ಧಾರವಾಡ: ‘ನ್ಯಾನೋ ಯೂರಿಯಾ ಮೂಲಕ ಹೊಸ ಕ್ರಾಂತಿ ನಿರ್ಮಾಣವಾಗಿದೆ. ಕೃಷಿಗೆ ಡ್ರೋನ್ ಖರೀದಿಗೆ ಸಬ್ಸಿಡಿ ಹಾಗೂ ಬಳಕೆಗೆ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಬೀಜ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರವು ರೈತ ಬೀಜ ಮಿತ್ರ ಕಾರ್ಯಕ್ರಮದಡಿ ಬೀಜೋತ್ಪಾದನೆಗೆ ಕೃಷಿ ಇಲಾಖೆಗಳಿಗೆ, ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿದೆ. ಬೀಜೋತ್ಪಾದನೆ, ನ್ಯಾನೊ ಯೂರಿಯಾ ಮೊಲಾದವುಗಳಿಗೆ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದರು.
‘ಮಳೆ, ಚಳಿ, ತಾಪ ಮುನ್ಸೂಚನೆಯಲ್ಲಿ ಶೇ 95ರಷ್ಟು ನಿಖರತೆ ಸಾಧಿಸಲಾಗಿದೆ. ಇದು ಮುಂದುವರಿದ ರಾಷ್ಟ್ರಗಳಿಗೆ ಸರಿ ಸಮಾನವಾಗಿದೆ. ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಅವರ ಬದುಕಿನಲ್ಲಿ ಬದಲಾವಣೆ ತರಬೇಕು’ ಎಂದರು.
‘ಕೃಷಿ ಪಂಪ್‌ಸೆಟ್‌ಗಳಿಗೆ ಸೌರವಿದ್ಯುತ್ ಬಳಸಲು ರೈತರನ್ನು ಪ್ರೋತ್ಸಾಹಿಸಬೇಕು. ‘ಕುಸುಮ್’, ‘ಸೂರ್ಯ ಘರ್’ ಯೋಜನೆಗಳ ಬಗ್ಗೆ ತಿಳಿಸಬೇಕು. ಪಂಪ್‌ಸೆಟ್‌ಗೆ ಸೌರಶಕ್ತಿ ವ್ಯವಸ್ಥೆ ಮಾಡಿದರೆ ನೀರು ಹಾಯಿಸಲು ರಾತ್ರಿ ಹೊತ್ತಿನಲ್ಲಿ ತೋಟ, ಹೊಲಕ್ಕೆ ಹೋಗುವ ಪ್ರಮೇಯ ಇರಲ್ಲ. ರಾಜ್ಯ ಸರ್ಕಾರವು ವಿದ್ಯುತ್ ಪುಕ್ಕಟ್ಟೆಯಾಗಿ ಪೊರೈಸುತ್ತಿದೆ. ಪುಕ್ಕಟ್ಟೆಯಾಗಿ ವಿದ್ಯುತ್ ಪೂರೈಸಿ ಹಿಮಾಚಲ ಪ್ರದೇಶ ಸರ್ಕಾರ ದಿವಾಳಿಯಾಗಿದೆ’ ಎಂದು ಹೇಳಿದರು.
‘ರೈತರ ಸಾಲ ಮನ್ನಾಕ್ಕೆ ಕೆಲವರು ಒತ್ತಾಯಿಸುತ್ತಾರೆ. ವಿ.ಪಿ.ಸಿಂಗ್ ಹಾಗೂ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಒಟ್ಟು ಎರಡು ಬಾರಿ ದೇಶದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಈಗ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗಳಿಗೇ ₹3.05 ಲಕ್ಷ ಕೋಟಿ ಜಮೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಕೃಷಿ ಉತ್ಪನ್ನಗಳ (ಭತ್ತ, ಜೋಳ, ಗೋಧಿ, ಹೆಸರು, ಸೂರ್ಯಕಾಂತಿ...) ಬೆಲೆ ಹೆಚ್ಚಾಗಿದೆ. ವಿವಿಧ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಎಂಎಸ್‌ಪಿ) ಹೆಚ್ಚಿಸಲಾಗಿದೆ. 2014ರಲ್ಲಿ ಕ್ವಿಂಟಲ್‌ಗೆ ಭತ್ತ ಎಂಎಸ್‌ಪಿ ದರ ₹ 1310 ಇತ್ತು, ಈಗ ₹ 2320ಕ್ಕೆ ಹೆಚ್ಚಿಸಲಾಗಿದೆ. ಜೋಳದ ದರ ₹ 2150 ಇತ್ತು, ಈಗ ₹ 3420ಕ್ಕೆ ಹೆಚ್ಚಿಸಲಾಗಿದೆ. ಉಕ್ರೇನ್–ರಷ್ಯಾದ ಯುದ್ಧ ನಂತರ ಬೇರೆ ದೇಶಗಳಲ್ಲಿ ರಸಗೊಬ್ಬರ ದರ ಹೆಚ್ಚಾಗಿದೆ. ಭಾರತದಲ್ಲಿ ಗೊಬ್ಬರ ಬೆಲೆ ಹೆಚ್ಚಾಗಿಲ್ಲ ಎಂದರು.
ಬೀಜೋತ್ಪಾದನೆಯಲ್ಲಿ ಸಾಧನೆ ಮಾಡಿದ ಪರೀಕ್ಷಿತ್ ಗೌಡ, ಪ್ರಭುಲಿಂಗ ಗುಡಿ (ಪ್ರಶಸ್ತಿ ಪುರಸ್ಕೃತರ ಗೈರಾಗಿದ್ದರಿಂದ ಪುತ್ರ ಸ್ವೀಕರಿಸಿದರು) ಹಾಗೂ ಶಿಲ್ಪಾ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಂಕೇತಿಕವಾಗಿ ಕೆಲ ರೈತರಿಗೆ ಬೀಜ ವಿತರಣೆ ಮಾಡಲಾಯಿತು.
ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆ ಜಯಲಕ್ಷ್ಮಿ, ಶಾಸಕ ಮಹೇಶ ಟೆಂಗಿನಕಾಯಿ, ಕೃಷಿ ಮೇಳದ ಅಧ್ಯಕ್ಷ ಪ್ರೊ.ಎಸ್.ಎಸ್.ಅಂಗಡಿ, ಉಪಾಧ್ಯಕ್ಷ ಪ್ರೊ.ಬಿ.ಡಿ.ಬಿರಾದಾರ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ್, ರವಿಕುಮಾರ, ಪಾರ್ವತಿ ಪಾಲ್ಗೊಂಡಿದ್ದರು.
50 ಸಾವಿರ ಕ್ವಿಂಟಲ್ ಬೀಜ ಉತ್ಪಾದನೆ ಗುರಿ: ಕುಲಪತಿ
‘ಬೀಜ ಗ್ರಾಮ ಯೋಜನೆಯಡಿ ಸಾಂಪ್ರದಾಯಿಕ ತಳಿಗಳ ಪುನರುಜ್ಜೀವನಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಬೀಜ ಘಟಕದಿಂದ ಈ ವರ್ಷ 50 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಉತ್ಪಾದನೆ ಗುರಿ ಇದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದರು.
‘ಬೀಜೋತ್ಪಾದನೆ ಸಂಸ್ಥೆಗಳು ಮತ್ತು ಸಂಶೋಧನೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಹೊಸ ತಳಿಗಳನ್ನು ಪರಿಚಯಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. 31 ರೈತ ಉತ್ಪಾದಕ ಸಂಘಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ರೈತರ ಸಹಭಾಗಿತ್ವದಲ್ಲಿ ಬೀಜೋತ್ಪಾದನೆ ಮಾಡಿ ರೈತರಿಗೆ ತಲುಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.