ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಸಂವಿಧಾನ ಸಮರ್ಪಿಸಿಕೊಂಡ ದಿನದ ಸಂಭ್ರಮ’

ಗಣರಾಜ್ಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು, ಆಕರ್ಷಕ ಪಥಸಂಚಲನ
Last Updated 27 ಜನವರಿ 2023, 5:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿಕೊಂಡ ದಿನವಾದ ಗಣರಾಜ್ಯೋತ್ಸವವನ್ನು ನಗರದ ವಿವಿಧೆಡೆ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ದೇಶಪ್ರೇಮ ಉಕ್ಕಿಸುವ ವಿದ್ಯಾರ್ಥಿಗಳ ನೃತ್ಯ, ಗಾಯನ, ಪಥ ಸಂಚಲನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಮೆರಗು ತಂದವು.

ಮಹಾನಗರ ಪಾಲಿಕೆ, ನಗರ ಮತ್ತು ಗ್ರಾಮೀಣ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ವಾಯವ್ಯ ಸಾರಿಗೆ ಸಂಸ್ಥೆ, ನೈರುತ್ಯ ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳು, ಶಾಲಾ–ಕಾಲೇಜುಗಳು, ಸಂಘ–ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಗಣರಾಜ್ಯೋತ್ಸವವನ್ನು ಆಚರಿಸಿ, ಸಂವಿಧಾನವನ್ನು ಸಮರ್ಪಿಸಿಕೊಂಡ ಕ್ಷಣ ಹಾಗೂ ಅದಕ್ಕಾಗಿ ಶ್ರಮಿಸಿದ ಮಹನೀಯರನ್ನು ನೆನೆದವು.

ಆಶಯ ಈಡೇರಿಸೋಣ: ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ‘ಶಾಂತಿ, ಸೌಹಾರ್ದ, ಸಹಿಷ್ಣುತೆ ಹಾಗೂ ಸಮಾನತೆಯ ಮೌಲ್ಯಗಳ ಅಡಕವಾಗಿರುವ ಸಂವಿಧಾನದ ಆಶಯ ಈಡೇ ರಿಸಲು ಕಟಿಬದ್ಧರಾಗಬೇಕು’ ಎಂದರು.

ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ನಜೀರ್ ಅಹ್ಮದ್ ಹೊನ್ಯಾಳ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೆಹರೂ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಧ್ವಜಾರೋಹಣ ನೆರವೇರಿಸಿದ ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಮಾತನಾಡಿದರು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಹೆಚ್ಚುವರಿ ತಹಶೀಲ್ದಾರ್ ಶಿವಾನಂದ ಹೆಬ್ಬಳ್ಳಿ, ಜಿ.ವಿ. ಪಾಟೀಲ ಹಾಗೂ ಅಧಿಕಾರಿಗಳು ಇದ್ದರು.

ಜವಾಬ್ದಾರಿ ಅರಿಯೋಣ: ಗ್ರಾಮೀಣ ತಾಲ್ಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ನಾಶಿ, ‘ಸರ್ಕಾರಿ ನೌಕರರು ಜವಾ
ಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು’ ಎಂದರು.

ಗ್ರಾಮ್ ಒನ್ ಫ್ರಾಂಚೈಸಿ ಇಂಗಳಹಳ್ಳಿ ಗ್ರಾಮದ ನಾರಾಯಣ ಹಂಚಾಟೆ ಅವರನ್ನು ಸನ್ಮಾನಿಸಲಾಯಿತು. ಅಧಿಕಾರಿಗಳು ಇದ್ದರು.

ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಪೊಲೀಸ್ ವಾದ್ಯವೃಂದ ಸೇರಿದಂತೆ ವಿವಿಧ ಶಾಲೆಗಳ ತಂಡಗಳ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ತಾಲ್ಲೂಕು ಪಂಚಾಯಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಇಒ ಗಂಗಾಧರ ಕಂದಕೂರ ಧ್ವಜಾರೋಹಣ ನೆರವೇರಿಸಿದರು.

ಆರ್ಥಿಕತೆಯಲ್ಲಿ ಅಗ್ರಸ್ಥಾನ ಶೀಘ್ರ: ಶೆಟ್ಟರ್

ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಗದೀಶ್ ಶೆಟ್ಟರ್, ‘ಆರ್ಥಿಕತೆಯಲ್ಲಿ ವಿಶ್ವದಲ್ಲೇ ಐದನೇ ಸ್ಥಾನದಲ್ಲಿರುವ ಭಾರತ, ಮುಂದಿನ ವರ್ಷಗಳಲ್ಲಿ ಅಗ್ರಸ್ಥಾನಕ್ಕೇರಲಿದೆ. ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ರಾಜ್ಯದ ಕಳಸಾ– ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶೀಘ್ರ ಕಾಮಗಾರಿಗೆ ಚಾಲನೆ ಸಿಗಲಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು. ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದರು.

‘ದೇಶದ ಸಂವಿಧಾನ ಗೌರವಿಸಿ’

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ‘ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲ ಆಶಯಗಳಂತೆ ಕರ್ತವ್ಯ ನಿರ್ವಹಿಸಬೇಕು’ ಎಂದರು.

ಅತ್ಯುತ್ತಮ ಸೇವೆಗಾಗಿ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗದ ಹಳಿಯಾಳದ ಚಾಲಕ ಎಚ್‌.ಬಿ. ಕದರಳ್ಳಿ, ಬೆಳಗಾವಿ ವಿಭಾಗದ ರಾಮದುರ್ಗದ ನಿರ್ವಾಹಕ ಪಿ.ಎಚ್. ಕಾಟಕೋಳ, ಬೆಳಗಾವಿಯ ಕಿರಿಯ ಸಹಾಯಕ ಎನ್‌.ಐ. ತಾಳಿಕೋಟೆ ಹಾಗೂ ಚಿಕ್ಕೋಡಿ ವಿಭಾಗದ ನಿಪ್ಪಾಣಿಯ ಕುಶಲಕರ್ಮಿ ಪಿ.ಡಿ. ಕಾಂಬಳೆ ಅವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿರಸಿ ವಿಭಾಗದ ಕುಮಟಾದ ಕರ್ನಾಟಕ ಸಾರಿಗೆ ನಿಗಮದ ಕಾನ್‌ಸ್ಟೆಬಲ್ ಪ್ರಭಾಕರ ಭಂಡಾರಿ ಗೈರಾಗಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT