ಸೋಮವಾರ, ಡಿಸೆಂಬರ್ 16, 2019
23 °C

ಗಮನ ಸೆಳೆಯಲು ಮರು ಮೈತ್ರಿ ಮಾತು: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಉಪ ಚುನಾವಣೆಯ ಸೋಲಿನ ಭೀತಿಯಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ, ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಮರು ಮೈತ್ರಿಯ ಮಾತನಾಡುತ್ತಿದ್ದಾರೆ. ಹೋದಲ್ಲೆಲ್ಲಾ, ಬಿಜೆಪಿ ಸೋಲಲಿದೆ ಎನ್ನುತ್ತಿದ್ದಾರೆ. ಇವರ ಆಟಕ್ಕೆ ಫಲಿತಾಂಶವೇ ಉತ್ತರ ನೀಡಲಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹೇಳುವುದೆಲ್ಲಾ ಸುಳ್ಳಾಗುತ್ತದೆ.   ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದರು. ಆದರೆ, ಇವರ ಪಕ್ಷವೇ ಅವರನ್ನು ಸಿ.ಎಂ ಮಾಡಿತು. ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಗೆದ್ದರೆ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ?’ ಎಂದು ಪ್ರಶ್ನಿಸಿದರು.

ಸರ್ಕಾರ ಸುಭದ್ರ: ‘ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುವುದು ನಿಚ್ಚಳ. ಹೀಗಿರುವಾಗಿ ಕಾಂಗ್ರೆಸ್ ಮತ್ತು ಜೆಡಿಸ್ ಮರು ಮೈತ್ರಿಯನ್ನಾದರೂ ಮಾಡಿಕೊಳ್ಳಲಿ, ಜವಳವಾದರೂ ಆಡಲಿ. ಒಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿರಲಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

‘ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಬೀಳಲು ಅವರೇ ಕಾರಣ ಎಂದು ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ನಿತ್ಯ ಹೇಳುತ್ತಿದ್ದಾರೆ. ಹೀಗಿರುವಾಗ, ಅವರು ಹೇಗೆ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಾರೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆಯನ್ನು 120ರಿಂದ 78ಕ್ಕೆ, ಲೋಕಸಭಾ ಸದಸ್ಯರ ಬಲವನ್ನು 9ರಿಂದ ಕೇವಲ 1ಕ್ಕೆ ಇಳಿಸಿದ ಹಾಗೂ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು