ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದಲ್ಲಂತೂ ಸಂಕ್ರಮಣವು ಸುಗ್ಗಿಯ ಕಾಲ

ಅಕ್ಷರ ಗಾತ್ರ

ಸಂಕ್ರಾಂತಿ ಎಂಬ ಹೆಸರಿನಲ್ಲೇ ನವೋಲ್ಲಾಸ, ಪರಿವರ್ತನೆಯ ಪರಿಕಲ್ಪನೆಗಳು ಅಡಗಿವೆ. ಇದು ಹೊಸತನ ಉಕ್ಕುವ ಸಮಯ. ನಿಸರ್ಗವೂ ಮೈಕೊಡವಿಕೊಂಡು ಗೃಹಾಧಿಪತಿ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದತ್ತ ಹೊರಳುವ ಸಮಯ. ಹೀಗಾಗಿಯೇ ಈ ಹಬ್ಬವನ್ನು ‘ಉತ್ತರದ ಪರ್ವ ಕಾಲ’ (ರವಿಯು ಮಕರ ರಾಶಿಯಿಂದ ಮಿಥುನರಾಶಿಗೆ ಪ್ರವೇಶಿಸುವ ಸಮಯ) ಎಂದು ಕರೆಯುತ್ತಾರೆ.

ಉತ್ತರ ಕರ್ನಾಟಕದಲ್ಲಂತೂ ಸಂಕ್ರಮಣ ಸುಗ್ಗಿಯ ಕಾಲ. ರೈತರು ಧಾನ್ಯಗಳ ರಾಶಿ ಮಾಡಿ ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಕಾಲ. ಸಂಕ್ರಮಣ ವಾಸ್ತವವಾಗಿ ಮೂರು ದಿನದ ಆಚರಣೆಗಳನ್ನು ಒಳಗೊಂಡ ಹಬ್ಬ. ಆದರೆ, ಆಧುನಿಕತೆಯ ಭರಾಟೆಯಿಂದ ಒಂದು ದಿನಕ್ಕೆ ಮೊಟಕುಗೊಂಡಿದೆ.

ಭೋಗಿ ಹಬ್ಬ: ಈ ದಿನ ಮನೆ, ಮನಸ್ಸಿನ ಕಲ್ಮಶ ತೊಳೆಯುವ ದಿನ. ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ– ಬೆರಣಿಯಿಂದ ಅಗ್ನಿಕುಂಡ ರಚಿಸಿ, ಅದರಲ್ಲಿ ಬೇಡವಾದ ವಸ್ತುಗಳನ್ನು (ಮುರಿದ ಕುರ್ಚಿ, ಪೀಠೋಪಕರಣ, ಹಳೆಯ ಸಾಮಗ್ರಿ, ಬಟ್ಟೆ– ಬರೆ) ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಸಾಂಕೇತಿಕ ಆಚರಣೆ ನಡೆಯುತ್ತದೆ.

ಸಂಕ್ರಾಂತಿ: ಸೂರ್ಯನ ಆರಾಧನೆಯ ದಿನ. ಸಿಹಿ ತಯಾರಿಸಿ ಸೂರ್ಯನಿಗೆ ನೈವೇದ್ಯ ಅರ್ಪಿಸುವುದು, ಮನೆ ಎದುರು ರಂಗೋಲಿ ಹಾಕುವುದು, ಸಮೃದ್ಧತೆಯ ಸಂಕೇತವಾಗಿ ಹಾಲು ಉಕ್ಕಿಸುವುದು, ಮನೆ–ಮನೆಗೆ ತೆರಳಿ ಎಳ್ಳು–ಬೆಲ್ಲ ಬೀರುವುದು, ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು, ಗಾಳಿಪಟ ಹಾರಿಸುವುದು ಈ ದಿನದ ವಿಶೇಷ.

ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗಂತೂ ಇದು ಸಂಭ್ರಮದ ದಿನ. ಹೊಸದಾಗಿ ಮದುವೆಯಾದವರಿಗೆ ಕುಸುರೆಳ್ಳಿನಿಂದ ಮಾಡಿದ ಒಡವೆಗಳನ್ನು ತೊಡಿಸುವ ಸಂಪ್ರದಾಯವಿದೆ. ಬೆಳಗ್ಗೆ ಬೇಗನೆ ಎದ್ದು, ಎಣ್ಣೆ ಸ್ನಾನ ಮಾಡಿ, ಕುಲದೇವರ ಮುಂದೆ ಎಳ್ಳು–ಬೆಲ್ಲ, ಸಕ್ಕರೆ ಅಚ್ಚನ್ನಿಟ್ಟು ನೈವೇದ್ಯ ಮಾಡಲಾಗುತ್ತದೆ. ಸಂಜೆ ವೇಳೆ 5 ವರ್ಷದೊಳಗಿನ ಮಕ್ಕಳಿಗೆ ಮಣಿ ಸರ ಹಾಕಿ, ಚುರುಮುರಿ, ಹಸಿ ಕಡಲೆ, ಬಾರಿಹಣ್ಣು ಹಾಗೂ ಹಣವನ್ನು ನಿವಾಳಿಸಿ ತೆಗೆದು, ಆರತಿ ಮಾಡುತ್ತಾರೆ.

ಕರಿ ಹರಿಯುವ ದಿನ: ಇದು ಗೋವು, ಎತ್ತುಗಳನ್ನು ಆರಾಧಿಸುವ ದಿನ. ರೈತರು ಸಂಕ್ರಮಣದಂದು ತಮ್ಮ ಸಂಗಾತಿಗಳಾದ ಗೋವು, ಎತ್ತುಗಳನ್ನು ತೊಳೆದು, ಕೊಂಬಿಗೆ ಬಣ್ಣ ಬಳಿದು, ಗೆಜ್ಜೆ, ಗಲೀಪು, ಗಂಟೆಗಳಿಂದ ಸಿಂಗರಿಸಿ, ಸುಗಂಧ ದ್ರವ್ಯಗಳನ್ನು ಲೇಪಿಸಿ, ಲಿಂಬೆಹಣ್ಣು ಕಟ್ಟಿ, ಅವುಗಳಿಗೆ ಸಿಹಿ ತಿನ್ನಿಸುತ್ತಾರೆ. ನಂತರ ಊರ ಅಗಸಿಯಲ್ಲಿ, ದೇಗುಲಗಳ ಎದುರು ಎತ್ತುಗಳೊಂದಿಗೆ ತಾವೂ ಕೂಡ ಕಿಚ್ಚು ಹಾಯ್ದು ‘ಸಂಕ್ರಮಣದ ಕರಿ’ ಹರಿಯುತ್ತಾರೆ.

ಉತ್ತರ ಕರ್ನಾಟಕದ ಕೆಲವೆಡೆ ಹುಲುಸಾಗಿ ಬೆಳೆ ಬಂದ ಗದ್ದೆಗೆ ದೃಷ್ಟಿ ತಾಕದಿರಲೆಂದು ಈ ಸಂದರ್ಭದಲ್ಲಿ ಬೆರ್ಚಪ್ಪ (ಬೆದರುಬೊಂಬೆ) ನಿಲ್ಲಿಸುವ ಸಂಪ್ರದಾಯವಿದೆ. ಹೀಗಾಗಿ, ಈ ಹಬ್ಬವನ್ನು ‘ಬೆರ್ಚನ ಸಂಕ್ರಾಂತಿ’ ಎಂದೂ ಎನ್ನುತ್ತಾರೆ.

ರುಚಿಕರ ಖಾದ್ಯ ಸವಿಯುವ ಸಮಯ: ಸಂಕ್ರಮಣ ಆಚರಣೆ ಖಾದ್ಯ ವೈವಿಧ್ಯಕ್ಕೂ ಹೆಸರಾಗಿದೆ. ಅದರಲ್ಲೂ ಬಯಲುಸೀಮೆಯ ‘ಸಿಗ್ನೇಚರ್‌’ ಆಹಾರ ವೈವಿಧ್ಯ ಈ ಹಬ್ಬದ ವಿಶೇಷ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಜತೆ ಹೆಸರು, ಮೊಳಕೆಯೊಡೆದ ಮಡಕೆ, ಅಲಸಂದಿ ಕಾಳುಪಲ್ಲೆ, ಎಣ್ಣೆಗಾಯಿ ಬದನೆಕಾಯಿ, ಶೇಂಗಾ, ಗುರೆಳ್ಳು, ಪುಟಾಣಿ ಚಟ್ನಿ, ವಿಶೇಷವಾದ ಸಿಹಿ ತಿನಿಸು ಮಾದ್ಲಿ, ಕೆನೆ ಮೊಸರು, ಹುಳಬಾನ, ಬದನೆಕಾಯಿ ಬರ್ತ, ಹಸಿ ಟೊಮೆಟೊ ಬರ್ತ, ಕುಂಬಳಕಾಯಿ ಬರ್ತ ಇವುಗಳ ಜೊತೆ ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಶೇಂಗಾ ಹೋಳಿಗೆ, ಎಳ್ಳ ಹೋಳಿಗೆ, ಗೋಧಿ ಪಾಯಸ, ತುಪ್ಪ, ಮೆಂತ್ಯೆ, ಹತ್ತರಕಿ, ಈರುಳ್ಳಿ ಸೊಪ್ಪು, ಗಜ್ಜರಿ, ಸೌತೆಕಾಯಿ, ಮೂಲಂಗಿ, ಹುಣಸೆಕಾಯಿ ತೊಕ್ಕು, ಕೆಂಪು ಮೆಣಸಿನಕಾಯಿ ಚಟ್ನಿ, ತರಹೇವಾರಿ ಉಪ್ಪಿನಕಾಯಿ... ಹೀಗೆ ಬಾಯಲ್ಲಿ ನೀರೂರಿಸುವ ವಿಶೇಷ ಖಾದ್ಯಗಳನ್ನು ಬಂಧು–ಮಿತ್ರರ ಜೊತೆಗೂಡಿ ನದಿ, ಹಳ್ಳ, ಕೊಳ್ಳದ ದಡದಲ್ಲಿ ಅಥವಾ ಸಂಗಮ ಸ್ಥಳದಲ್ಲಿ ಕುಳಿತು ಸವಿಯುವ ಕಾಲ.

ಶಾಸ್ತ್ರ, ಪುರಾಣಗಳಲ್ಲಿ ಸಂಕ್ರಮಣದ ಉಲ್ಲೇಖ: ಶಾಸ್ತ್ರಗಳಲ್ಲಿ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ನೀಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆ ದೀಪ ಬೆಳಗಬೇಕು. ಎಳ್ಳು ಹೋಮ, ಎಳ್ಳು ತರ್ಪಣ, ಎಳ್ಳು ಸೇವನೆ ಮತ್ತು ಎಳ್ಳು ದಾನ ಮಾಡಬೇಕು ಇದು ಸಕಲ ಪಾಪಗಳನ್ನು ನಾಶವಾಗುತ್ತವೆ ಎಂದು ವಿವರಿಸಲಾಗಿದೆ.

ನದಿ ತೀರ, ಸಂಗಮಗಳಲ್ಲಿ ಜನ ಜಾತ್ರೆ:ಸಂಕ್ರಮಣದ ದಿನ ನದಿಗಳಲ್ಲಿ ಹಾಗೂ ನದಿಗಳ ಸಂಗಮ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡಲು ಆದ್ಯತೆ ನೀಡಲಾಗಿದೆ. ಹೀಗಾಗಿ, ಈ ಭಾಗದಲ್ಲಿರುವ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ತೀರ ಹಾಗೂ ನದಿಗಳ ಸಂಗಮ ಸ್ಥಾನಗಳಲ್ಲಿ ಪುಣ್ಯಸ್ನಾನಕ್ಕೆಂದು ಸಾವಿರಾರು ಜನ ಸೇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT