ಗುರುವಾರ , ಆಗಸ್ಟ್ 11, 2022
23 °C
ಮುಂದುವರಿದ ಸಾರಿಗೆ ನೌಕರರ ಮುಷ್ಕರ, ಎರಡನೇ ದಿನವೂ ರಸ್ತೆಗಿಳಿಯದ ಬಸ್‌

₹ 1 ಕೋಟಿಗೂ ಹೆಚ್ಚು ಆದಾಯ ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎನ್ನುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿರುವ ಸಾರಿಗೆ ನೌಕರರ ಮುಷ್ಕರ ಎರಡನೇ ದಿನವಾದ ಶನಿವಾರವೂ ಮುಂದುವರಿಯಿತು.

ಹೀಗಾಗಿ ನಗರದ ಹೊಸೂರು, ಹಳೇ ಬಸ್‌ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಬೇರೆ ಊರುಗಳಿಗೆ ಹೋಗಲಾಗದೆ ಪರದಾಡಿದ ಚಿತ್ರಣ ಕಂಡುಬಂತು. ಎರಡು ದಿನ ಸಂಚಾರ ಸ್ಥಗಿತಗೊಂಡ ಕಾರಣ ನಗರ ಸಾರಿಗೆ ಸೇರಿದಂತೆ ಒಟ್ಟು ₹1 ಕೋಟಿಗೂ ಹೆಚ್ಚು ಆದಾಯ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದರು.

‘ನಿತ್ಯ ಹುಬ್ಬಳ್ಳಿಯಿಂದ 375 ಬಸ್‌ಗಳು ಸಂಚರಿಸುತ್ತಿದ್ದವು. ದಿನಕ್ಕೆ ಕನಿಷ್ಠ ₹40ರಿಂದ ₹45 ಲಕ್ಷ ಆದಾಯ ಬರುತ್ತಿತ್ತು. ಶುಕ್ರವಾರ ಒಂದಷ್ಟು ಹಣ ಸಂಗ್ರಹವಾಗಿದೆ. ಹೀಗಾಗಿ ಎರಡೂ ದಿನ ಸೇರಿ ₹80 ಲಕ್ಷ ಆದಾಯ ಖೋತಾ ಆಗಿದೆ’ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವಳಿ ನಗರಗಳ ನಡುವೆ ನಿತ್ಯ 80 ಬಿಆರ್‌ಟಿಎಸ್‌ ಬಸ್‌ಗಳು ಮತ್ತು 180 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಬಾರದ ಕಾರಣ ಎರಡೂ ದಿನ ಸೇರಿ ಅಂದಾಜು ₹30 ಲಕ್ಷ ಆದಾಯ ಬಂದಿಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಮಾಹಿತಿ ನೀಡಿದರು.

ಪ್ರಯಾಣಿಕರ ಪರದಾಟ: ಶುಕ್ರವಾರ ದಿಢೀರ್ ಆಗಿ ಸಂಚಾರ ಸ್ಥಗಿತಗೊಳಿಸಿದ್ದ ನೌಕರರು ಡಿಪೊದಲ್ಲಿ ಬಸ್‌ ಬಿಟ್ಟು ಮನೆಗೆ ತೆರಳಿದ್ದರು. ಶನಿವಾರ ಕೂಡ ಚಾಲಕ ಹಾಗೂ ನಿರ್ವಾಹಕರು ಡಿಪೊಗಳ ಸಮೀಪವೂ ಸುಳಿಯಲಿಲ್ಲ. ಮುಷ್ಕರದ ಬಗ್ಗೆ ತಿಳಿದಿದ್ದ ಬಹಳಷ್ಟು ಜನ ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ, ಹಲವು ಪ್ರಯಾಣಿಕರು ಪರದಾಡಬೇಕಾಯಿತು.

ಬೆಂಗಳೂರಿನಿಂದ ಬಂದಿದ್ದ ಮಲ್ಲೇಶ ಎಂಬುವರು ಗದುಗಿಗೆ ಹೋಗಲು ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಕಾಯುತಿದ್ದರು. ಶುಕ್ರವಾರ ಬೆಳಿಗ್ಗೆ ದಾವಣಗೆರೆಯಲ್ಲಿದ್ದ ಅವರು ಅಲ್ಲಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿ ಹುಬ್ಬಳ್ಳಿ ತಲುಪಿದ್ದಾರೆ. ಇಲ್ಲಿ ಬಸ್‌ ಸಿಗದ ಕಾರಣ ಸಂಜೆಯಾದರೂ ನಿಲ್ದಾಣದಲ್ಲಿಯೇ ಕುಳಿತಿದ್ದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಮಲ್ಲೇಶ ‘ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾರ್ಯನಿಮಿತ್ಯ ಗದುಗಿಗೆ ಹೋಗಬೇಕಿತ್ತು. ಶನಿವಾರ ಬಸ್ ಆರಂಭವಾಗಬಹುದು ಎನ್ನುವ ನಿರೀಕ್ಷೆಯಿತ್ತು. ಇದುವರೆಗೂ ಒಂದೂ ಬಸ್‌ ಬಂದಿಲ್ಲ. ದಿಢೀರ್‌ ಎಂದು ಮುಷ್ಕರ ಮಾಡಿದರೆ ಸರ್ಕಾರಿ ಸಾರಿಗೆ ನಂಬಿಕೊಂಡ ಪ್ರಯಾಣಿಕರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಖಾಸಗಿ ವಾಹನಗಳಲ್ಲಿ ಜನ: ಅವಳಿ ನಗರಗಳ ನಡುವೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಜನ ಕಂಡುಬಂದರು. ಶಾಲಾ, ಕಾಲೇಜುಗಳಿಗೆ ಹೋಗುವ ಶಿಕ್ಷಕರು, ಕೆಲಸಗಾರರು ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಚಿತ್ರಣ ಕಂಡುಬಂತು. ಕೆಲವರು ಆಟೊಗಳ ಮೊರೆ ಹೋದರು.

ಸಿಬ್ಬಂದಿ ಫೋನ್‌ ನಾಟ್‌ ರೀಚಬಲ್‌...

ಚಾಲಕರು ಹಾಗೂ ನಿರ್ವಾಹಕರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲು ಮೇಲಧಿಕಾರಿಗಳು ಕರೆ ಮಾಡಿದರೆ ಅನೇಕರ ಫೋನ್‌ಗಳು ಸ್ವಿಚ್‌ ಆಫ್‌ ಆಗಿದ್ದವು. ಬಹುತೇಕರ ಫೋನ್‌ಗಳು ನಾಟ್‌ ರೀಚಬಲ್ ಎಂದು ಬರುತ್ತಿದ್ದವು ಎಂದು ರಾಮನಗೌಡರ ತಿಳಿಸಿದರು.

‘ನಿಷ್ಠಾವಂತ ಸಿಬ್ಬಂದಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಓಡಿಸಲು ಮುಂದೆ ಬಂದರೆ ಅವರಿಗೆ ಸಂಸ್ಥೆ ವತಿಯಿಂದ ಭದ್ರತೆ ವ್ಯವಸ್ಥೆ ಮಾಡಲಾಗುವುದು. ಕೆಲಸವಿಲ್ಲದಾಗ ವೇತನವಿಲ್ಲ ಎಂದು ಸಂಸ್ಥೆಯ ನಿಯಮವೇ ಇದೆ. ಹೀಗಾಗಿ ವೇತನ ಕೊಡುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.