ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಗಿಯಲ್ಲೇ ರೆಸ್ಟೋರೆಂಟ್‌, ಚಿತ್ರಮಂದಿರ

ಹುಬ್ಬಳ್ಳಿಯಲ್ಲಿ ರೈಲ್ವೆ ವಸ್ತು ಸಂಗ್ರಹಾಲಯ: ಮುಂದಿನ ತಿಂಗಳು ಉದ್ಘಾಟನೆ
Last Updated 29 ನವೆಂಬರ್ 2019, 15:27 IST
ಅಕ್ಷರ ಗಾತ್ರ

ಧಾರವಾಡ: ನಿಂತಲ್ಲೇ ನಿಂತಿರುವ ರೈಲ್ವೆ ಬೋಗಿಯಲ್ಲಿ ಕುಳಿತು ರುಚಿ, ರುಚಿಯಾದ ತಿಂಡಿ ತಿನ್ನಬೇಕೇ? ಬೋಗಿಯಲ್ಲಿ ಕುಳಿತು ಕಿರು ಸಿನಿಮಾ ವೀಕ್ಷಿಸಬೇಕೇ? ನ್ಯಾರೊ ಗೇಜ್‌, ಮೀಟರ್‌ ಗೇಜ್‌ಗಳು ಹೇಗಿರುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕೇ?

ಈ ಎಲ್ಲ ಸೌಲಭ್ಯಗಳು ಒಂದೇ ಕಡೆ ದೊರೆಯುವಂತೆ ಮಾಡಲು ಹಾಗೂ ಭಾರತದ ರೈಲ್ವೆಯ ಸಮಗ್ರ ಇತಿಹಾಸ ತಿಳಿಸಲು ನೈರುತ್ಯ ರೈಲ್ವೆ ಗದಗ ರಸ್ತೆಗೆ ಹೊಂದಿಕೊಂಡ ನಗರದ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ ಪಕ್ಕದಲ್ಲಿ ರೈಲ್ವೆ ವಸ್ತು ಸಂಗ್ರಹಾಲಯ ನಿರ್ಮಿಸುತ್ತಿದೆ.

ರೆಸ್ಟೋರೆಂಟ್‌ ಹಾಗೂ ಕಿರು ಚಿತ್ರಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ರೆಸ್ಟೋರೆಂಟ್‌ ನಿರ್ಮಾಣ ಕೆಲಸ ಚುರುಕು ಪಡೆದುಕೊಂಡಿದ್ದು, ಡಿಸೆಂಬರ್ ಅಂತ್ಯದಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ.

1853ರಲ್ಲಿ ಭಾರತದಲ್ಲಿ ರೈಲಿನ ಸೌಲಭ್ಯ ಆರಂಭವಾದ ಬಳಿಕ ಇದುವರೆಗೂ ಆದ ತಾಂತ್ರಿಕ ಹಾಗೂ ತಾಂತ್ರಿಕೇತರ ಬದಲಾವಣೆಗಳು, ಸ್ಟೇಷನ್‌ ಮಾಸ್ಟರ್‌ಗಳು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರೀತಿ, ಸಿಗ್ನಲ್‌ ತೋರಿಸುವ ವಿಧಾನದಲ್ಲಿ ಬಂದ ಹೊಸತನಗಳು, ಲೋಕೊ ಪೈಲಟ್‌ಗಳು ಕೆಲಸ ಮಾಡುತ್ತಿದ್ದ ರೀತಿ, ಸಮವಸ್ತ್ರ ಹೀಗೆ ಎಲ್ಲ ವಿಷಯಗಳ ಬಗ್ಗೆ ವಸ್ತು ಸಂಗ್ರಹಾಲಯದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಕೆಲ ಅಪರೂಪದ ವಸ್ತುಗಳನ್ನು ನೋಡಲು ಅವಕಾಶವೂ ಲಭಿಸಲಿದೆ. ವಸ್ತು ಸಂಗ್ರಹಾಲಯದ ಕಟ್ಟಡದ ಒಳಗೆ ರೈಲ್ವೆಗೆ ಸಂಬಂಧಿಸಿದ ಪುಸ್ತಕಗಳು, ಛಾಯಾಚಿತ್ರಗಳು, ಉಪಕರಣಗಳು ಇರಲಿವೆ. ರೈಲ್ವೆಯ ಪ್ರಮುಖ ಅಧಿಕಾರಿಗಳು, ಸಾಧಕರ ಬಗ್ಗೆಯೂ ಮಾಹಿತಿ ಸಿಗಲಿದೆ.

ನೈರುತ್ಯ ರೈಲ್ವೆ ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಇದನ್ನು ನಿರ್ಮಿಸುತ್ತಿದೆ. ಹೀಗಾಗಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ.

ರೈಲ್ವೆ ಇಲಾಖೆ ಎರಡು ಹಳೇ ಕಟ್ಟಡಗಳನ್ನೇ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುತ್ತಿದೆ. ಈ ಕಟ್ಟಡಗಳ ಮುಂದೆ ಇರುವ ವಿಶಾಲ ಜಾಗದಲ್ಲಿಟ್ಟಿರುವ ಬೋಗಿಗಳಲ್ಲಿ ರೆಸ್ಟೋರೆಂಟ್‌, ಚಿತ್ರಮಂದಿರ ನಿರ್ಮಿಸಲಾಗುತ್ತಿದೆ. ಬೇರೆ ರೈಲ್ವೆ ವಲಯಗಳಿಂದಲೂ ಹಳೇ ಸಾಮಗ್ರಿಗಳನ್ನು ತರಿಸಲಾಗುತ್ತಿದೆ.

‘ವಸ್ತು ಸಂಗ್ರಹಾಲಯ ವೀಕ್ಷಿಸಲು ಬರುವ ಜನರಿಗೆ ಅಲ್ಲಿಯೇ ಕ್ಯಾಂಟೀನ್‌ ವ್ಯವಸ್ಥೆ ಮಾಡಲಾಗುತ್ತಿದೆ. ಬೋಗಿಯಲ್ಲಿ ನಿರ್ಮಿಸುವ ರೆಸ್ಟೋರೆಂಟ್‌ನಲ್ಲಿ ತಿಂಡಿ ತಿನ್ನಲು ಸೌಲಭ್ಯವಿರುತ್ತದೆ. ಚಿತ್ರಮಂದಿರದಲ್ಲಿ 10ರಿಂದ 15 ನಿಮಿಷಗಳ ಕಾಲ ರೈಲ್ವೆಗೆ ಸಂಬಂಧಿಸಿದ ಕಿರುಚಿತ್ರ ತೋರಿಸಲಾಗುತ್ತದೆ. ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವವರಿಗೆ ಭಾರತದಲ್ಲಿ ರೈಲ್ವೆ ಬೆಳೆದು ಬಂದ ಹಾದಿಯ ಬಗ್ಗೆ ಸಮಗ್ರ ಮಾಹಿತಿ ಸಿಗುವಂತಾಗಬೇಕು ಎನ್ನುವ ಉದ್ದೇಶ ನಮ್ಮದು. ವಸ್ತು ಸಂಗ್ರಹಾಲಯವನ್ನು ಪ್ರವಾಸಿ ತಾಣ ಮಾಡುವ ಗುರಿ ಹೊಂದಲಾಗಿದೆ’ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳೇ ವಸ್ತು ಸಂಗ್ರಹ: ಸಿಗದ ಸ್ಪಂದನೆ

ವಸ್ತು ಸಂಗ್ರಹಾಲಯದಲ್ಲಿದಲ್ಲಿಡಲು ರೈಲ್ವೆಗೆ ಸಂಬಂಧಿಸಿದ ಹಳೇ ಛಾಯಾಚಿತ್ರ, ಪುಸ್ತಕ, ವಿಡಿಯೊಗಳನ್ನು ನೀಡಬಹುದು ಎಂದು ಇಲಾಖೆ ಮಾಡಿಕೊಂಡಿದ್ದ ಮನವಿಗೆ ಸ್ಪಂದನೆ ಸಿಕ್ಕಿಲ್ಲ.

‘ಹಳೇ ವಸ್ತುಗಳಿದ್ದರೆ ನೀಡುವಂತೆ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದೇವೆ. ಇದುವರೆಗೂ ಯಾರೂ ವಸ್ತುಗಳನ್ನು ಕೊಟ್ಟಿಲ್ಲ. ವಸ್ತು ಸಂಗ್ರಹಾಲಯ ನಿರ್ಮಾಣ ಕಾರ್ಯ ಮುಗಿಯುವುದರೊಳಗೆ ವಸ್ತುಗಳನ್ನು ನೀಡಿದರೆ ಅವುಗಳನ್ನು ಸಂಗ್ರಹಾಲಯದಲ್ಲಿ ಇಡಲಾಗುವುದು. ಬಳಿಕವೂ ಹಂತ, ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ವಿಜಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT