ಸೋಮವಾರ, ನವೆಂಬರ್ 18, 2019
20 °C
ರಸ್ತೆಯಲ್ಲಿ ಸಮಸ್ಯೆಗಳ ಸರಮಾಲೆ

ಲೋಕಪ್ಪನ ಹಕ್ಕಲಕ್ಕೆ ತೆರಳುವ ರಸ್ತೆ ಮೇಲೆ ಗುಂಡಿ, ಮಣ್ಣು!

Published:
Updated:
Prajavani

ಹುಬ್ಬಳ್ಳಿ: ವಿದ್ಯಾನಗರದಿಂದ ದೇಶಪಾಂಡೆನಗರ ಹಾಗೂ ಕಿಮ್ಸ್‌ ಹಿಂಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಲೋಕಪ್ಪನ ಹಕ್ಕಲಕ್ಕೆ ಹೋಗುವ ರಸ್ತೆಯಲ್ಲಿ ಕಾಣುವುದು ಬರೀ ಮಣ್ಣು ಹಾಗೂ ಗುಂಡಿಗಳು!

ಕೆಲ ದಿನಗಳ ಹಿಂದೆ ಈ ರಸ್ತೆಯ ಒಳಚರಂಡಿ ತುಂಬಿ ರಸ್ತೆ ಮೇಲೆ ಕೊಳಚೆ ನೀರೆಲ್ಲ ಹರಿದಿದ್ದು, ಅದನ್ನು ಈಗಲೂ ಸರಿಮಾಡಿಲ್ಲ. ವಿವಿಧ ಕಾಮಗಾರಿಗಳಿಗೆ ರಸ್ತೆಯ ಬದಿ ತೆಗ್ಗು ಅಗೆದಿದ್ದು, ಆ ಮಣ್ಣನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಮೇಲೆ ಬಿದ್ದಿರುವ ಆಳವಾದ ಗುಂಡಿಗಳು ಸವಾರರನ್ನು ಹೈರಾಣಾಗಿಸುತ್ತವೆ. ಗುಂಡಿಗಳಲ್ಲಿ ನಿಧಾನವಾಗಿ ವಾಹನಗಳನ್ನು ಇಳಿಸಿ ಮುಂದೆ ಹೋಗುವಷ್ಟರಲ್ಲಿ ಸವಾರರ ತಾಳ್ಮೆ ಕಳೆದು ಹೋಗಿರುತ್ತದೆ.

ವಿದ್ಯಾನಗರ ಪೊಲೀಸ್‌ ಠಾಣೆ, ಲೋಕಪ್ಪನ ಹಕ್ಕಲ, ರಾಜನಗರ, ವಿಶ್ವೇಶ್ವರನಗರ ಮತ್ತು ಕೆಎಸ್‌ಸಿಎ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಹೋಗಲು ವಿದ್ಯಾನಗರದ ಭಾಗದ ಜನರಿಗೆ ಸುಲಭವಾದ ದಾರಿ ಇದಾಗಿದೆ. ಪದೇ ಪದೇ ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುವುದರಿಂದ ರಸ್ತೆಗಿಂತ ಅಲ್ಲಿ ಮಣ್ಣು ಮತ್ತು ಗುಂಡಿಗಳೇ ಹೆಚ್ಚು ರಾರಾಜಿಸುತ್ತವೆ.

‘ಚರಂಡಿ ನೀರು ರಸ್ತೆ ಮೇಲೆ ಹರಿದು ಕೆಟ್ಟ ವಾಸನೆ ಬರುತ್ತಿದೆ. ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಬಂದಾಗ ಮಾತ್ರ ತಾತ್ಕಾಲಿಕ ತೇಪೆ ಹಾಕುತ್ತಾರೆ. ಪದೇ ಪದೇ ದುರಸ್ತಿ ಮಾಡುವ ಬದಲು ಕಾಯಂ ದುರಸ್ತಿ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ರಾಮಚಂದ್ರ ದೇವ್ಕರ್‌ ಮನವಿ ಮಾಡಿದರು.

ಇದೇ ರಸ್ತೆಯಲ್ಲಿ ಹತ್ತು ವರ್ಷಗಳಿಂದ ಆಟೊ ಓಡಿಸುತ್ತಿರುವ ಇಸ್ಮಾಯಿಲ್‌ ಸಾಬ್‌ ದೋಬಿ ‘ರಸ್ತೆ ತುಂಬೆಲ್ಲಾ ಮಣ್ಣು ಮತ್ತು ಗುಂಡಿಗಳೇ ತುಂಬಿ ಹೋಗಿರುವ ಕಾರಣ ಆಟೊ ಹಾಳಾಗಿದೆ. ದೂಳು ಕೂಡ ಹೆಚ್ಚು. ಆದ್ದರಿಂದ ಕಿಮ್ಸ್‌ ಹಿಂಭಾಗದಿಂದ ಮುಖ್ಯರಸ್ತೆಗೆ ಸುತ್ತು ಹಾಕಿ ಬರಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)