ಪತ್ರಿಕೋದ್ಯಮ ರಸಋಷಿ ‘ಪಾಪು'

7

ಪತ್ರಿಕೋದ್ಯಮ ರಸಋಷಿ ‘ಪಾಪು'

Published:
Updated:
Prajavani

ಕನ್ನಡ ಪತ್ರಿಕೋದ್ಯಮಕ್ಕೆ ಅಮೋಘ ಸೇವೆ ಸಲ್ಲಿಸಿರುವ ಶ್ರೇಷ್ಠ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಚಲಿಸುವ ವಿಶ್ವಕೋಶ. ನೂರು ವರ್ಷ ತುಂಬಿದ ಅವರಿಗೀಗ ಶತಮಾನೋತ್ಸವದ ಸಂಭ್ರಮ.

ಪಾಪು ಅವರು ನಿರ್ಭೀತ ಪತ್ರಿಕೋದ್ಯಮಿ, ಬದುಕಿನ ಮೌಲ್ಯಗಳನ್ನು ಅವರು ತಮ್ಮ ಲೇಖನಿಗಳಲ್ಲಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ.ರಾಜ್ಯದಲ್ಲಿ 1940–50ರ ದಶಕದಲ್ಲಿ ನಡೆದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡವರು.

‘ಪ್ರಪಂಚ’ ವಾರಪತ್ರಿಕೆ (1954), ‘ವಿಶ್ವವಾಣಿ’ (1959)ದಿನ ಪತ್ರಿಕೆ, ಸಂಗಮ(1956) ಮನೋರಮಾ(1961) ಸ್ತ್ರೀ (1964) ವಿವಿಧ ನಿಯತಕಾಲಿಕೆಗಳನ್ನು ಪ್ರಾರಂಭಿಸಿ ಮುನ್ನಡೆಸಿದವರು.
‘ಪ್ರಪಂಚ’ ವಾರ ಪತ್ರಿಕೆಯಲ್ಲಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ, ಬದುಕುವುದಕ್ಕೆ ಬೇಕು ಈ ಮಾತು, ಅನುಭವ ಇರುವಲ್ಲಿ ಅಮೃತತ್ವ, ಕರ್ನಾಟಕದ ಕಥೆ, ಭಾರತ ದರ್ಶನ, ಪ್ರಪಂಚ ಪ್ರದಕ್ಷಿಣೆ , ಈ ಸಂಗತಿ ತಿಳಿಯಿರಿ, ಮುಂತಾದ ಶೀರ್ಷಿಕೆಯಡಿ ಪ್ರಕಟವಾಗುತ್ತಿದ್ದ ಅವರ ಬರಹಗಳು ಜನಪ್ರಿಯವಾಗಿದ್ದವು. ಅರವತ್ತರ ದಶಕದಲ್ಲಿ ವಾಚಕರು ‘ಪ್ರಪಂಚ’ ಪತ್ರಿಕೆ ಬರುವುದನ್ನು ಎದುರು ನೋಡುವಂತೆ ಮಾಡಿದ್ದರು ಪಾಪು.
‘ವಿಶ್ವವಾಣಿ’ ದಿನ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಅದೆಷ್ಟೋ ಸಂಪಾದಕೀಯಗಳು ಸರ್ಕಾರ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಅವರು ಬರೆದ ಒಂದು ಸಂಪಾದಕೀಯ ಭಾರತದ ವಿದೇಶಾಂಗ ನೀತಿಗೆ ಅಳವಡಿಕೆಯಾಗಿದ್ದು ಇದಕ್ಕೆ ನಿದರ್ಶನ.

ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಅವರು ಮಾಡಿರುವ ಕನ್ನಡ ಕೆಲಸ ಸ್ಮರಣೀಯವಾದುದು. ರಾಜ್ಯದ ಎಲ್ಲ ಭಾಗಗಳಿಗೂ ಸಂಚರಿಸಿದ ಅವರು ಕಚೇರಿಗಳಲ್ಲಿ ಆಡಳಿತದಲ್ಲಿ ಕನ್ನಡ ಜಾರಿ ಯಶಸ್ವಿಗೊಳಿಸಿದವರು. ಎರಡು ಸಲ ರಾಜ್ಯ ಸಭಾ ಸದಸ್ಯರಾಗಿದ್ದವರು(1962-1974). ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅವರ ಮಗ ರಾಜೀವ ಗಾಂಧಿ ಅವರ ಒಡನಾಟ ಹೊಂದಿದ್ದವರು. ಹೀಗೆ ಅವರು ದೇಶದ ಪ್ರಮುಖ ನಾಯಕರ ಜೊತೆಗೆ ಸಂಪರ್ಕ ಹೊಂದಿದವರು.

1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ ಅವರು ’ನಾವು ಬಾಯಿ ಬಿಡಲಾರೆವು’ ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಬರೆದವರು.ಬೆಳಗಾವಿಯಲ್ಲಿ 2003ರಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ನಂತರ ಅದೇ ಬೆಳಗಾವಿಯಲ್ಲಿ ನಡೆದ 2ನೇ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದವರು. ರಾಷ್ಟ್ರ ಧ್ವಜ ತಯಾರಿಕೆ ಹುಬ್ಬಳ್ಳಿ ಬೆಂಗೇರಿಯ ಕರ್ನಾಟಕ ಖಾದಿ ಫೆಡರೇಶನ್ ಅಧ್ಯಕ್ಷರಾಗಿ ಅದರ ಬೆಳವಣಿಗೆಗೆ ಶ್ರಮಿಸಿದವರು. ನೃಪತುಂಗ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕೃತರು.

ಕರ್ನಾಟಕದ ಪ್ರತಿಷ್ಠಿತ ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ನಿರಂತರ 50 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ಅವರದು.

ಕರ್ನಾಟಕ ಕಾಲೇಜಿನಲ್ಲಿ ಓದುತ್ತಿರುವಾಗಲೇ ಮಹಾತ್ಮ ಗಾಂಧಿ ಅವರ ಪ್ರಭಾವಕ್ಕೆ ಒಳಗಾಗಿದ್ದ ಅವರು ಖಾದಿದೀಕ್ಷೆ ತೊಟ್ಟು ಜೀವನಪೂರ್ತಿ ಖಾದಿ ಬಟ್ಟೆಯನ್ನೇ ಧರಿಸುತ್ತ ಬಂದವರು. 1949ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿರ್ವಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಜಾಗತಿಕ ವಿದ್ಯಮಾನಗಳನ್ನು ಬೋಧಿಸುತ್ತಿದ್ದ ಹಾಗೂ ‘ಸಿಟಿಜನ್ಸ್ ಆಫ್ ವಲ್ಡ್‌’ ತತ್ವದ ಪ್ರೊ ಜೋಸೆಫ್ ಬ್ರಾಂಡ್ಟ್ ಪಾಪು ಅವರ ನೆಚ್ಚಿನ ಪ್ರಾಧ್ಯಾಪಕರು. ಅವರು ಎಷ್ಟು ಪ್ರಾಮಾಣಿಕರು ಎಂದರೆ ಪಾಪು ಜೊತೆಗೆ ಓದುತ್ತಿದ್ದ ಅವರ ಸ್ವಂತ ಮಗನನ್ನು ಸರಿಯಾಗಿ ಕಲಿತಿಲ್ಲವೆಂಬ ಕಾರಣಕ್ಕೆ ಫೇಲ್ ಮಾಡಿದ್ದನ್ನು ಸ್ಮರಿಸುತ್ತಾರೆ. ಪ್ರೊ.ಬ್ರಾಂಡ್ಟ್ ಜಗತ್ತಿನ ಶ್ರೇಷ್ಠ ವಿಜ್ಞಾನಿ ಐನ್‌ಸ್ಟಿನ್ ಅವರನ್ನು ಪಾಪು ಅವರಿಗೆ ಪರಿಚಯಿಸಿದ್ದ. ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಬರುವಾಗ, ಡೀನ್ ಪಾಪು ಅವರಿಗೆ ಔತಣಕೂಟ ಏರ್ಪಡಿಸಿ ಬೀಳ್ಕೊಟ್ಟಿದ್ದರು.

ಪಾಪು ಅವರು ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್ ದಿನ ಪತ್ರಿಕೆ, ರಷ್ಯಾ ದೇಶದ ಪ್ರಾವ್ಡಾ ಮತ್ತು ಇಜುವೆಸ್ಟೆಯಾ(ಸತ್ಯ) ಮುಂತಾದ ಪ್ರಪಂಚದ ಪ್ರಮುಖ ದಿನ ಪತ್ರಿಕೆಗಳ ಸಂಪಾದಕೀಯ ವಿಭಾಗಗಳಿಗೆ ಭೇಟಿ ನೀಡಿ ಬಂದವರು.

ಇತ್ತೀಚೆಗೆ ಪತ್ರಿಕೋದ್ಯಮದ ಮೌಲ್ಯಗಳು ಬದಲಾಗಿವೆ. ದೇಶದಲ್ಲಿ ಒಳ್ಳೊಳ್ಳೆ ಪತ್ರಿಕೆಗಳು ನಿಲ್ಲತೊಡಗಿವೆ. ವೀಕ್ ನಂತಹ ಪತ್ರಿಕೆ ನಿಂತು ಹೋದದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಆಂಧ್ರದ ‘ಪ್ರೀ ಪ್ರೆಸ್’ ಸಂಪಾದಕರಾಗಿದ್ದ ಎಸ್. ಸದಾನಂದ ‘ಮೇಕರ್ಸ್‌ ಆಫ್ ನ್ಯೂಸ್‌ ಪೇಪರ್ ಮೆನ್’ ಎಂದು ಪ್ರಸಿದ್ಧರು. ಅವರು ಬಹಳಷ್ಟು ಜನ ಪತ್ರಕರ್ತರನ್ನು ತಯಾರು ಮಾಡಿದವರು. ಮಾತ್ರವಲ್ಲದೆ ಪಾಪು ಅವರನ್ನು ತಮ್ಮ ಇಂಗ್ಲೀಷ್ ಪತ್ರಿಕೆ ತೆಗೆದುಕೊಳ್ಳಲು ಬಹಳಷ್ಟು ಪ್ರಯತ್ನಿಸಿದ್ದನ್ನು ಪಾಪು ಮೆಲುಕು ಹಾಕುತ್ತಾರೆ.

ಪಾಪು ಅವರಿಗೆ ಇರುವ ಅಪಾರ ಜ್ಞಾನ, ಜೊತೆಗೆ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುವ ಇನ್ನೊಂದು ವಿಶೇಷತೆ ಎಂದರೆ ಅವರ ಅಗಾಧ ನೆನಪಿನ ಶಕ್ತಿ. ಅವರು ಜೀವಮಾನದಲ್ಲಿ ನೋಡಿದ ಸ್ಥಳಗಳಿರಲಿ, ವ್ಯಕ್ತಿಗಳಿರಲಿ, ಘಟನೆಗಳಿರಲಿ ಎಲ್ಲವನ್ನೂ ಕರಾರುವಾಕ್ಕಾಗಿ ಸಮಯ, ದಿನಾಂಕ, ಇಸ್ವಿಗಳನ್ನು ಹೇಳಬಲ್ಲವರು.
ಇಂದುಮತಿ ಪಾಟೀಲ ಅವರು ಪಾಟೀಲ ಪುಟ್ಟಪ್ಪ ಅವರ ಪತ್ನಿ .ಅವರಿಗೆ ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳು (ಒಬ್ಬ ಮಗ, ಮಗಳು ತೀರಿಹೋಗಿದ್ದಾರೆ) ವೈಯಕ್ತಿಕವಾಗಿ ಏನು ದೊಡ್ಡ ಆಸ್ತಿ ಮಾಡಿಕೊಳ್ಳದ ಪಾಪು ಆದರ್ಶದ ಜೀವನ ನಡೆಸುತ್ತ ಬಂದವರು.

ಕವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭಕ್ಕೆ ಶ್ರಮಿಸಿದವರು : ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ ಪಾಪು ಅವರಿಗೆ ಉತ್ತರ ಕರ್ನಾಟಕದಲ್ಲಿಯೇ ಏಕೈಕ ವಿಶ್ವವಿದ್ಯಾಲಯ ಕರ್ನಾಟಕ ವಿವಿಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣ ಪ್ರಾರಂಭವಾಗಬೇಕು ಎಂಬುದು ಘನ ಉದ್ದೇಶವಾಗಿತ್ತು. ಅದಕ್ಕಾಗಿ ಬಹುವಾಗಿ ಶ್ರಮಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ಸ್ಥಾಪನೆಗಾಗಿ ಪಾಟೀಲ ಪುಟ್ಟಪ್ಪ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ನಾಡಿಗಕೃಷ್ಣಮೂರ್ತಿ, ಮತ್ತು ‘ಮದ್ರಾಸ ಮೇಲ್’ ಪತ್ರಿಕೆ ಸಂಪಾದಕ ಪಿ.ವಿ.ರಾಜನ್ ಅವರನ್ನೊಳಗೊಂಡ ಒಂದು ಕಮಿಟಿ ನೇಮಕವಾಗಿ ಅದು ವರದಿ ಸಲ್ಲಿಸಿತು. ಇದಾದ ನಂತರ ಮುಂದೆ ಡಾ. ಡಿ.ಎಂ.ನಂಜುಂಡಪ್ಪ ಅವರ ಕುಲಪತಿಗಳಾಗಿದ್ದಾಗ 1982–83ರ ಶೈಕ್ಷಣಿಕ ಸಾಲಿಗೆ ಕವಿವಿಯಲ್ಲಿ ‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ’ ವಿಭಾಗ ಪ್ರಾರಂಭವಾಯಿತು. ಆಗ ವಿಭಾಗದ ಕಾರ್ಯಚಟುವಟಿಕೆಗಳಿಗೆ ಸಲಹೆ ನೀಡಲು ‘ಅಡ್ವೈಜರಿ ಕಮಿಟಿ’ ಮಾಡಲಾಗಿತ್ತು. ಅದರಲ್ಲಿ ಡಾ. ಪಾಟೀಲ ಪುಟ್ಟಪ್ಪ, ವಿಶಾಲ ಕರ್ನಾಟಕ ದಿನ ಪತ್ರಿಕೆ ಸಂಪಾದಕ, ಮಾಜಿ ಸಚಿವ ಶಾಸಕ ಎಚ್.ಕೆ.ಪಾಟೀಲ ಅವರುಗಳಿದ್ದರು.(ಪ್ರೊ.ಎ.ಎಸ್. ಬಾಲಸುಬ್ರಮಣ್ಯ ಮತ್ತು ಪ್ರೊ.ಎಂ.ಗಂಗಾಧರಪ್ಪ ಇಬ್ಬರು ಅಧ್ಯಾಪಕರಾಗಿದ್ದರು.) ಹೀಗೆ ಕವಿವಿಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಪ್ರಾರಂಭಿಸಲು ಕಾರಣೀಭೂತರಾದ ಪಾಪು ಅವರು ನಂತರ ದಿನಗಳಲ್ಲಿ ಈ ವಿಭಾಗದ ಪಠ್ಯಕ್ರಮ ರಚನೆ, ಅಭ್ಯಾಸ ಮಂಡಳಿ( ಬಿಓಎಸ್) ಮತ್ತು ಪರೀಕ್ಷಾ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿ ತಮ್ಮ ಪತ್ರಿಕೋದ್ಯಮದ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟವರು. ವಿಶೇಷ ಉಪನ್ಯಾಸಗಳ ನೀಡಿದವರು.

ಕಳೆದ ಮೂವತ್ತಾರು ವರ್ಷಗಳಲ್ಲಿ ಈ ವಿಭಾಗದಲ್ಲಿ ಓದಿದ 300ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶದ ಬೇರೆ ಬೇರೆ ಕಡೆ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1980ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪಾಟೀಲ ಪುಟ್ಟಪ್ಪನವರನ್ನು ಕರೆದು ಸನ್ಮಾನಿಸಿದ್ದರು . ಮಾತ್ರವಲ್ಲದೆ ಅವರ ’ಮಾನಸ ಗಂಗೋತ್ರಿ’ ವಿಶೇಷ ಸಂಚಿಕೆಯೊಂದನ್ನು ಹೊರತಂದಿದ್ದರು. ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಬಿ.ಓ.ಎಸ್. ಮತ್ತು ಬಿಓಇ ಸದಸ್ಯರಾಗಿದ್ದವರು. ಅಲ್ಲದೆ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಜೊತೆಗೆ ಅವರು ಸಂಪರ್ಕ ಹೊಂದಿ ಪತ್ರಿಕೋದ್ಯಮ ಶಿಕ್ಷಣ ನೀಡುವಲ್ಲಿ ಮಾರ್ಗದರ್ಶನ ನೀಡಿದವರು.

ಪಾಪು ಅವರು ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಜಗತ್ತಿನ ಬೇರೆ ಬೇರೆ ದೇಶಗಳ ಪ್ರತಿಭಾನ್ವಿತ ಪತ್ರಕರ್ತರನ್ನು ಭೆಟ್ಟಿ ಮಾಡಿದವರು.ಆದರೆ ಅವರ ದೃಷ್ಟಿಯಲ್ಲಿ ಪತ್ರಿಕೋದ್ಯಮದಲ್ಲಿ ಅದ್ಭುತ ಪತ್ರಕರ್ತ ಎಂದರೆ ಮೊಹರೆ ಹಣಮಂತರಾಯರು. ‘ಕನ್ನಡ ಪತ್ರಿಕೋದ್ಯಮ ಭೀಷ್ಮ’ ಎಂದು ಹೆಸರುವಾಸಿಯಾದ ಮೊಹರೆ ಹಣಮಂತರಾಯರು ಪಾಪು ಅವರ ಗುರುಗಳು.

ಪಾಪು ಅವರು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾರಂಭಕ್ಕೆ ಅದರ ಬೆಳವಣಿಗೆಗೆ ಶ್ರಮಿಸಿದರು. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಆರ್ಥಿಕ ನೆರವಿನಿಂದ ‘ಪಾಪು’ ಪ್ರಪಂಚ ಪತ್ರಿಕಾ ಸಂಪಾದನೆಯ ಪ್ರತಿಗಳನ್ನು ಡಿಜಟಿಲೀಕರಣ ಮಾಡಲಾಯಿತು. ಮತ್ತು ಅವರು ಮೂಲ ಸಂಪುಟಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗಕ್ಕೆ ನೀಡಿದ್ದಾರೆ. ಅವರ ಪತ್ನಿ ದಿವಂಗತ ಇಂದುಮತಿ ಪಾಟೀಲ ಅವರ ಹೆಸರಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ನಗದು ಪುರಸ್ಕಾರ ಕೂಡ ಇಟ್ಟಿದ್ದಾರೆ.

‘ಇಂದಿನ ವಿದ್ಯಾರ್ಥಿಗಳಿಗೆ, ಯುವ ಪತ್ರಕರ್ತರಿಗೆ ಆಸಕ್ತಿ ಕಡಿಮೆ, ಜ್ಞಾನವನ್ನು ತಿಳಿದುಕೊಳ್ಳಬೇಕು, ವಿಸ್ತಾರ ಮಾಡಿಕೊಳ್ಳಬೇಕು ಎನ್ನುವ ಆಸಕ್ತಿ ಇಲ್ಲ, ಓದುವುದು ಕಡಿಮೆಯಾಗಿದೆ’ ಎನ್ನುತ್ತಾರೆ ಪಾಪು.
‘ವ್ಯಕ್ತಿಯನ್ನು ಹಣದಿಂದ ಅಳೆಯುವ ಪ್ರವೃತ್ತಿ ಸರಿಯಾದುದಲ್ಲ. ಆ ವ್ಯಕ್ತಿಯ ಜ್ಞಾನ, ತಿಳಿವಳಿಕೆ ಹಾಗೂ ಮೌಲ್ಯಗಳಿಗೆ ಬೆಲೆ ಕೊಡಬೇಕು. ಹಣದಿಂದ ಸಂತೋಷ ಸಿಗುವುದಿಲ್ಲ’ ಎನ್ನುತ್ತಾರೆ.

ಜ.14ರಂದು ಅವರ ಜನ್ಮಶತಮಾನೋತ್ಸವವನ್ನು ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಿರುವ ಬಗ್ಗೆ ಕೇಳಿದಾಗ, ‘ಸಂತೋಷವಾಗುತ್ತಿದೆ. ಆದರೆ ಹೆಂಡತಿ ಇಲ್ಲದ ಮನೆ, ಮನೆಯೇ ಅಲ್ಲ’ ಎಂದು ತಮ್ಮ ಪತ್ನಿ ಇಂದುಮತಿ ಪಾಟೀಲರನ್ನು ನೆನೆದು ಪಾಪು ಮಾತು ಮುಗಿಸಿದರು.

ಲೇಖಕ: ಮುಖ್ಯಸ್ಥ,ಪತ್ರಿಕೋದ್ಯಮ ಮತ್ತು
ಸಮೂಹ ಸಂವಹನ ವಿಭಾಗ, ಕೆಯುಡಿ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !