ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ವಿಸ್ತರಣೆಯಾಗದ ರಸ್ತೆ; ಸಂಚಾರ ಪ್ರಯಾಸ

ಹೊಸೂರು ಬಸ್ ನಿಲ್ದಾಣದಿಂದ ಗೋಕುಲ ರಸ್ತೆ ಸಂಪರ್ಕಿಸುವ ಮಾರ್ಗ
Last Updated 5 ಡಿಸೆಂಬರ್ 2021, 11:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹೊಸೂರಿನಲ್ಲಿರುವ ಪ್ರಾದೇಶಿಕ ಬಸ್ ನಿಲ್ದಾಣದಿಂದ ಗೋಕುಲ ರಸ್ತೆಗೆ ಹೋಗುವ ಮಾರ್ಗ ಅತ್ಯಂತ ಕಿರಿದಾಗಿದ್ದು, ಬಸ್‌ಗಳು ಸೇರಿದಂತೆ ಇತರ ವಾಹನಗಳ ಸವಾರರು ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ಹೊಸ ನ್ಯಾಯಾಲಯ ಸಂಕೀರ್ಣ ಹಾಗೂ ಬಸ್ ನಿಲ್ದಾಣ ಆರಂಭವಾದ ಬಳಿಕ, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ರಸ್ತೆ ಮಾತ್ರ ವಿಸ್ತರಣೆಯಾಗಿಲ್ಲ.

ನಿಲ್ದಾಣಕ್ಕೆ ಸ್ಥಳೀಯ ಹಾಗೂ ದೂರದ ಊರುಗಳಿಗೆ ಹೋಗುವ ಬಸ್‌ಗಳಿಗೆ ಹಳೇ ಪಿ.ಬಿ. ರಸ್ತೆ ಮತ್ತು ಹೊಸೂರು ರಸ್ತೆ ಕಡೆಯಿಂದ ಪ್ರತ್ಯೇಕವಾಗಿ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಇದೆ. ಇತ್ತ ಚನ್ನಮ್ಮ ವೃತ್ತದ ಬಳಿಯ ಬಸ್ ನಿಲ್ದಾಣ ಬಂದ್ ಆಗಿರುವುದರಿಂದ ಅರ್ಧದಷ್ಟು ಬಸ್‌ಗಳು ಹೊಸೂರು ನಿಲ್ದಾಣಕ್ಕೆ ಬಂದು ಹೋಗುವುದು ಅನಿವಾರ್ಯವಾಗಿದೆ. ಬಸ್‌ಗಳ ನಿರಂತರ ಸಂಚಾರದಿಂದಾಗಿ ಕಿರಿದಾದ ಈ ರಸ್ತೆಯು ತೀರಾ ಹದಗೆಟ್ಟಿದೆ.

ವಿಸ್ತರಣೆಯೇ ಸವಾಲು

ನಿಲ್ದಾಣ ಉದ್ಘಾಟನೆಯಾಗಿ ಒಂದೂವರೆ ವರ್ಷವಾದರೂ, ಅಲ್ಲಿಂದ ಗೋಕುಲ ರಸ್ತೆ ಸಂಪರ್ಕಿಸುವ 400 ಮೀಟರ್ ಉದ್ದದ ರಸ್ತೆಯ ವಿಸ್ತರಣೆ ದೊಡ್ಡ ಸವಾಲಾಗಿದೆ. ಒತ್ತುವರಿಯಾಗಿರುವ ರಸ್ತೆಯ ಕೆಲ ಭಾಗದ ತೆರವು ಹಾಗೂ ಮತ್ತೊಂದಿಷ್ಟು ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಮಹಾನಗರ ಪಾಲಿಕೆ ಇದುವರೆಗೆ ಮುಗಿಸಿಲ್ಲ.

‘ಬಸ್ ನಿಲ್ದಾಣ ಕಾರ್ಯಾಚರಣೆಗೂ ಮುಂಚೆಯೇ ರಸ್ತೆ ವಿಸ್ತರಣೆ ಮಾಡಿಕೊಡುವಂತೆ ಪಾಲಿಕೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕೋರಲಾಗಿತ್ತು. ಶೀಘ್ರ ಮಾಡುವುದಾಗಿ ಭರವಸೆ ನೀಡಿದ್ದ ಪಾಲಿಕೆ, ನಂತರ ವಿಳಂಬ ಮಾಡಿತು. ಕಾರ್ಯಾಚರಣೆ ಆರಂಭವಾದ ಬಳಿಕ, ವಿಧಿ ಇಲ್ಲದೆ ನಿತ್ಯ ಸಾವಿರಕ್ಕೂ ಹೆಚ್ಚು ಬಸ್‌ಗಳು ಹಾಗೂ ವಾಹನಗಳು ಕಿರಿದಾದ ರಸ್ತೆಯಲ್ಲಿ ಓಡಾಡಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಂಸ್ಥೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ವಾಹನಗಳ ಸಂಚಾರದಿಂದಾಗಿ ಹೊಸೂರಿನ ಗೋಕುಲ ರಸ್ತೆಗೆ ಹೋಗುವ ಮಾರ್ಗ ಹದಗೆಟ್ಟಿದೆ
ವಾಹನಗಳ ಸಂಚಾರದಿಂದಾಗಿ ಹೊಸೂರಿನ ಗೋಕುಲ ರಸ್ತೆಗೆ ಹೋಗುವ ಮಾರ್ಗ ಹದಗೆಟ್ಟಿದೆ

ನಿರ್ಮಾಣಕ್ಕೆ ಸಿದ್ಧತೆ

‘ಕೇಂದ್ರ ರಸ್ತೆ ನಿಧಿಯಡಿ (ಸಿಆರ್‌ಎಫ್‌) ಕಮರಿಪೇಟೆಯಿಂದ ಉಣಕಲ್‌ವರೆಗಿನ 4 ಕಿಲೋಮೀಟರ್ ರಸ್ತೆ ಪೈಕಿ, ಈಗಾಗಲೇ 3.6 ಕಿ.ಮೀ. ಉದ್ದದ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಒತ್ತುವರಿ ತೆರವು ಹಾಗೂ ಭೂ ಸ್ವಾಧೀನ ವಿಳಂಬದಿಂದಾಗಿ 400 ಮೀಟರ್ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಜಾಗ ತೆರವು ಮಾಡಿಕೊಟ್ಟಿದ್ದರೆ ಇಷ್ಟೊತ್ತಿಗಾಗಲೇ ನಾಲ್ಕು ಪಥದ ರಸ್ತೆ ನಿರ್ಮಾಣವಾಗಿರುತ್ತಿತ್ತು’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಂಜನಿಯರ್ ರಮೇಶ್ ಹೇಳಿದರು.

‘ಇದೀಗ ಪಾಲಿಕೆಯವರು ಇರುವ ಜಾಗದಲ್ಲೇ ಸದ್ಯಕ್ಕೆ ರಸ್ತೆ ನಿರ್ಮಿಸುವಂತೆ ಸೂಚಿಸಿದ್ದಾರೆ. ಅದರಂತೆ ದ್ವಿಪಥದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಬಳಿಕ, ಎರಡು ವರ್ಷ ನಾವೇ ನಿರ್ವಹಣೆ ಕೂಡ ಮಾಡಲಿದ್ದೇವೆ’ ಎಂದು ತಿಳಿಸಿದರು.

‘ವಸತಿ ಸಂಕೀರ್ಣದಲ್ಲಿ ಪುನರ್ವಸತಿ’

‘ವಿಸ್ತರಣೆಯಾಗಬೇಕಾದ ರಸ್ತೆಗೆ ಹೊಂದಿಕೊಂಡಂತೆ 64 ಕುಟುಂಬಗಳು ವಾಸಿಸುತ್ತಿವೆ. ಹೊಸೂರಿನಲ್ಲೇ ಇರುವ ಕೈಗಾರಿಕಾ ಇಲಾಖೆಯ ಜಾಗದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಕುಟುಂಬಗಳನ್ನು ಸ್ಥಳಾಂತರಿಸಿ ಸಂಕೀರ್ಣದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಸತಿ ಸಂಕೀರ್ಣ ಕಾಮಗಾರಿ ಮುಗಿಯುವವರೆಗೆ ಬಸ್ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ, ಈಗಿರುವಂತೆ ದ್ವಿಪಥ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯವರು ನಿರ್ಮಿಸಲಿದ್ದಾರೆ. ಮುಂದೆ ಸ್ಥಳ ತೆರವಾದಾಗ, ಅಗತ್ಯವಿರುವ ಮತ್ತಷ್ಟು ಭೂಮಿ ಸ್ವಾಧೀನಪಡಿಸಿಕೊಂಡು ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT