ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ಸರ್ವಪಕ್ಷಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಿ: ಎಚ್‌.ಕೆ. ಪಾ

Last Updated 25 ಡಿಸೆಂಬರ್ 2019, 8:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ದೇಶದ ಜನರ ಭಾವನೆಗೆ ಧಕ್ಕೆ ತಂದಿದೆ. ಹಾಗಾಗಿ, ಕೇಂದ್ರ ಸರ್ಕಾರ ಈ ಬಗ್ಗೆ ಸರ್ವಪಕ್ಷಗಳೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಆ ಮೂಲಕ, ದೇಶದ ಜನರ ಭಾವನೆಗೆ ಗೌರವ ಕೊಡಬೇಕು’ ಎಂದು ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

‘ಜಾತಿ ಅಥವಾ ಧರ್ಮದ ಆಧಾರದ ಮೇಲೆ, ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕಾಯ್ದೆಗಳನ್ನು ರೂಪಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಹಾಗಾಗಿಯೇ, ದೇಶದಾದ್ಯಂತ ಜನರು ಜಾತಿ ಮತ್ತು ಧರ್ಮವನ್ನು ಮೀರಿ ಹೋರಾಟದಲ್ಲಿ ಭಾಗವಹಿಸಿ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಹುಮತ ಇದೆ ಎಂದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ಕಾಯ್ದೆ ರೂಪಿಸುವುದು ಸಲ್ಲ. ಪೌರತ್ವ ಕಾಯ್ದೆ ರಾಷ್ಟ್ರೀಯ ವಿಚಾರವಾಗಿರುವುದರಿಂದ ಎಲ್ಲರ ಒಪ್ಪಿಗೆ ಅಗತ್ಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜಾತ್ಯತೀತವಾಗಿ ಯೋಚಿಸಬೇಕು. ಸರ್ಕಾರದ ಭಾಗವಾಗಿರುವವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ, ಜನರ ಭಾವನೆಯನ್ನು ಘಾಸಿಗೊಳಿಸಬಾರದು’ ಎಂದು ಸಲಹೆ ನೀಡಿದರು.

ಸರ್ಕಾರದಿಂದಲೇ ಅಶಾಂತಿ:‘ಸರ್ಕಾರವೇರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಂಗಳೂರಿನಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆಗೆ ಸಂಬಂಧಿಸಿದಂತೆ, ವಿಡಿಯೊ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವ ಔಚಿತ್ಯವಾದರೂ ಏನಿತ್ತು? ಇದರಿಂದಾಗುವ ಪರಿಣಾಮ ಏನು?’ ಎಂದು ಪ್ರಶ್ನಿಸಿದರು.

‘ಪ್ರತಿಭಟನೆಗಾಗಿ ಕೇರಳದಿಂದ ಜನ ಬಂದಿದ್ದರು, ವಾಹನದಲ್ಲಿ ಕಲ್ಲುಗಳನ್ನು ತಂದಿದ್ದರು ಎಂದು ಸರ್ಕಾರವೇ ಹೇಳುತ್ತಿದೆ. ಹಾಗಾದರೆ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಶಾಂತಿಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತಲ್ಲವೆ?’ ಎಂದ ಅವರು, ‘ಘಟನೆಯ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ಸರ್ಕಾರ ಬಿಡುಗಡೆ ಮಾಡಿರುವ ವಿಡಿಯೊಗಳನ್ನು ತನಿಖೆ ನಡೆಸುವವರಿಗೆ ನೀಡಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಲಿ’ ಎಂದರು.

‘ಠಾಕ್ರೆ ಹೇಳಿಕೆ ವಿಭಜನಕಾರಿ’
‘ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಕರ್ನಾಟಕದ ಆಕ್ರಮಿತ ಪ್ರದೇಶಗಳು’ ಎಂಬ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆ ವಿಭಜನಕಾರಿಯಾಗಿದೆ’ ಎಂದು ಎಚ್‌.ಕೆ. ಪಾಟೀಲ ಹೇಳಿದರು.

‘ಈಗಾಗಲೇ ಇತ್ಯರ್ಥಗೊಂಡಿರುವ ಗಡಿ ವಿವಾದವನ್ನು ರಾಜಕೀಯ ಕಾರಣಕ್ಕಾಗಿ ಬಡಿದೆಬ್ಬಿಸಲು ಠಾಕ್ರೆ ಮುಂದಾಗಿದ್ದಾರೆ. ಅದಕ್ಕಾಗಿ, ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ’ ಎಂದು ದೂರಿದರು.

‘ಠಾಕ್ರೆ ಅವರ ವಿವಾದಾತ್ಮಕ ಹೇಳಿಕೆ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಅನೇಕ ಮಹನೀಯರು ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದಿದ್ದಾರೆ. ವಿವಾದ ಇತ್ಯರ್ಥಕ್ಕೆ ನೇಮಿಸಿದ್ದ ಸಮಿತಿಯೂ ಅದನ್ನು ಸ್ಪಷ್ಟಪಡಿಸಿದೆ. ಇಂತಹ ಮಾತುಗಳನ್ನಾಡುವುದಕ್ಕೂ ಮುಂಚೆ, ಠಾಕ್ರೆ ಅವರು ನಾವಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಎಂಬುದನ್ನು ಅರಿಯಬೇಕು’ ಎಂದರು.

‘ಮುಗಿದು ಹೋದ ವಿವಾದವನ್ನು ಪಕ್ಕದ ರಾಜ್ಯದವರು ಕೆದಕಿದರೂ ನಮ್ಮ ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು ಮಾತ್ರ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ನಾನು ಸಿ.ಎಂ.ಗೆ ಪತ್ರ ಬರೆದು ಎಚ್ಚರಿಸಿದ್ದೇನೆ. ಆದರೂ, ಯಾವುದೇ ಪ್ರತಿಕ್ರಿಯೆ ಇಲ್ಲ. ಇನ್ನಾದರೂ, ಸರ್ವಪಕ್ಷಗಳ ಸಭೆ ಕರೆದು, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT