ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌, ವೆಂಕಟೇಶಗೆ ಪ್ರಥಮ ಸ್ಥಾನ

ಅಂಗವಿಕಲರ ಜಿಲ್ಲಾಮಟ್ಟದ ಕ್ರೀಡಾಕೂಟ ಆರಂಭ: ವಿಶ್ವಧರ್ಮ ಸಮಿತಿಯ ಪ್ರಾಬಲ್ಯ
Last Updated 27 ನವೆಂಬರ್ 2019, 14:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಸೇವಾಶ್ರಮ ಸಮಿತಿಯ ಸಚಿನ ಚಿಕ್ಕಬೆಂಡಿಗೇರಿ ಹಾಗೂ ವಿರೂಪಾಕ್ಷ ಕುಸುಗಲ್‌ ಅವರು ಅಂಗವಿಕಲರ ದಿನದ ಅಂಗವಾಗಿ ಬುಧವಾರ ಆರಂಭವಾದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಬಿವಿಬಿ ಕಾಲೇಜು ಮೈದಾನದಲ್ಲಿ ಆರಂಭವಾದ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಸಚಿನ 8ರಿಂದ 14 ವರ್ಷದ ಒಳಗಿನವರ ಜೂನಿಯರ್‌ ವಿಭಾಗದ ಒಂದು ಬಡಿಗೆ ಓಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದರು. ಇದೇ ಸಮಿತಿಯ ಷಣ್ಮುಖ ಹಳ್ಳಿಕೇರಿ ಹಾಗೂ ದುರ್ಗಪ್ಪ ಹರಿಜನ ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

14ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ನಡೆದ 400 ಮೀಟರ್‌ ಟ್ರೈಸಿಕಲ್‌ ರೇಸ್‌ನಲ್ಲಿ ವಿರೂಪಾಕ್ಷ ಮೊದಲಿಗರಾದರು. ವಿಶ್ವಧರ್ಮ ಶಾಲೆಯ ಶ್ರೀಧರ ಹಿರೇಕುರುಬರ ಎರಡನೇ ಸ್ಥಾನ ಪಡೆದರೆ, ಪಾಂಡುರಂಗ ಅಚಲಕರ ಮೂರನೇ ಸ್ಥಾನ ಸಂಪಾದಿಸಿದರು.

8ರಿಂದ 14 ವರ್ಷದ ಒಳಗಿನವರ ಜೂನಿಯರ್‌ ವಿಭಾಗದ ಬಡಿಗೆ ಓಟ, ಬಕೆಟ್‌ಗೆ ಚೆಂಡು ಹಾಕುವುದು, ಸ್ಟಂಪಿಗೆ ರಿಂಗ್‌ ಹಾಕುವುದು, 14ರಿಂದ 18 ವರ್ಷದ ಒಳಗಿನ ಕ್ರೀಡಾಪಟುಗಳಿಗೆ ನಡೆದ ಎರಡು ಬಡಿಗೆ ಓಟ, ಬಕೆಟ್‌ಗೆ ಚೆಂಡು ಹಾಕುವ ಸ್ಪರ್ಧೆಗಳಲ್ಲಿ ವಿಶ್ವಧರ್ಮ ಸಮಿತಿಯ ಮಕ್ಕಳೇ ಪ್ರಶಸ್ತಿಗಳನ್ನು ಜಯಿಸಿದರು. 18 ವರ್ಷ ಮೇಲಿನವರ ವಿಭಾಗದ 1 ಬಡಿಗೆ ಓಟದ ಸ್ಪರ್ಧೆಯಲ್ಲಿ ಧಾರವಾಡದ ಸಮರ್ಥನಂ ಸಂಸ್ಥೆಯ ಹುಸೇನಸಾಬ ವಡಕಟ್ಟಿ ಮೊದಲ ಸ್ಥಾನ ಗಳಿಸಿದರು.

ಬಾಲಕಿಯರ ಜೂನಿಯರ್‌ ವಿಭಾಗದ ಒಂದು ಬಡಿಗೆ ಓಟದ ಸ್ಪರ್ಧೆಯಲ್ಲಿ ವಿಶ್ವಧರ್ಮ ಸಮಿತಿಯ ಲಕ್ಷ್ಮಿ ಕರಮಡಿ ಮೊದಲ ಸ್ಥಾನ ಪಡೆದರು. ನಂತರದ ಎರಡು ಸ್ಥಾನಗಳು ಕ್ರಮವಾಗಿ ಇದೇ ಸಮಿತಿಯ ಹನಮಂತಿ ಪೂಜೇರ ಹಾಗೂ ಮಂಜುಳಾ ಕುಂಬಾರ ಪಾಲಾದವು. ಬಕೆಟ್‌ಗೆ ಚೆಂಡು ಹಾಕುವ ಸ್ಪರ್ಧೆಯಲ್ಲಿ ಲಕ್ಷ್ಮಿ ತಳವಾರ (ಪ್ರಥಮ), ಅಂಕಿತಾ ಮುಧೋಳ (ದ್ವಿತೀಯ) ಮತ್ತು ನೇತ್ರಾವತಿ ಬುಡ್ಡಣ್ಣವರ (ತೃತೀಯ) ಸ್ಥಾನಗಳನ್ನು ಗಳಿಸಿದರು.

ಸೀನಿಯರ್ ವಿಭಾಗದ ಎರಡು ಬಡಿಗೆ ಓಟದಲ್ಲಿ ಇದೇ ಸಮಿತಿಯ ಅನಿತಾ ರಾಠೋಡ (ಪ್ರಥಮ), ಶ್ರೀದೇವಿ ಹೊಂಬಳ (ದ್ವಿತೀಯ) ಮತ್ತು ರೂಪಾ ಆಲೂರ (ತೃತೀಯ) ಸ್ಥಾನಗಳನ್ನು ಗಳಿಸಿದರು. 18 ವರ್ಷ ಮೇಲಿನವರ ವಿಭಾಗದ 1 ಬಡಿಗೆ ಓಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಪರೇಷನ್‌ ಇಕ್ವಿಪ್‌ ಇಂಡಿಯಾ ಸಂಸ್ಥೆಯ ಮಾಶವ್ವ ಕಮಲಿ, ಕಾವೇರಿ ಮೂಗನಾಯಕ ಮತ್ತು ಮಹಾದೇವಿ ಹೆಬ್ಬಾಳಮಠ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಶ್ರವಣದೋಷವಿರುವ ಬಾಲಕಿಯರ ನಡೆದ ಜೂನಿಯರ್‌ ವಿಭಾಗದ ಶಾಟ್‌ಪಟ್ ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಕಿವುಡ ಮಕ್ಕಳ ಶಾಲೆಯ ಸಿರಿ ಹೆಗಡೆ ಪ್ರಥಮ ಸ್ಥಾನ ಪಡೆದರು. ರೋಟರಿ ಶಾಲೆಯ ಸ್ಫೂರ್ತಿ ಹೊಸಮನಿ ದ್ವಿತೀಯ ಮತ್ತು ಪ್ರಿಯದರ್ಶಿನಿ ಶಾಲೆಯ ಕಾವ್ಯಾ ಅಲ್ಲಾಪುರ ತೃತೀಯ ಸ್ಥಾನ ಗಳಿಸಿದರು.

ಮುಖ್ಯವಾಹಿನಿಗೆ ಬರಲಿ: ಬೇವೂರ

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪಾಲಿಕೆ ವಲಯ ಅಧಿಕಾರಿ ಎಸ್‌.ಸಿ. ಬೇವೂರ ‘ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕೊಡಬೇಕು. ಅವರೂ ಮುಖ್ಯ ವಾಹಿನಿಗೆ ಬರಬೇಕು’ ಎಂದರು.

ಕ್ರೀಡಾಪಟುಗಳಿಂದ ನಡೆದ ಪಥಸಂಚಲನದಲ್ಲಿ ಬೇವೂರು ಹಾಗೂ ಇತರ ಗಣ್ಯರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಕ್ರೀಡಾ ಜ್ಯೋತಿಯನ್ನು ತಂದು ಅತಿಥಿಗಳಿಗೆ ನೀಡಲಾಯಿತು. 354 ಬಾಲಕಿಯರು ಮತ್ತು 446 ಬಾಲಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿಯ ಅಧ್ಯಕ್ಷ ಐ.ಕೆ. ಲಕ್ಕುಂಡಿ, ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಕ್ರೀಡಾ ನಿರ್ದೇಶಕ ಎಂ. ಎಂ. ಕುರುಗೋಡಿ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಎಂ. ಅಮರನಾಥ, ವಿಕಲಚೇತನರ ಇಲಾಖೆಯ ನಿವೃತ್ತ ಅಧಿಕಾರಿ ಮುನಿಸ್ವಾಮಿ, ಡಾ. ಪಿ.ವಿ. ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯ ಕೊಟ್ಟೂರು ಶೆಟ್ರು, ಕವಿತಾ ಕಳಸದ, ತಾರಾ ಫರ್ನಾಂಡೀಸ್‌, ಡಿ.ಡಿ ಮೆಚಣ್ಣವರ, ಗುರು ಲಕ್ಕುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT