ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ನಿರ್ಧಾರದಲ್ಲಿ ಆರ್‌ಎಸ್‌ಎಸ್‌ ಹಿತಾಸಕ್ತಿ: ಆರೋಪ

Last Updated 14 ಡಿಸೆಂಬರ್ 2021, 4:21 IST
ಅಕ್ಷರ ಗಾತ್ರ

ಧಾರವಾಡ: ‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದುರಾಡಳಿತ ನಡೆದಿದೆ. ಕುಲಪತಿ, ಕುಲಸಚಿವರು ಸೇರಿದಂತೆ ವಿಶ್ವವಿದ್ಯಾಲಯಗಳ ಉನ್ನತ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹೊಸ ಶಿಕ್ಷಣ ನೀತಿ ಬದಲು, ಹಿಂದಿನ ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಮೊದಲು ಸೌಲಭ್ಯ ಕಲ್ಪಿಸಲಿ’ ಎಂದು ಕೆ.ಪಿ.ಸಿ.ಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯಿಸಿದರು.

‘ಶೈಕ್ಷಣಿಕ ನಿರ್ಧಾರ ಮತ್ತು ನಿಯಂತ್ರಣಗಳು ಆರ್‌ಎಸ್‌ಎಸ್ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತಿರುವುದು ಅಪಾಯಕಾರಿ ಮತ್ತು ಆತಂಕದ ವಿಷಯವಾಗಿದೆ’ ಎಂದು ಸೋವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಹೊಸ ಶಿಕ್ಷಣ ನೀತಿಯನ್ನು ಮೊದಲು ಜಾರಿಗೆ ತಂದಿದ್ದು ಕರ್ನಾಟಕ. ಅದರಲ್ಲೂ ಕರ್ನಾಟಕ ವಿಶ್ವವಿದ್ಯಾಲಯ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈವರೆಗೂ ಪಠ್ಯ ಬಂದಿಲ್ಲ. ಇದು ದೇಶದ ಶಿಕ್ಷಣ ನಡವಳಿಕೆಯಾಗದೆ, ಆರ್‌ಎಸ್‌ಎಸ್ ನಡವಳಿಕೆಯಾಗಿದೆ’ ಎಂದು ದೂರಿದರು.

‘ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ವಿವಿ ಕುಲಪತಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ಸಮರ್ಥರಿಲ್ಲ. ಕಾನೂನು ಸಚಿವರು ಮೊದಲು ಕುಲಪತಿ ಬದಲಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ 400 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಚಾರ್ಯರಿಲ್ಲದೆ, ಅತಿಥಿ ಉಪನ್ಯಾಸಕರ ಮೇಲೆ ಕಾಲೇಜು ನಡೆಸುವಂತಾಗಿದೆ. ಇಷ್ಟಾದರೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲ. ಹೀಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ದುರಾಡಳಿತವಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದಣ್ಣ ಕುಂಬಾರ ಮತ್ತು ಎಸ್.ಎ. ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT