ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ ಲಾಡ್‌ಗೆ ಒಲಿದ ಸಚಿವ ಸ್ಥಾನ

2013ರಲ್ಲಿ ಕಾರ್ಮಿಕ ಸಚಿವ; ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಸಿಗದಿದಕ್ಕೆ ಬೇಸರ
Published 28 ಮೇ 2023, 6:48 IST
Last Updated 28 ಮೇ 2023, 6:48 IST
ಅಕ್ಷರ ಗಾತ್ರ

ಇ.ಎಸ್. ಸುಧೀಂದ್ರ ಪ್ರಸಾದ್

ಧಾರವಾಡ: ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ ಲಾಡ್ ನಿರೀಕ್ಷೆಯಂತೆಯೇ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2013ರ ಕಾಂಗ್ರೆಸ್ ಸರ್ಕಾರದಲ್ಲೂ ಕಾರ್ಮಿಕ ಸಚಿವರಾಗಿದ್ದ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗಣಿ ಉದ್ಯಮ ಹೊಂದಿರುವ ಸಂತೋಷ ಲಾಡ್ 2003ರಲ್ಲಿ ಸಂಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2007ರಲ್ಲಿ ಕಾಂಗ್ರೆಸ್ ಸೇರಿದ ಅವರು, 2008ರ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಗೆಲುವು ದಾಖಲಿಸಿದರು. 2013ರಲ್ಲೂ ಇದೇ ಕ್ಷೇತ್ರದಿಂದ ಗೆದ್ದ ಅವರು ಕಾರ್ಮಿಕ ಮತ್ತು ಕೌಶಲ ಅಭಿವೃದ್ಧಿ ಸಚಿವರಾಗಿದ್ದರು. 

2018ರಲ್ಲಿ ಬಿಜೆಪಿಯ ಸಿ.ಎಂ.ನಿಂಬಣ್ಣವರ ಎದುರು ಪರಾಭವಗೊಂಡ ಅವರು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದ ನಾಗರಾಜ ಛಬ್ಬಿ ವಿರುದ್ಧ ಗೆಲುವು ಸಾಧಿಸಿದರು. 

ಕಾಂಗ್ರೆಸ್ ಹೈಕಮಾಂಡ್‌ ಜತೆ ಉತ್ತಮ ಸಂಬಂಧ ಹೊಂದಿರುವ ಲಾಡ್‌ಗೆ ಈ ಬಾರಿ ಸಚಿವ ಸ್ಥಾನ ಸಿಗುವ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಇವರೊಂದಿಗೆ ಮೂರು ಬಾರಿ ಶಾಸಕರಾಗಿರುವ (ಒಂದು ಬಾರಿ ಪಕ್ಷೇತರ) ವಿನಯ ಕುಲಕರ್ಣಿ ಅಥವಾ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ಸಿಗುವ ಕುರಿತು ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದರು. ಎರಡು ಬಾರಿ ಶಾಸಕರಾದ (2013ರಲ್ಲಿ ಜೆಡಿಎಸ್‌ನಿಂದ) ಎನ್.ಎಚ್.ಕೋನರಡ್ಡಿ ಅವರೂ ಸಚಿವ ಸ್ಥಾನಕ್ಕಾಗಿ ತೆರೆಮರೆಯ ಕಸರತ್ತು ನಡೆಸಿದ್ದರು.

2013ರಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆತಿತ್ತು. ಕಾರ್ಮಿಕ ಸಚಿವರಾಗಿ ಸಂತೋಷ ಲಾಡ್ ಹಾಗೂ ಗಣಿ ಸಚಿವರಾಗಿ ವಿನಯ ಕುಲಕರ್ಣಿ ಇದ್ದರು. ಇದೇ ಅವಧಿಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣವನ್ನು 2018ರಲ್ಲಿ ಅಧಿಕಾರಿಕ್ಕೆ ಬಂದ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು. ಪ್ರಕರಣದ ವಿಚಾರಣೆ ಬಾಕಿ ಇದ್ದು, ಸದ್ಯ ವಿನಯ ಕುಲಕರ್ಣಿ ಜಿಲ್ಲೆ ಪ್ರವೇಶಕ್ಕೆ ಅವಕಾಶವಿಲ್ಲ. ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನಯ ಕುಲಕರ್ಣಿ, ಜಿಲ್ಲೆಯಿಂದ ಹೊರಗಿದ್ದುಕೊಂಡೇ ಈ ಬಾರಿ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು. 

ಈ ದಾಖಲೆಯ ಗೆಲುವನ್ನು ಹಾಗೂ ಲಿಂಗಾಯತ ಪಂಚಮಸಾಲಿ ನಾಯಕತ್ವವನ್ನು ವರಿಷ್ಠರು ಪರಿಗಣಿಸಿ ಸಚಿವ ಸ್ಥಾನ ನೀಡಬಹುದು ಎಂಬುದು ಅವರ ಬೆಂಬಲಿಗರ ನಿರೀಕ್ಷೆಯಾಗಿತ್ತು. ಆದರೆ, ಅವರ ಮೇಲಿರುವ ಪ್ರಕರಣವನ್ನೇ ವರಿಷ್ಠರು ಪರಿಗಣಿಸಿದರೇ ಎಂಬ ಚರ್ಚೆಯೂ ಈಗ ನಡೆಯುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಿಂದ ಐದು ಶಾಸಕರಿದ್ದರೂ, ಒಬ್ಬರಿಗಷ್ಟೇ ಸಚಿವ ಸ್ಥಾನ ಲಭಿಸಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಗದೀಶ ಶೆಟ್ಟರ್ ಅವರು ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಹೀಗಿದ್ದರೂ ಕೊಪ್ಪಳದ ಹಾಲಪ್ಪ ಆಚಾರ್ ಅವರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿತ್ತು. ಈ ಬಾರಿ ಜಿಲ್ಲೆಯ ಉಸ್ತುವಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಜಿಲ್ಲೆಯ ಜನರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT