ಭಾನುವಾರ, ಸೆಪ್ಟೆಂಬರ್ 22, 2019
22 °C
ದೇಶದ ಆರ್ಥಿಕ ಸ್ಥಿತಿ ಕುಸಿತ ಆರೋಪ: ಸಂಘಟನೆಗಳ ಪ್ರತಿಭಟನೆ

ಕನಿಷ್ಠ ವೇತನ ನೀಡಲು ಆಗ್ರಹ

Published:
Updated:
Prajavani

ಹುಬ್ಬಳ್ಳಿ: ಅಸಂಘಟಿತ, ಸಂಘಟಿತ ಮತ್ತು ಯೋಜನಾ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹ 18 ಸಾವಿರ ವೇತನ ನೀಡಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ಮತ್ತು ಕರ್ನಾಟಕ ಪ್ರಾಂತ ರೈತ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಕೇಂದ್ರ ಅನುಸರಿಸುತ್ತಿರುವ ಆಕ್ರಮಣಕಾರಿ ಆರ್ಥಿಕ ನೀತಿಯಿಂದಾಗಿ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ದುಡಿಯುವ ಜನರನ್ನು ಕಡೆಗಣಿಸಿ ಕಾರ್ಪೊರೇಟ್‌ ಬಂಡವಾಳದ ಹಿತ ಕಾಪಾಡುತ್ತಿರುವುದರಿಂದ ಸಂಕಷ್ಟ ಎದುರಾಗಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರಗಳಲ್ಲಿ ಖಾಲಿಇರುವ ಉದ್ಯೋಗಗಳಿಗೆ ನೇಮಕ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ನೀತಿ ಕೈಬಿಡಬೇಕು, ಅಂಗನವಾಡಿ, ಬಿಸಿಯೂಟ, ಆಶಾ ಹೀಗೆ ವಿವಿಧ ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

’ನೆರೆ ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿರುವ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು. ಕೃಷಿ ಕೂಲಿಕಾರರು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷ ಬಿ.ಐ. ಈಳಿಗೇರ, ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಎಸ್‌. ಸೊಪ್ಪಿನ, ಪ್ರಧಾನ ಕಾರ್ಯದರ್ಶಿ ಕೆ.ಎಚ್‌. ಪಾಟೀಲ, ಪ್ರಮುಖರಾದ ಅಮೃತ ಇಜಾರಿ, ಶಿವಣ್ಣ ಹುಬ್ಬಳ್ಳಿ, ಸುರೇಶಗೌಡ ಪಾಟೀಲ, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಲಲಿತಾ ಹಿರೇಮಠ, ಚನ್ನಮ್ಮ ಹೆಬ್ಬಳ್ಳಿ, ಕತಾಲಸಾಬ ಮುಲ್ಲಾ, ಹುಸೇನಸಾಬ್ ನದಾಫ್‌, ಆಯೂಬ್‌ಖಾನ್‌ ಕಲೆಗಾರ, ಮುತ್ತು ಚಲವಾದಿ, ರಾಜು ಕೊಟಗಿ ಮತ್ತು ಮಂಜುನಾಥ ಹುಜರಾತಿ ಇದ್ದರು.

Post Comments (+)