ಬುಧವಾರ, ನವೆಂಬರ್ 20, 2019
25 °C
ಆತಂಕ ವ್ಯಕ್ತಪಡಿಸಿದ ಕೆಎಸ್‌ಐಎ ಅಧ್ಯಕ್ಷ ಆರ್‌. ರಾಜು

‘20 ಲಕ್ಷ ಉದ್ಯೋಗ ಕಡಿತದ ಭೀತಿ’

Published:
Updated:

ಹುಬ್ಬಳ್ಳಿ: ‘ಆರ್ಥಿಕ ಹಿಂಜರಿತ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಸಣ್ಣ‌ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು ಆತಂಕ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ಹಿಂಜರಿತದಿಂದ ರಾಜ್ಯದಲ್ಲಿನ ಶೇ 40ರಷ್ಟು ಸಣ್ಣ ಕೈಗಾರಿಕೆಗಳು ಅತಂತ್ರವಾಗಿವೆ. ಆರು ಲಕ್ಷ ಸಣ್ಣ ಕೈಗಾರಿಕೆಗಳಿಂದ ಬದುಕು ಕಟ್ಟಿಕೊಂಡಿರುವ 60 ಲಕ್ಷ ಉದ್ಯೋಗಿಗಳಲ್ಲಿ 20 ಲಕ್ಷ ಮಂದಿ ಬೀದಿಗೆ ಬರಲಿದ್ದಾರೆ’ ಎಂದರು.

‘ನೋಟು ರದ್ದತಿ, ಜಿಎಸ್‌ಟಿ ಹೆಚ್ಚಳದಿಂದಾಗಿ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚುವಂತಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಹಿಂದೆಂದೂ ಕಂಡರಿಯದಂತಹ ಅತಿವೃಷ್ಟಿಯಿಂದಾಗಿಯೂ ಕೈಗಾರಿಕಾ ವಲಯಕ್ಕೆ ಭಾರಿ ಹಾನಿಯಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕು. ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ಅಳವಡಿಸಬೇಕು’ ಎಂದು ಆಗ್ರಹಿಸಿದರು.

‘ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ತೀವ್ರ ತೊಂದರೆಯಾಗಿದೆ. ನೆರೆ ಹಾವಳಿಯಿಂದ ಅನೇಕ ಕೈಗಾರಿಕೆಗಳು ಸ್ಥಗಿತಗೊಂಡಿದ್ದು, ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. ಇದಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಅವು ಸಣ್ಣ ಕೈಗಾರಿಕೆಗಳಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿ, ಕೈಗಾರಿಕಾ ನೀತಿ ಸರಳಗೊಳಿಸಬೇಕು’ ಎಂದರು.

ಸಂಘದ ಉಪಾಧ್ಯಕ್ಷ ಕೆ.ಬಿ. ಅರಸಪ್ಪ, ಗೌರವ ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಜಂಟಿ ಕಾರ್ಯದರ್ಶಿ ಟಿ.ಎಂ. ವಿಶ್ವನಾಥ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಬಸವರಾಜ ಜವಳಿ ಇದ್ದರು.

ಪ್ರತಿಕ್ರಿಯಿಸಿ (+)