ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಖರೀದಿ ಬಿಜೆಪಿಗೆ ಹೊಸದಲ್ಲ: ಸಂತೋಷ್‌ ಲಾಡ್‌

Published 28 ಅಕ್ಟೋಬರ್ 2023, 18:39 IST
Last Updated 28 ಅಕ್ಟೋಬರ್ 2023, 18:39 IST
ಅಕ್ಷರ ಗಾತ್ರ

ಧಾರವಾಡ: ‘ಬಿಜೆಪಿಯವರು 10 ವರ್ಷಗಳಲ್ಲಿ ದೇಶದಲ್ಲಿ 2,500 ಶಾಸಕರನ್ನು ಖರೀದಿಸಿದ್ದಾರೆ. ಅವರು ಹಣದ ಆಮಿಷವೊಡ್ಡುವುದು ಹೊಸದಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯವರು ಹಣದ ಆಮಿಷವೊಡ್ಡಿರುವ ಬಗ್ಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಹಣದ ಪಾರ್ಟಿ. ಬಿಜೆಪಿ ನಿಧಿ ₹7,500 ಕೋಟಿ ಇದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕೋವಿಡ್‌ ವೇಳೆ, ಪ್ರಧಾನಮಂತ್ರಿ ಪರಿಹಾರ ನಿಧಿಯಲ್ಲಿ ₹30 ಸಾವಿರ ಕೋಟಿ ಸಂಗ್ರಹವಾಗಿದೆ. ಆ ಹಣದಲ್ಲಿ ಈವರೆಗೆ ಒಂದೇ ಒಂದು ಆಸ್ಪತ್ರೆ ನಿರ್ಮಾಣವಾಗಿಲ್ಲ’ ಎಂದರು.

‘ಸತೀಶ ಜಾರಕಿಹೊಳಿ ಅವರನ್ನು 30 ವರ್ಷಗಳಿಂದ ಬಲ್ಲೆ. ಅವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಲ್ಲ. ಅವರು ಅಸಮಾಧಾನ ಬೇರೆ ರೀತಿ ತೋಡಿಕೊಂಡಿದ್ಧಾರೆ, ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ’ ಎಂದರು.

‘ಬರಗಾಲ ಆವರಿಸಿರುವ ಇಂದಿನ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಾಲ ಮರುಪಾವತಿಗೆ ರೈತರಿಗೆ ಒತ್ತಡ ಹೇರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ರೈತರು ಸಾಲ ಪಾವತಿಸದಿದ್ದರೆ ಸರ್ಕಾರವು ಮನ್ನಾ ಮಾಡಬೇಕು. ಅದಕ್ಕೆ, ಮಾನದಂಡ ನಿಗದಿಪಡಿಸಬೇಕು. ಉದಾರವಾಗಿ ಯೋಚಿಸಬೇಕು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ’ ಎಂದರು.

ತಾತಾ ತಾಯಿ ಮತ್ತು ತಂದೆ ಬಗ್ಗೆ ಬಿಜೆಪಿಯವರು ಎಷ್ಟೇ ಹೀಯಾಳಿಸಿದರೂ ರಾಹುಲ್ ಗಾಂಧಿ ಏನೂ ಮಾಡಲಿಲ್ಲ. ಗೌತಮ ಬುದ್ಧನ ರೀತಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ
ಸಂತೋಷ ಲಾಡ್‌ ಕಾರ್ಮಿಕ ಸಚಿವ
‘ಮೋದಿ ಸುಳ್ಳುಗಳ 3 ಸಾವಿರ ವಿಡಿಯೊ ಶೀಘ್ರ ಬಿಡುಗಡೆ’
ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಮಾಡಿದ ಸುಳ್ಳು ಭಾಷಣಗಳ 3 ಸಾವಿರ ವಿಡಿಯೊಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು’ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ‘ಮೋದಿ ಅವರ ಸುಳ್ಳುಗಳನ್ನು ಜನರಿಗೆ ತಿಳಿಸುವ ಕೆಲಸ ಇನ್ನು ಮುಂದೆ ಮಾಡಲಾಗುವುದು’ ಎಂದರು. ‘ದೇಶದ ಬಹುತೇಕ ಮಾಧ್ಯಮಗಳು ಮೋದಿ ಪರವಾಗಿವೆ. ಟಿ.ವಿ ಧಾರಾವಾಹಿಗಳಲ್ಲೂ ಅವರನ್ನೇ ತೋರಿಸಲಾಗುತ್ತದೆ. ಅವರು (ಮೋದಿ) ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತಾರೆ. ನಮಗೆ ಜನರನ್ನು ನೇರವಾಗಿ ಸಂಪರ್ಕಿಸದ ಹೊರತು ಬೇರೆ ದಾರಿ ಇಲ್ಲ’ ಎಂದರು. ‘ಚುನಾವಣೆ ಸಮೀಪಿಸಿದಾಗ ಬಿಜೆಪಿಯವರು ಪಾಕಿಸ್ತಾನ ಮುಸ್ಲಿಂ ಮತ್ತು ಹಿಂದೂತ್ವದ ಬಗ್ಗೆ  ಮಾತನಾಡುತ್ತಾರೆ. ಇದನ್ನು ಬಿಟ್ಟರೆ ಮಾತನಾಡಲು ಅವರಿಗೆ ಬೇರೆ ವಿಷಯಗಳಿಲ್ಲ. ಇದಕ್ಕೆ ಪ್ರತಿಯಾಗಿ ನಾವು ಅಂಬೇಡ್ಕರ್ ಬಸವಣ್ಣ ಮತ್ತು ಕಾಂಗ್ರೆಸ್ ತತ್ವಗಳು ಒಂದೇ ಎಂಬುದನ್ನು ಜನರಿಗೆ ತಿಳಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT