪ್ರಸಾದ ನೀಡಿದರೆ ಅದರ ಭಾಗ್ಯ ನಮಗೂ ಸಿಗುತ್ತದೆ

–ಕೃಷ್ಣಮೂರ್ತಿ ತೆಂಕಿಲಾಯ, ಕೃಷ್ಣ ಕಲ್ಯಾಣ ಮಂಟಪದ ರಾಯರ ಪ್ರಧಾನ ಅರ್ಚಕ

Post Comments (+)