ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ರಂಗದ ಭರವಸೆ ಸ್ವಸಹಾಯ ಸಂಘಗಳು: ಸಚಿವ ಮುನೇನಕೊಪ್ಪ

ನವೋದಯ ಸ್ವಸಹಾಯ ಸಂಘಗಳ ಬೃಹತ್ ಸಮಾವೇಶ, ಸಾಲ ವಿತರಣಾ ಸಮಾರಂಭ
Last Updated 30 ಅಕ್ಟೋಬರ್ 2022, 11:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಿಳಾ ಸ್ವಸಹಾಯ ಸಂಘಗಳು ಸಹಕಾರ ರಂಗದ ಭರವಸೆಯಾಗಿವೆ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವಲ್ಲಿ ಸಂಘಗಳ ಪಾತ್ರ ದೊಡ್ಡದು. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸಹಕಾರ ರಂಗ ಮಾಡುತ್ತಿದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನವೋದಯ ಉತ್ಸವದ ಅಂಗವಾಗಿ, ನವನಗರದಲ್ಲಿ ಭಾನುವಾರ ನಡೆದ ಸ್ವಸಹಾಯ ಸಂಘಗಳ ಬೃಹತ್ ಸಮಾವೇಶ ಮತ್ತು ಸಾಲ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಮಾಡಿದ ಶ್ರೇಯಸ್ಸು ಮಾಜಿ‌ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರಿಗೆ ಸಲ್ಲುತ್ತದೆ. ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ‌ ಅವರು ಕೂಡ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಹೊಸದಾಗಿ ನಾಲ್ಕು ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಗದೀಶ ಶೆಟ್ಟರ್, ಐತಿಹಾಸಿಕ ಕಾರ್ಯಕ್ರಮವಿದು. ರಾಜೇಂದ್ರ ಕುಮಾರ್ ಅವರು ಈ ಕ್ಷೇತ್ರದ ಮೇರು ವ್ಯಕ್ತಿ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ₹25 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದೆ. ನಮ್ಮ ತಂದೆ ಎಸ್.ಎಸ್. ಶೆಟ್ಟರ್ ಕೂಡ ಸಹಕಾರ ರಂಗದಲ್ಲಿದ್ದರು. ಆರ್ಥಿಕವಾಗಿ ಹಿಂದುಳಿದವರ ಸ್ವಾವಲಂಬನೆಗೆ ಸಹಕಾರ ಸಂಘಗಳು ಚಾಲಕ ಶಕ್ತಿಯಾಗಿವೆ ಎಂದು ಹೇಳಿದರು.

ಸಹಕಾರ ರಂಗಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಅದಕ್ಕಾಗಿ ಪ್ರತ್ಯೇಕ ಸಹಕಾರ ಇಲಾಖೆಯನ್ನು ಸ್ಥಾಪಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರು ಇಲಾಖೆಯ ಹೊಣೆ ಹೊತ್ತಿದ್ದಾರೆ. ಸಂಘಗಳು ಸಹಕಾರ ತತ್ವದಡಿ ಉದ್ಯಮ ಸ್ಥಾಪಿಸಿ, ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಂಘಗಳಿಗೆ ಸಾಲಪತ್ರಗಳನ್ನು ವಿತರಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಉತ್ತರ ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ತಮ್ಮ ಸಹಕಾರ ಬ್ಯಾಂಕ್ ಮೂಲಕ ಹಣಕಾಸಿನ ನೆರವು ನೀಡಿದವರು ರಾಜೇಂದ್ರ ಕುಮಾರ್. ನೂರಾರು ಕುಟುಂಬಗಳಿಗೆ ಉದ್ಯೋಗ ಒದಗಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.

ಪಡೆದ ಸಾಲವನ್ನು ಅತ್ಯಂತ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಶ್ರೇಯಸ್ಸು ಸ್ವಸಹಾಯ ಸಂಘಗಳಿಗೆ ಸಲ್ಲುತ್ತದೆ. ಹಿಂದೊಮ್ಮೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಸ್ವಸಹಾಯ ಸಂಘದ ಮಹಿಳಾ ಸದಸ್ಯರೊಬ್ಬರ ಕಾಲು ಮುಟ್ಟಿ ನಮಸ್ಕರಿಸಿದ್ದರು

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ಸಾವಯವ ಬೆಲ್ಲದ ಉತ್ಪಾದನೆಗೆ ಮುಂದಾಗಿದ್ದಾರೆ. ಅದಕ್ಕೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಮಾರುಕಟ್ಟೆ ಒದಗಿಸಬೇಕು. ಸ್ವಸಹಾಯ ಸಂಘಗಳು ಕೂಡ ಬೆಲ್ಲ ಮಾರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಹಿಳಾ ಸ್ವಸಹಾಯ ಸಂಘಗಳ ಮೂಲಕ, ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವುದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮೂಲ ಉದ್ದೇಶವಾಗಿದೆ ಎಂದರು.

ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಆರಂಭವಾದ ಈ ಅಭಿಯಾನ, ಜಾತಿ ಮತ್ತು ಧರ್ಮಗಳನ್ನು ಮೀರಿ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುತ್ತಿದೆ. ರೈತರ ಸಾವಯವ ಬೆಲ್ಲಕ್ಕೆ ಮಾರುಕಟ್ಟೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಅತಿಥಿಗಳನ್ನು ಸ್ವಾಗತಿಸಿದರು.

ಶಾಸಕ ಅರವಿಂದ ಬೆಲ್ಲದ, ಲಿಂಗರಾಜ ಚಪ್ಪರದ, ಅಜ್ಜಪ್ಪ ಹೊರಕೇರಿ, ಮುತ್ತಣ್ಣ ಯಲಿಗಾರ‌, ಮುಂತಾದವರು ಇದ್ದರು. ಸಮಾರಂಭಕ್ಕೆ ಮುಂಚೆ, ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ಅಮರಗೋಳದಿಂದ ನವೋದಯ ಕಾಲೊನಿವರೆಗೆ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT