ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತೇಶ್ವರನ ಸ್ಮರಿಸುತ್ತ ರೋಜಾ...

ನಾಲ್ಕು ದಶಕಗಳಿಂದ ರಂಜಾನ್‌ ಉಪವಾಸ ಆಚರಿಸುವ ಭೀಮಪ್ಪ
Last Updated 24 ಮೇ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಸ್ಲಾಂನ ಕಡ್ಡಾಯ ನಿಯಮಗಳಲ್ಲಿ ಒಂದಾದ ರೋಜಾ (ಉಪವಾಸ) ರಂಜಾನ್‌ ಮಾಸದ ಪ್ರಮುಖ ಆಚರಣೆ. ಇದನ್ನು ಅಲ್ಲಲ್ಲಿ ಹಿಂದೂಗಳೂ ಆಚರಿಸಿ, ಭಾವೈಕ್ಯ ಮೆರೆಯುತ್ತಾರೆ. ಅಂಥವರ ಸಾಲಿಗೆ ಭೀಮಪ್ಪ ಮಾಯನ್ನವರ‌ ಸೇರುತ್ತಾರೆ.

ಅಣ್ಣಿಗೇರಿಯ ಭೀಮಪ್ಪ ಹುಬ್ಬಳ್ಳಿ–ಧಾರವಾಡ ‍ಪೊಲೀಸ್‌ ಕಮಿಷನರ್‌ ಕಚೇರಿಯ ನಗರ ವಿಶೇಷ ಬ್ರಾಂಚ್‌ನಲ್ಲಿ (ಸಿಎಸ್‌ಬಿ) ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಭೀಮಪ್ಪ ನಾಲ್ಕು ದಶಕಗಳಿಂದ ಉಪವಾಸ ಮಾಡುತ್ತಿದ್ದಾರೆ. 1980ರಿಂದ ರೋಜಾ ಹಿಡಿಯುವುದನ್ನು ರೂಢಿಸಿಕೊಂಡ ಇವರು, ಇಂದಿಗೂ ಅದನ್ನು ಪಾಲಿಸುತ್ತಿದ್ದಾರೆ.

ಅಮ್ಮ ತೋರಿದ ದಾರಿ: ‘ರಂಜಾನ್‌ ಮಾಸದಲ್ಲಿ ನಮ್ಮ ತಾಯಿ ಆಗಾಗ ಉಪವಾಸ ಮಾಡುತ್ತಿದ್ದರು. ಅವರೊಂದಿಗೆ ನನಗೂ ರೂಢಿಯಾಯಿತು. ಅವರು ತೀರಿಕೊಂಡರು. ನಾನು ಇಂದಿಗೂ ಅಮ್ಮನ ರೂಢಿ ಮುಂದುವರಿಸಿಕೊಂಡು ಬಂದಿದ್ದೇನೆ. ಉಪವಾಸ ಆರಂಭಿಸಿ ಬಹುತೇಕ 40 ವರ್ಷಗಳಾಗಿರಬೇಕು’ ಎಂದು ಭೀಮಪ್ಪ ನೆನಪಿಸಿಕೊಂಡರು.

‘ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೊಂದೇ ಉಪವಾಸ ಆಚರಣೆಗೆ ಕಾರಣ. ಧರ್ಮಗಳು, ಆಚರಣೆಗಳು ಭಿನ್ನವಾದರೂ, ಭಕ್ತಿ ಒಂದೇ. ಅಮೃತೇಶ್ವರ, ಹನುಮಂತ ಮತ್ತು ಅಲ್ಲಾ ಬೇರೆ ಬೇರೆ ಎಂದು ಯಾವತ್ತೂ ಭಾವಿಸುವುದಿಲ್ಲ’ ಎಂದರು.

‘ನಸುಕಿನಲ್ಲಿ ಸ್ನಾನ ಮಾಡಿ, ದೇವರ ಪೂಜೆ ಮುಗಿಸಿ ನಿಗದಿತ ಸಮಯಕ್ಕೆ ಉಪವಾಸ ಆರಂಭಿಸುತ್ತೇನೆ. ಅಲ್ಲಾ, ಅಮೃತೇಶ್ವರ ಎಲ್ಲಾ ನೀನೆ ಎಂದು ದೇವರಿಗೆ ನಮಸ್ಕರಿಸುತ್ತೇನೆ. ಅಲ್ಲಿಂದ ನನ್ನ ಉಪವಾಸ ಆರಂಭವಾಗುತ್ತದೆ. ಮುಸ್ಲಿಮರಂತೆ ನಾನೂ ಕಟ್ಟುನಿಟ್ಟಾಗಿ ಉಪವಾಸ ಆಚರಿಸುತ್ತೇನೆ. ಸೂರ್ಯಾಸ್ತದ ಬೆನ್ನಲ್ಲೆ ಉಪವಾಸ ಕೊನೆಗೊಳಿಸಲ್ಲ. ಕೆಲಸದಿಂದ ಮನೆಗೆ ತೆರಳಿ, ಸ್ನಾನ ಮಾಡಿ ಮತ್ತೆ ದೇವರಿಗೆ ಕೈಮುಗಿದ ಬಳಿಕವೇ ಅನ್ನ–ನೀರು ಮುಟ್ಟುವುದು. ಅಷ್ಟೊತ್ತಿಗೆ ರಾತ್ರಿ 8 ಗಂಟೆ ದಾಟಿರುತ್ತದೆ’ ತಮ್ಮ ಆಚರಣೆಯ ರೀತಿಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT