ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಭಿವೃದ್ಧಿಗೆ ಪುಷ್ಟಿ ನೀಡುವ ‘ವರ್ತುಲ ರಸ್ತೆ’

ಭಾರಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ; ದಟ್ಟಣೆ ತಡೆಯಲು ಪರಿಹಾರ
Last Updated 28 ಡಿಸೆಂಬರ್ 2021, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ಮಹಾನಗರಗಳಲ್ಲಿ ಹುಬ್ಬಳ್ಳಿಯೂ ಒಂದು. ವಾಣಿಜ್ಯನಗರಿ ಖ್ಯಾತಿಯ ಈ ನಗರ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯೋದ್ಯಮ ಹಾಗೂ ವ್ಯಾಪಾರ–ವಹಿವಾಟಿನ ಕೇಂದ್ರವೂ ಹೌದು.

ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ, ಆಸ್ಪತ್ರೆಗಳು, ಕೈಗಾರಿಕೋದ್ಯಮ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿಹುಬ್ಬಳ್ಳಿ ಗಮನ ಸೆಳೆದಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವ ನಗರವು ದಶದಿಕ್ಕುಗಳಿಗೂ ಸಂಪರ್ಕ ಕಲ್ಪಿಸಲಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಇದಕ್ಕೆ ಪೂರಕವಾಗಿ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣಗೊಂಡಿದೆ. ನಗರದ ಅಭಿವೃದ್ಧಿ ಚಟುವಟಿಕೆಗಳಿಗೆ ಈ ರಸ್ತೆ ಮತ್ತಷ್ಟು ವೇಗ ನೀಡಲಿದೆ. ವರ್ತುಲ ರಸ್ತೆಯ ಆಸುಪಾಸಿನ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದೆ. ವಾಣಿಜ್ಯಿಕ ಚಟುವಟಿಕೆ, ವಸತಿ ಸೇರಿದಂತೆ ವಿವಿಧ ಉದ್ದೇಶಕ್ಕೆ ಭೂಮಿ ಖರೀದಿಸುವವರು ಇತ್ತ ದೃಷ್ಟಿ ನೆಟ್ಟಿದ್ದಾರೆ.

ಬಹುಕಾಲದ ಬೇಡಿಕೆ: ರಾಷ್ಟ್ರೀಯ ಹೆದ್ದಾರಿಗಳಾದ 4 (ಬೆಂಗಳೂರು–ಪುಣೆ), 63 (ಅಂಕೋಲಾ–ಗುತಿ) ಹಾಗೂ 218 (ವಿಜಯಪುರ– ಹುಬ್ಬಳ್ಳಿ) ನಗರವನ್ನು ಹಾದು ಹೋಗಿವೆ. ರಾಜ್ಯ ಹಾಗೂ ಅಂತರರಾಜ್ಯಗಳ ಸಾರಿಗೆ, ಸರಕು ಸಾಗಣೆ ಸೇರಿದಂತೆ ಹಲವು ಬಗೆಯ ವಾಹನಗಳು ದಿನದ 24 ತಾಸು ನಗರದ ಮಾರ್ಗವಾಗಿಯೇ ಸಂಚರಿಸುತ್ತವೆ. ಇಲ್ಲಿಯವರೆಗೆ ಈ ವಾಹನಗಳು ಅಗತ್ಯವಿಲ್ಲದಿದ್ದರೂ, ಅನಿವಾರ್ಯವಾಗಿ ನಗರದೊಳಕ್ಕೆ ಬಂದು ಹೋಗಬೇಕಿತ್ತು. ಹೀಗಾಗಿ, ಹಲವು ವರ್ಷಗಳಿಂದ ವರ್ತುಲ ರಸ್ತೆಯ ಬೇಡಿಕೆ ಈ ಭಾಗದಲ್ಲಿತ್ತು.

ಅಂತಿಮವಾಗಿ ಮೂರು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ನಾಲ್ಕು ಪಥದ ವರ್ತುಲ ರಸ್ತೆ ನಿರ್ಮಾಣಕ್ಕೆ 2017ರಲ್ಲಿ, ಅಂದಿನ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಚಾಲನೆ ಸಿಕ್ಕಿತ್ತು. 2020ರಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿ, ಕೋವಿಡ್–19 ಕಾರಣದಿಂದಾಗಿ ಒಂದು ವರ್ಷ ವಿಳಂಬವಾಯಿತು. ಇದೀಗ ರಸ್ತೆ ನಿರ್ಮಾಣ ಬಹುತೇಕ ಮುಗಿದಿದೆ.

‘ವರ್ತುಲ ರಸ್ತೆ ಪೈಕಿ ನಮ್ಮ ಪಾಲಿನ 3.8 ಕಿ.ಮೀ. ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ವಿಜಯಪುರ, ಗದಗ, ಬಾಗಲಕೋಟೆ, ಹೊಸಪೇಟೆ ಕಡೆಯಿಂದ ಬರುವ ಭಾರಿ ವಾಹನಗಳು ಸೇರಿದಂತೆ ಇತರ ವಾಹನಗಳು ಈಗಾಗಲೇ ಆ ರಸ್ತೆಯಲ್ಲಿ ಸಂಚಾರ ಆರಂಭಿಸಿವೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್
ಆರ್. ಹುರಕಡ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಯ ಉಳಿತಾಯ: ಪರ್ಯಾಯ ಮಾರ್ಗಗಳು ಇಲ್ಲದಿದ್ದರಿಂದಾಗಿ ಭಾರಿ ವಾಹನಗಳು ನಗರ ಪ್ರವೇಶಿಸಿಯೇ ಬೇರೆ ನಗರಗಳಿಗೆ ಹೋಗಬೇಕಾಗಿತ್ತು. ಇದರಿಂದಾಗಿ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಜೊತೆಗೆ, ಸಂಚಾರ ಪೊಲೀಸರ ಕೆಂಗಣ್ಣಿಗೂ ಗುರಿಯಾಗಬೇಕಿತ್ತು. ಮಿತಿಮೀರಿದ ತೂಕದ ವಾಹನಗಳಿಂದಾಗಿ ರಸ್ತೆಗಳು ಕೂಡ ಬೇಗನೆ ಹದಗೆಡುತ್ತಿದ್ದವು. ಇದೀಗ, ವಾಹನಗಳ ಚಾಲಕರಿಗೆ ತೊಂದರೆಗಳು ತಪ್ಪುವ ಜೊತೆಗೆ, ಸಮಯದ ಉಳಿತಾಯವೂ ಆಗಲಿದೆ. ರಸ್ತೆಗಳೂ ಮತ್ತಷ್ಟು ದಿನಗಳವರೆಗೆ ಬಾಳಿಕೆ ಬರಲಿವೆ.

‘ಗದಗ, ವಿಜಯಪುರ, ಬಾಗಲಕೋಟೆ, ಹೊಸಪೇಟೆ, ಕಾರವಾರ ಕಡೆಗೆ ಸರಕು ತೆಗೆದುಕೊಂಡು ಹೋಗಬೇಕಾದರೆ ಹುಬ್ಬಳ್ಳಿ ನಗರದೊಳಗೆ ಹಾದು ಹೋಗುವುದು ಚಾಲಕರಿಗೆ ದೊಡ್ಡ ಹಿಂಸೆ. ಕಿರಿದಾದ ರಸ್ತೆಗಳಲ್ಲಿ ಚಾಲನೆ ಮಾಡುವುದೇ ಸವಾಲು. ಜನರಿಂದ, ಪೊಲೀಸರಿಂದ ಬೈಸಿಕೊಳ್ಳಬೇಕು. ವರ್ತುಲ ರಸ್ತೆಯಿಂದ ಎಲ್ಲಾ ಸಮಸ್ಯೆಗಳು ತೀರಿವೆ. ನಮ್ಮ ಪಾಡಿಗೆ ನಾವು ಹೊರವಲಯದಲ್ಲೇ ಹಾದು ಹೋಗುತ್ತೇವೆ’ ಎಂದು ಹುಬ್ಬಳ್ಳಿಯ ಲಾರಿ ಚಾಲಕ ‘ಪ್ರಜಾವಾಣಿ’ಗೆ ಸುರೇಶ ಪರಶಾಪುರ ಪ್ರತಿಕ್ರಿಯಿಸಿದರು.

ಎಲ್ಲಿಂದ– ಎಲ್ಲಿಗೆ ಸಂಪರ್ಕ

ಕಾರವಾರ ರಸ್ತೆಯ (ಎನ್‌ಎಚ್‌–63) ಹೊರವಲಯದ ಅಂಚಟಗೇರಿಯಿಂದ ಆರಂಭವಾಗುವ ಹೊರವರ್ತುಲ ರಸ್ತೆಯು, ಬೆಂಗಳೂರು ರಸ್ತೆ (ಎನ್‌ಎಚ್‌–4), ಗದಗ ರಸ್ತೆ (ಎನ್‌ಎಚ್‌–63) ಹಾಗೂ ಕುಸುಗಲ್ ಬಳಿಯ ವಿಜಯಪುರ ರಸ್ತೆಗೆ(ಎನ್‌ಎಚ್– 218) ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಒಟ್ಟು 19.2 ಕಿಲೋಮೀಟರ್ ಉದ್ದವಿದೆ.

ಅಂಚಟಗೇರಿಯಿಂದ ಗದಗ ರಸ್ತೆವರೆಗಿನ 15.4 ಕಿ.ಮೀ. ಉದ್ದದ ವರ್ತುಲ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ₹1,334 ಕೋಟಿ ವೆಚ್ಚದ ಹುಬ್ಬಳ್ಳಿ–ಹೊಸಪೇಟೆ ಹೆದ್ದಾರಿ (143 ಕಿ.ಮೀ.) ಯೋಜನೆಯಡಿ ನಿರ್ಮಿಸಿದೆ. ಅಲ್ಲಿಂದ ವಿಜಯಪುರ ರಸ್ತೆವರೆಗೆ 3.8 ಕಿ.ಮೀ. ರಸ್ತೆಯನ್ನು ರಾಜ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗವು ₹97 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

‘ಮಾವನೂರ ಬಳಿ ಕೆಳ ಸೇತುವೆ ಹಾಗೂ ಗಬ್ಬೂರು ಕ್ರಾಸ್ ಸಮೀಪದ ಮೇಲ್ಸೇತುವೆ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್‌. ಪೋತದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರ ಪ್ರವೇಶಕ್ಕೆ ಸಮಯ ನಿಗದಿ’

‘ಹುಬ್ಬಳ್ಳಿಯ ಸಂಚಾರ ದಟ್ಟಣೆಗೆ ಭಾರಿ ವಾಹನಗಳ ಪ್ರವೇಶವೂ ಪ್ರಮುಖ ಕಾರಣ. ಪರ್ಯಾಯ ಮಾರ್ಗಗಳು ಇಲ್ಲದಿದ್ದರಿಂದಾಗಿ ಬೆಂಗಳೂರು, ಕಾರವಾರ, ಗದಗ, ವಿಜಯಪುರ ಹಾಗೂ ಧಾರವಾಡ ರಸ್ತೆ ಕಡೆಯಿಂದ ಬರುತ್ತಿದ್ದ ಭಾರಿ ವಾಹನಗಳು ಅನಿವಾರ್ಯವಾಗಿ ನಗರವನ್ನು ಹಾದು ಹೋಗಬೇಕಿತ್ತು. ಇದರಿಂದಾಗಿ ಚನ್ನಮ್ಮ ವೃತ್ತ ಸೇರಿದಂತೆ ನಗರದ ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತಿತ್ತು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಲಾಭೂರಾಮ್ ಹೇಳಿದರು.

‘ವರ್ತುಲ ರಸ್ತೆಯಿಂದ ಸಂಚಾರ ದಟ್ಟಣೆ ತಡೆ ಜೊತೆಗೆ, ವಾಹನಗಳ ಅನಗತ್ಯ ನಗರ ಪ್ರವೇಶ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಭಾರೀ ವಾಹನಗಳ ಸಂಚಾರವನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಅಥವಾ 9ರವರೆಗೆ ನಿಷೇಧಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ’ ಎಂದು ಅವರುತಿಳಿಸಿದರು.

ಜನವರಿಯಲ್ಲಿ ಉದ್ಘಾಟನೆ

‘ವರ್ತುಲ ರಸ್ತೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿಕೆ ಸಣ್ಣಪುಟ್ಟ ಕೆಲಸಗಳು ಭರದಿಂದ ಸಾಗುತ್ತಿವೆ. ಕೋವಿಡ್‌–19 ಕಾರಣದಿಂದಾಗಿ ಕಾಮಗಾರಿ ವಿಳಂಬವಾಯಿತು. ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದಲೇ ಜನವರಿಯಲ್ಲಿ ರಸ್ತೆ ಉದ್ಘಾಟನೆಯಾಗಲಿದೆ. ಈ ಕುರಿತು ನಮ್ಮ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಚರ್ಚಿಸಿ, ಸದ್ಯದಲ್ಲೇ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಶಾಸಕ ಜಗದೀಶ ಶೆಟ್ಟರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT