ಶನಿವಾರ, ಡಿಸೆಂಬರ್ 7, 2019
22 °C
ಕರ್ಕಿ ಸಾಹಿತ್ಯ ವೇದಿಕೆ ಕಾರ್ಯಕ್ರಮ, ಕಥಾಕಮ್ಮಟ

22ರಂದು ಏಳು ಪುಸ್ತಕಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾಹಿತ್ಯ ಭಂಡಾರದ ಮ. ಅನಂತಮೂರ್ತಿ ಅವರ 21ನೇ ಪುಣ್ಯತಿಥಿ ಅಂಗವಾಗಿ ಡಾ.ಡಿ.ಎಸ್‌. ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಸೆ. 22ರಂದು ಸಂಜೆ 5.30ಕ್ಕೆ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏಳು ಪುಸ್ತಕಗಳು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಶತಾವಧಾನಿ ಆರ್‌. ಗಣೇಶ ಅವರ ನಿತ್ಯನೀತಿ, ಎ. ನರಸಿಂಹ ಭಟ್‌ ಅವರ ಮರುಳಮುನಿಯನ ಕಗ್ಗ, ವೀಪಿ ಹೆಗಡೆ (ವೈಶಾಲಿ) ಅವರ ಮುಂಜಾನೆ ಮಾತು, ಗುರುಮರಿ ಹಾಗೂ ‘ಚಾಣ’ಕ್ಯ, ಪ್ರೇಮಶೇಖರ ಅವರ ಯುದ್ಧ ಮತ್ತು ಮೋದಿ ಮೋಡಿ ಬಿಡುಗಡೆಯಾಗಲಿರುವ ಪುಸ್ತಕಗಳು.

ಕರ್ಕಿ ವೇದಿಕೆಯ ಕಾರ್ಯದರ್ಶಿ ಎಂ.ಎ. ಸುಬ್ರಹ್ಮಣ್ಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅಂದು ಪುಸ್ತಕ ಬಿಡುಗಡೆ ಜೊತೆಗೆ ಮುಧೋಳ ಸರ್ವೋದಯ ಪುಸ್ತಕಾಲಯದ ಶಂಕರ ಉತ್ತೂರ ಅವರಿಗೆ ಗೌರವಾರ್ಪಣೆ ಮತ್ತು ಸಂವಾದ ಜರುಗಲಿದೆ’ ಎಂದರು.

ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ವೀಣಾ ಬನ್ನಂಜೆ ಅವರ ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು ಕುರಿತು ಲೇಖಕರಾದ ಚಂದ್ರಶೇಖರ ವಸ್ತ್ರದ ಮತ್ತು ಪ್ರೇಮಶೇಖರ ಸಂವಾದ ನಡೆಸಲಿದ್ದಾರೆ. ಸತ್ಯಕಾಮರಿಗೆ ನೂರರ ಸಂಭ್ರಮದ ಬಗ್ಗೆ ಲೇಖಕಿ ವೀಣಾ ಬನ್ನಂಜೆ ಸಂವಾದ ಮಾಡಲಿದ್ದಾರೆ.

ಕಥಾಕಮ್ಮಟ:

ಬರವಣಿಗೆಯ ಆಸಕ್ತಿ ಇರುವ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಅಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ತನಕ ಕರ್ಕಿ ಸಾಹಿತ್ಯ ವೇದಿಕೆ ಕಥಾಕಮ್ಮಟ ಹಮ್ಮಿಕೊಂಡಿದೆ.

‘ಇತ್ತೀಚಿನ ವರ್ಷಗಳಲ್ಲಿ ಸಂವಾದಗಳು ಕಡಿಮೆಯಾಗುತ್ತಿವೆ. ಈಗಿನ ಯುವಕರಲ್ಲಿ ಬರೆಯುವ ಆಸಕ್ತಿ ಸಾಕಷ್ಟಿದೆ. ಆದರೆ, ಆಳವಾದ ಅಧ್ಯಯನವಿಲ್ಲದ ಕಾರಣ ಬರವಣಿಗೆ ಗಟ್ಟಿಯಾಗಿಲ್ಲ. ಕಮ್ಮಟದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ಚಂದ್ರಶೇಖರ ವಸ್ತ್ರದ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಸಾಹಿತಿ ಪ್ರೇಮಶೇಖರ ಅವರು ಕಥಾ ರಚನೆಯ ಸಂದರ್ಭದ ವಸ್ತು, ನಿರೂಪಣಾ ತಂತ್ರ, ಅಧ್ಯಯನ, ಪ್ರವಾಸ, ಅನುಭವಗಳ ಮೂಲಕ ಬರೆಯುವ ಕಥೆಗಳಿಗೆ ಬೇಕಾದ ತಯಾರಿ ಮತ್ತು ಶಿಸ್ತಿನ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ’ ಎಂದು ಸುಬ್ರಮಣ್ಯ ಹೇಳಿದರು. ವೇದಿಕೆಯ ಅಧ್ಯಕ್ಷ ಎನ್‌.ಬಿ. ರಾಮಾಪುರ ಇದ್ದರು.

ಪಾಲ್ಗೊಳ್ಳುವ ಆಸಕ್ತರು ಪಿ.ಸಿ. ಜಾಬಿನ ಕಾಲೇಜಿನ ಗ್ರಂಥಪಾಲಕ ಬಿ.ಎಸ್‌. ಮಾಳವಾಡ ಮೊ. 9448354805 ಹಾಗೂ ಎಂ.ಎ. ಸುಬ್ರಹ್ಮಣ್ಯ ಅವರ ಮೊ. 9448110034 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)