ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಪಿಎಫ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ನೈರುತ್ಯ ರೈಲ್ವೆಯ ಸಂಜೀವ್ ಕಿಶೋರ್

ಹೋರಾಟದ ಫಲವಾಗಿ ಸಿಕ್ಕ ಸ್ವಾತಂತ್ರ್ಯ
Last Updated 18 ಜುಲೈ 2022, 9:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅನೇಕ ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ನಗರದ ಗದಗ ರಸ್ತೆಯಲ್ಲಿರುವ ರೈಲು ಸೌಧದಿಂದ ಹೈದರಾಬಾದ್‌ವರೆಗೆ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅಮೃತ ಮಹೋತ್ಸವವನ್ನು ಸ್ಮರಣೀಯವಾಗಿಸಲು ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ರೈಲ್ವೆಯು ಸ್ವಾಂತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ 25 ರೈಲುಗಳು ಹಾಗೂ 75 ನಿಲ್ದಾಣಗಳಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲು ಮುಂದಾಗಿದೆ’ ಎಂದರು.

‘ನೈರುತ್ಯ ರೈಲ್ವೆಯು ಕರ್ನಾಟಕದ ಹಾವೇರಿ, ಮದ್ದೂರು, ಧಾರವಾಡ, ವಿದುರಾಶ್ವತ್ಥ ರೈಲು ನಿಲ್ದಾಣಗಳನ್ನು ಹಾಗೂ ಮೈಸೂರು–ಕೆಎಸ್‌ಆರ್‌ ಬೆಂಗಳೂರು– ಮೈಸೂರು ಟಿಪ್ಪು ಎಕ್ಸ್‌ಪ್ರೆಸ್, ಕೆಎಸ್‌ಆರ್‌ ಬೆಂಗಳೂರು– ಮೀರಜ್– ಕೆಎಸ್‌ಆರ್‌ ಬೆಂಗಳೂರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲುಗಳನ್ನು ಆಯ್ಕೆ ಮಾಡಿದೆ. ಇಲ್ಲಿ ವಿಶೇಷ ದೀಪಾಲಂಕಾರ, ಸ್ಪಾಟ್‌ ಲೈಟ್, ಸೆಲ್ಫಿ ಸ್ಟ್ಯಾಂಡ್, ಡಿಜಿಟಲ್ ಪರದೆಗಳ ಅವಳವಡಿಕೆ, ದೇಶಭಕ್ತಿ ಗೀತೆಗಳ ಗಾಯನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಹೇಳಿದರು.

ಸನ್ಮಾನ: ಸ್ವಾತಂತ್ರ್ಯ ಹೋರಾಟಗಾರರಾದ ಧಾರವಾಡದ ನಿಂಗಯ್ಯ ಎಸ್‌.ಎಸ್ ಮತ್ತು ಬಸವಂತಪ್ಪ ಮಡಿವಾಳರ (ತಂದೆ ಪರವಾಗಿ ಪುತ್ರ ನಿಂಗಪ್ಪ ಮಡಿವಾಳರ ಸನ್ಮಾನ ಸ್ವೀಕಾರ) ಹಾಗೂ ನಿವೃತ್ತ ಆರ್‌ಪಿಎಫ್ ಸಿಬ್ಬಂದಿ ಸಾಜಿ ಮ್ಯಾಥ್ಯು ಹಾಗೂ ಐ.ಆರ್. ಚಂದ್ರ ಅವರನ್ನು ಗಣ್ಯರು ಸನ್ಮಾನಿಸಿದರು.

ನೈರುತ್ಯ ರೈಲ್ವೆಯ ರೈಲ್ವೆ ರಕ್ಷಣಾ ದಳದ ಇನ್‌ಸ್ಪೆಕ್ಟರ್ ಜನರಲ್ ಅಲೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT