‘ಸತ್ವಂ’ ನಲ್ಲಿದೆ ಅಂದ, ಆರೋಗ್ಯ...

7

‘ಸತ್ವಂ’ ನಲ್ಲಿದೆ ಅಂದ, ಆರೋಗ್ಯ...

Published:
Updated:
Deccan Herald

ದೇಹಕ್ಕೆ ಅಂದದ ಆಕಾರ ಕೊಡಲು ಬಯಸುವ ಕೆಲವರು ಫಿಟ್‌ನೆಸ್ ಸೆಂಟರ್‌ಗಳಲ್ಲಿ ಕಸರತ್ತು ಮಾಡಿ ಬೆವರಿಳಿಸುತ್ತಾರೆ. ಇನ್ನು ಕೆಲವರು ಅನಾರೋಗ್ಯದಿಂದ ಮುಕ್ತರಾಗಲು ಫಿಸಿಯೊಥೆರಪಿ ವೈದ್ಯರನ್ನು ಭೇಟಿ ಮಾಡುತ್ತಾರೆ. ಫಿಟ್‌ನೆಸ್ ಮತ್ತು ಫಿಸಿಯೊಥೆರಪಿ ಒಂದಕ್ಕೊಂದು ಪೂರಕವೇ ಆದರೂ ಅವುಗಳನ್ನು ಒದಗಿಸುವ ಸೌಲಭ್ಯ ಒಂದೇ ಸೂರಿನಡಿ ಇರುವುದು ಕಡಿಮೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ‘ಸತ್ವಂ ಫಿಸಿಯೊಥೆರಪಿ ಮತ್ತು ಫಿಟ್‌ನೆಸ್ ಸೆಂಟರ್‌’ನಲ್ಲಿ ಈ ಎರಡೂ ಸೌಲಭ್ಯಗಳು ಒಂದೇ ಕಡೆ ಸಿಗುತ್ತವೆ.

ವೃತ್ತಿಯಿಂದ ಫಿಸಿಯೊಥೆರಪಿ ವೈದ್ಯರಾದ ವಿಜೇತಾ ಹರಪನಹಳ್ಳಿ, ಫಿಟ್‌ನೆಸ್ ತರಬೇತಿಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದು ಅದನ್ನು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ವೃತ್ತಿ, ಹವ್ಯಾಸ ಎರಡನ್ನೂ ಒಂದೇ ಕಡೆ ಪೂರೈಸಿಕೊಳ್ಳುವ ಅವರ ಪ್ರಯತ್ನವೇ ‘ಸತ್ವಂ’.

ದೇಹ ಸದೃಢವಾಗಿರಬೇಕಾದರೆ ಆಂತರಿಕ ಸೌಂದರ್ಯವನ್ನು ಹೊಂದುವುದೂ ತುಂಬಾ ಅಗತ್ಯ ಎಂಬುದು ವಿಜೇತಾ ಅವರ ನಂಬುಗೆ. ಅದಕ್ಕಾಗಿಯೇ ತಾವು ನೀಡುವ ಫಿಟ್‌ನೆಸ್ ತರಬೇತಿಯನ್ನು ದೈಹಿಕ ಕಸರತ್ತಿಗಷ್ಟೇ ಸೀಮಿತಗೊಳಿಸದೆ ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳ ಕಡೆಗೂ ಒತ್ತು ನೀಡಿದ್ದಾರೆ. ಹಾಗೆಂದೇ ಅವರು ‘ಸತ್ವಂ’ಅನ್ನು ‘ಹೋಲಿಸ್ಟಿಕ್ ಫಿಟ್‌ನೆಸ್ ಸೆಂಟರ್’ ಎಂದು ಕರೆದುಕೊಳ್ಳುತ್ತಾರೆ.

‘ಮಾನಸಿಕವಾಗಿ ಬಲಿಷ್ಠವಾಗಿದ್ದರೆ ಒತ್ತಡ ನಿರ್ವಹಣೆ ಮತ್ತು ನಿವಾರಣೆ ಸುಲಭವಾಗುತ್ತದೆ. ಹೀಗಾಗಿ ನಾನು ದೈಹಿಕ ಕಸರತ್ತಿನ ಜೊತೆಗೆ ಧ್ಯಾನ ಮತ್ತಿತರೆ ಅಂಶಗಳಿಗೂ ಮಹತ್ವ ಕೊಡುತ್ತೇನೆ’ ಎನ್ನುತ್ತಾರೆ ಡಾ.ವಿಜೇತಾ. ಅವರಿಲ್ಲಿ ಆರೋಗ್ಯಕರ ಆಹಾರ ವಿಧಾನದ ಬಗೆಗೂ ತಿಳಿವಳಿಕೆ ನೀಡುತ್ತಾರೆ.

‘ಸತ್ವಂ’ ವಿದ್ಯಾರ್ಥಿಗಳಿಗೆ ವಿಜೇತಾ ಪ್ರತಿ ದಿನವೂ ಒಂದೊಂದು ವಿಶೇಷ ತರಬೇತಿ ನೀಡುತ್ತಾರೆ. ಜಿಮ್‌ನಲ್ಲಿ ಬಗೆಬಗೆಯ ಯಂತ್ರದ ಸಹಾಯದಿಂದ ದೇಹ ದಂಡಿಸುವುದರ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಹೀಗಾಗಿಯೇ ಅವರು ತಮ್ಮ ಫಿಟ್‌ನೆಸ್ ಸೆಂಟರ್‌ನಲ್ಲಿ ಯಂತ್ರಗಳ ಬದಲಿಗೆ ಮೆತ್ತಗಿನ ಬಾಲ್, ಹಗ್ಗ, ಟೈರ್, ಡಂಬೆಲ್ಸ್ ರೀತಿಯ ಸಾಧನಗಳನ್ನು ಹರಡಿಕೊಂಡಿದ್ದಾರೆ.

 ಪಿಲಾಟೇಸ್, ಜುಂಬಾ, ಯೋಗಾ, ಕಾರ್ಡಿಯೊ ಕಿಕ್‌ಬಾಕ್ಸಿಂಗ್, ಏರೋಬಿಕ್ ಮುಂತಾದ ತರಬೇತಿಗಳನ್ನು ವಿಜೇತಾ ಅವರು ನೀಡುತ್ತಾರೆ. ಕೆಲವೊಮ್ಮೆ ತಮ್ಮ ತರಬೇತಿ ಕೇಂದ್ರದಿಂದ ಹೊರಗೆ ಕರೆದುಕೊಂಡು ಹೋಗಿ ಓಟದ ತರಬೇತಿಯನ್ನೂ ಕೊಡುತ್ತಾರೆ. ತರಬೇತಿ ನೀಡುವುದಷ್ಟೇ ಅಲ್ಲ, ಅದರ ಫಲಿತಾಂಶವನ್ನೂ ನಿಯಮಿತವಾಗಿ ಗಮನಿಸುತ್ತಲೇ ಇರುತ್ತಾರೆ. ತಮ್ಮಲ್ಲಿ ತರಬೇತಿ ಪಡೆಯುವ ಪ್ರತಿ ವ್ಯಕ್ತಿಯ ‘ಬಾಡಿ ಮಾಸ್ ಇಂಡೆಕ್ಸ್’ಅನ್ನು ಪ್ರತಿ ತಿಂಗಳೂ ದಾಖಲಿಸಿಕೊಳ್ಳುತ್ತಾರೆ.

ಪ್ರತಿ ದಿನ ಬೆಳಿಗ್ಗೆ 6.15ರಿಂದ 7.15ರ ವರೆಗೆ ಒಂದು ಬ್ಯಾಚ್ ಹಾಗೂ ಮಧ್ಯಾಹ್ನ 11.15ರಿಂದ 12.15ರ ವರೆಗೆ ಮತ್ತೊಂದು ಬ್ಯಾಚ್‌ಗೆ ಫಿಟ್‌ನೆಸ್ ತರಬೇತಿ ನೀಡುತ್ತಾರೆ. ಮಧ್ಯಾಹ್ನದ ಬ್ಯಾಚ್‌ನಲ್ಲಿ ಮಹಿಳೆಯರಿಗಷ್ಟೇ ಅವಕಾಶವಿದೆ. ಆದರೆ ಬೆಳಗಿನ ಅವಧಿಯಲ್ಲಿ ಪುರುಷರು, ಮಹಿಳೆಯರು ಇಬ್ಬರಿಗೂ ಅವಕಾಶ ಕಲ್ಪಿಸಲಾಗಿದೆ. ವರ್ಕ್‌ಔಟ್ ವೇಳೆ ಯಾವುದೇ ರೀತಿಯ ಗಾಯ, ನೋವು ಆಗದಂತೆ ಎಚ್ಚರ ವಹಿಸಿರುವ ವಿಜೇತಾ ಮೆತ್ತಗಿನ ನೆಲಹಾಸು ಬಳಸಿ ತರಬೇತಿ ಕೊಠಡಿ ಸಿದ್ಧಪಡಿಸಿದ್ದಾರೆ.

ಅಥ್ಲೀಟ್‌ಗಳಿಗೂ ತರಬೇತಿ ನೀಡುವುದು ಇಲ್ಲಿನ ವಿಶೇಷ. ಇಲ್ಲಿ ತರಬೇತಿ ಪಡೆಯುತ್ತಿರುವ ಸುಧೀರ್ ಹೆಗಡೆ ಎಂಬುವವರು ಹಿಮಾಚಲ ಪ್ರದೇಶದಲ್ಲಿರುವ ಸಮುದ್ರ ಮಟ್ಟಕ್ಕಿಂದ 19,550 ಅಡಿ ಎತ್ತರದ ಕನಾಮೊ ಪೀಕ್‌ನಲ್ಲಿ ಚಾರಣ ಮಾಡಿದ್ದಾರೆ. ಇದೀಗ ಮತ್ತೊಂದು ಚಾರಣಕ್ಕೆ ಸಿದ್ಧತೆ ನಡೆಸಿದ್ದಾರೆ. ಸಂದೀಪ್ ಹರಪನಹಳ್ಳಿ ಎಂಬುವವರು ಮೈಸೂರಿನ ತೊಣ್ಣೂರಿನಲ್ಲಿ ಇತ್ತೀಚೆಗಷ್ಟೇ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿ, ಎರಡು ಗಂಟೆಗಳಲ್ಲಿ ಯಶಸ್ವಿಯಾಗಿ 5,000 ಮೀ. ಈಜಿದ್ದಾರೆ. ಸೈಕ್ಲಿಂಗ್, ಕ್ರಿಕೆಟ್ ಹೀಗೆ ಬೇರೆ ಬೇರೆ ಕ್ರೀಡೆಗಳಲ್ಲಿ ಸಾಧನೆ ಮಾಡಲು ಹೊರಡುವವರಿಗೆ ವಿಶೇಷ ತರಬೇತಿ ನೀಡಿದ ಇನ್ನೂ ಕೆಲವು ಉದಾಹರಣೆಗಳು ‘ಸತ್ವಂ’ನಲ್ಲಿ ಸಿಗುತ್ತವೆ.

‘ಸತ್ವಂ’ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ವಿಜೇತಾ ಅವರ ಉತ್ತರ, ‘ನಾನು ಈವರೆಗೂ ಎಲ್ಲಿಯೂ ಪ್ರಚಾರ ಮಾಡಿಲ್ಲ. ಬಾಯಿ ಮಾತಿನ ಮೂಲಕವೇ ಒಬ್ಬರಿಂದ ಒಬ್ಬರಿಗೆ ನಮ್ಮ ತರಬೇತಿ ಕೇಂದ್ರದ ಬಗ್ಗೆ ತಿಳಿದಿದೆ’.

ಫಿಟ್‌ನೆಸ್ ತರಬೇತಿಗೆ ‘ಸತ್ವಂ’ನಲ್ಲಿ ಪ್ರತಿ ತಿಂಗಳು ರೂ. 2,000 ಶುಲ್ಕ ವಿಧಿಸಲಾಗುತ್ತದೆ. ನಿತ್ಯ 40-45 ಜನರು ತರಬೇತಿ ಪಡೆಯುತ್ತಿದ್ದಾರೆ. 8 ವರ್ಷದಿಂದ 60 ವರ್ಷದವರೆಗಿನವರು ಇವರಲ್ಲಿದ್ದಾರೆ.

ಫಿಸಿಯೊಥೆರಪಿ ಚಿಕಿತ್ಸೆ

ಬೆಳಗಿನ ಹೊತ್ತು ಫಿಟ್‌ನೆಸ್ ತರಬೇತಿ ನೀಡುವ ವಿಜೇತಾ, ಮಧ್ಯಾಹ್ನ 12.30ರ ನಂತರ ಫಿಸಿಯೊಥೆರಪಿ ಚಿಕಿತ್ಸೆ ಆರಂಭಿಸುತ್ತಾರೆ.

ಪಾರ್ಶ್ವವಾಯು, ಸಂದು ನೋವು, ಬೆನ್ನು ಹುರಿ, ಸ್ನಾಯು ಸಂಬಂಧಿ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳಿಗೆ ವಿಜೇತಾ ಚಿಕಿತ್ಸೆ ನೀಡುತ್ತಾರೆ. ಅವರಲ್ಲದೆ ಬೇರೆ ವೈದ್ಯರೂ ಇಲ್ಲಿ ಸಂದರ್ಶಕರಾಗಿ ಬರುತ್ತಾರೆ.

ಲೆಗಮೆಂಟ್ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಇಲ್ಲಿಗೆ ಬಂದ ಶ್ವೇತಾ ಅಳಗುಂಡಿ ಎಂಬುವವರು ಈಗ ಸಂಪೂರ್ಣ ಗುಣಮುಖರಾಗಿ ಫಿಟ್‌ನೆಸ್ ತರಬೇತಿಯಲ್ಲಿ ಪಾಲ್ಗೊಳ್ಳುವಷ್ಟು ತಯಾರಾಗಿದ್ದಾರೆ. ಇದು ಇಲ್ಲಿನ ಚಿಕಿತ್ಸೆಯ ಫಲಿತಾಂಶದ ಬಗ್ಗೆ ವಿಜೇತಾ ನೀಡುವ ಒಂದು ಉದಾಹರಣೆ.

ತಮ್ಮ ಬಳಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ನಿಂತ ನೀರಾಗಲು ಬಯಸದ ವಿಜೇತಾ, ಕಾಲಕಾಲಕ್ಕೆ ಹೊಸದಾಗಿ ಬರುವ ಚಿಕಿತ್ಸಾ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ಮಾಡಿ, ತಮ್ಮ ಜ್ಞಾನ ವಲಯವನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತಾರೆ. ತಳಮಳ, ಖಿನ್ನತೆ, ಒತ್ತಡವನ್ನು ನಿರ್ವಹಿಸುವ ಹೊಸತೊಂದು ಯಂತ್ರವೀಗ ‘ಸತ್ವಂ’ಗೆ ಹೊಸದಾಗಿ ಸೇರ್ಪಡೆಯಾಗಿದೆ.

ವಿಜೇತಾ ಹರಪನಹಳ್ಳಿ ಕುರಿತು...

ವಿಜೇತಾ ಹರಪನಹಳ್ಳಿ ಎಸ್‌ಡಿಎಂನಲ್ಲಿ ಫಿಸಿಯೊಥೆರಪಿ ಚಿಕಿತ್ಸಾ ವಿಧಾನವನ್ನು ಅಧ್ಯಯನ ಮಾಡಿದ್ದಾರೆ. ಹತ್ತು ವರ್ಷ ವೈದ್ಯೆಯಾಗಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಒಳ್ಳೆಯ ಸೈಕ್ಲಿಸ್ಟ್ ಮತ್ತು ಓಟಗಾರ್ತಿಯೂ ಹೌದು. ‘ಆರೋಗ್ಯವಾಗಿರಿ ಮತ್ತು ಚಲನಶೀಲರಾಗಿರಿ’ ಎಂಬುದು ಅವರ ‘ಸತ್ವಂ’ ಹಿಂದಿನ ಮೂಲಮಂತ್ರ.

ನಾಲ್ಕೈದು ತಿಂಗಳ ಹಿಂದೆ ನಾನು ಏನೂ ಆಗಿರಲಿಲ್ಲ. ಆದರೆ ಸತ್ವಂ ಸೇರಿದ ನಂತರ ನಾವು ಹೇಗೆ ದೂರದೃಷ್ಟಿ ಹೊಂದಿರಬೇಕು, ಒಂದು ಗುರಿಯನ್ನು ನಿಗದಿಪಡಿಸಿಕೊಂಡು ಅದಕ್ಕಾಗಿ ಹೇಗೆ ಸಿದ್ಧತೆ ನಡೆಸಬೇಕು ಮತ್ತು ಅದನ್ನು ಮುಟ್ಟುವುದು ಹೇಗೆ ಎಂಬ ತಂತ್ರವನ್ನು ಕಲಿತೆ
–ಸಂದೀಪ್ ಹರಪನಹಳ್ಳಿ

ಸಾಧನೆ ಮಾಡಬೇಕು ಎಂಬ ಪ್ರತಿ ವ್ಯಕ್ತಿಗೂ ‘ಸತ್ವಂ’ನಲ್ಲಿ ಬೇರೆ ಬೇರೆ ಗೋಲ್‌ಗಳನ್ನು ನಿಗದಿಪಡಿಸಿ, ಅದನ್ನು ಸಾಧಿಸುವ ಸಲುವಾಗಿ ತರಬೇತಿ ನೀಡಲಾಗುತ್ತದೆ ಮತ್ತು ಪ್ರೇರೇಪಿಸಲಾಗುತ್ತದೆ.‘ಸತ್ವಂ’ನಲ್ಲಿ ಪಡೆದ ತರಬೇತಿ ತುಂಬಾ ಸಹಕಾರಿಯಾಗಿದೆ –ಸುಧೀರ್ ಹೆಗಡೆ

ಲೆಗಿಮೆಂಟ್ ಆಪರೇಷನ್ ಮಾಡಿದ ವೈದ್ಯರು ಇನ್ನೂ ಒಂದು ವರ್ಷ ಕಾಲು ಮಡಚಲು ಬರುವುದಿಲ್ಲ, ಮೆಟ್ಟಿಲು ಹತ್ತಬಾರದು ಎಂದಿದ್ದರು. ಜೀವನವೇ ಮುಗಿಯಿತು ಎಂದು ತೀರಾ ನೊಂದುಕೊಂಡಿದ್ದೆ. ಆಪರೇಷನ್ ಆದ ಮೂರು ತಿಂಗಳ ನಂತರ ‘ಸತ್ವಂ’ಗೆ ಹೋದೆ. ಅಲ್ಲಿ ಒಂದೇ ತಿಂಗಳಿನ ಚಿಕಿತ್ಸೆಯಲ್ಲಿ ನಾನು ಚೇತರಿಸಿಕೊಂಡೆ
ಶ್ವೇತಾ ಅಳಗುಂಡಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !