ಗುರುವಾರ , ಸೆಪ್ಟೆಂಬರ್ 19, 2019
22 °C

ಆರ್ಥಿಕ ಹಿಂಜರಿತ ಕೇವಲ ತಾತ್ಕಾಲಿಕ; ಸಚಿವ ಶೆಟ್ಟರ್‌

Published:
Updated:
Prajavani

ಹುಬ್ಬಳ್ಳಿ: ‘ಆರ್ಥಿಕ ಹಿಂಜರಿತ ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಜಗತ್ತಿನಾದ್ಯಂತ ಆರಂಭವಾಗಿದೆ. ಆದರೆ, ಇದು ಕೇವಲ ತಾತ್ಕಾಲಿಕ. ಹಿಂಜರಿತ ತಡೆಯಲು ಕೇಂದ್ರ ಸರ್ಕಾರ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ’ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆಯೋಜಿಸಿದ್ದ ಗ್ರಾಮೀಣ ಕೈಗಾರಿಕಾ ಸಂಘಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕ ಹಿಂಜರಿತದಿಂದ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹದಿನೈದು ದಿನಗಳ ಒಳಗೆ ವರದಿ ಕೈ ಸೇರಲಿದ್ದು, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಲಾಗುವುದು’ ಎಂದರು. 

‘ಕೈಗಾರಿಕೋದ್ಯಮ ಎಂದರೆ ಬೆಂಗಳೂರನ್ನು ಮಾತ್ರ ಕೇಂದ್ರೀಕರಿಸಲಾಗುತ್ತದೆ. ಎರಡನೇ ಹಂತದ ಸಿಟಿಗಳಲ್ಲಿ ಸಹ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು. ಉತ್ತರ ಕರ್ನಾಟಕ ಭಾಗದ ನಗರಗಳು ಸಹ ಕೈಗಾರಿಕೋದ್ಯಮದಲ್ಲಿ ಪ್ರಗತಿ ಸಾಧಿಸಬೇಕು. ಇವೆನ್ನೆಲ್ಲ ಗಮನದಲ್ಲಿಟ್ಟುಕೊಂಡು ನೂತನ ಕೈಗಾರಿಕಾ ನೀತಿ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿನ ಕೈಗಾರಿಕೋದ್ಯಮದ ಕುಂದು–ಕೊರತೆ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ್‌, ‘ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳು ಸ್ಥಾಪನೆ ಆಗುತ್ತಿಲ್ಲ. ಇರುವ ಒಂದೆರಡು ಕೈಗಾರಿಕೆಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ’ ಎಂದರು.

‘ಸಣ್ಣ ಕೈಗಾರಿಕೆಗಳಲ್ಲಿ ಶೇ 50ರಷ್ಟು ಕೈಗಾರಿಕೆಗಳು ಬಂದ್ ಆಗಿವೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ನೀತಿ ರೂಪಿಸಬೇಕು. ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ದೊರೆಯುವಂತಾಗಬೇಕು’ ಎಂದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌. ರಾಜು, ಗೌರವ ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಜಂಟಿ ಕಾರ್ಯದರ್ಶಿ ಟಿ.ಎಂ. ವಿಶ್ವನಾಥ ರೆಡ್ಡಿ, ಖಜಾಂಚಿ ಎಸ್‌.ಎಂ. ಹುಸೇನ್‌, ಪ್ರವೀಣ ಹೆಬಸೂರ ಇದ್ದರು.

Post Comments (+)