ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕೆಫೆ ಎಂಬ ಚಿಣ್ಣರ ಹೋಟೆಲ್‌

Last Updated 17 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ಧಾರವಾಡದ ಬಾಲಬಳಗ ಶಾಲೆಯಲ್ಲಿ ಶನಿವಾರದ ಆ ದಿನ ಎಂದಿನಂತಿರುವುದಿಲ್ಲ. ಬೆಳಿಗ್ಗೆ ಪಾಠ, ಪ್ರವಚನದ ಬದಲು ತಟ್ಟೆ, ಚಮಚೆ ಸದ್ದಿನ ಜೊತೆಗೆ ತರಕಾರಿಗಳನ್ನು ಹೋಳುವ ಶಬ್ದ ಎಲ್ಲೆಡೆಯೂ ಕೇಳಿ ಬರುತ್ತದೆ. ಅರೇ, ಹಾಗಾದರೆ ಶಾಲೆಯ ಮಕ್ಕಳು ಏನು ಮಾಡುತ್ತಾರೆ ಎಂಬ ಸಂದೇಹ ನಿಮ್ಮನ್ನು ಕಾಡಬಹುದು.

ನಿಮ್ಮ ಊಹೆ ನಿಜ. ಅಂದು ಶಾಲೆ ಪುಟ್ಟ ಹೋಟೆಲ್‌ ಆಗಿ ಬದಲಾಗುತ್ತದೆ. ಮಕ್ಕಳೇ ಬಾಣಸಿಗರಾಗಿ ಕೆಲಸ ಮಾಡಿ ಉಪಾಹಾರ, ಅಡುಗೆ ತಯಾರಿಸುತ್ತಾರೆ. ಅದೂ ಪೌಷ್ಟಿಕ ಆಹಾರ.

ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಬಾಲಬಳಗ ಶಾಲೆಯು ಇತ್ತೀಚೆಗೆ ‘ಸೇವಾ ಕೆಫೆ‘ ಎಂಬ ಪ್ರಯೋಗವನ್ನು ಆರಂಭಿಸಿದೆ. ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕ–ಬಾಲಕಿಯರು ಈ ಪ್ರಾಯೋಗಿಕ ಹೋಟೆಲ್‌ನ ಬಾಣಸಿಗರು. ಬೆಳಿಗ್ಗೆ ಬಂದ ತಕ್ಷಣವೇ ಯಾವ ನಾಷ್ಟಾ ಮಾಡಬೇಕು ಎಂಬ ತೀರ್ಮಾನವನ್ನು ಶಿಕ್ಷಕರೊಂದಿಗೆ ಸೇರಿಕೊಂಡು ತೆಗೆದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುತ್ತಾರೆ. ಉದಾಹರಣೆಗೆ ಕಳೆದ ಶನಿವಾರ ಅವಲಕ್ಕಿ ಮಾಡುವ ನಿರ್ಧಾರವಾಯಿತು. ಸುಮಾರು 250 ಜನರಿಗೆ ಸಾಕಾಗುವಷ್ಟು ಅವಲಕ್ಕಿಯನ್ನು ತರಲಾಯಿತು. ಅದಕ್ಕೆ ತಕ್ಕಂತೆ ಉಳ್ಳಾಗಡ್ಡಿ, ನಿಂಬೆ ಹಣ್ಣು, ಟೊಮೆಟೊ, ಸವತೆಕಾಯಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಗ್ಗರಣೆಯನ್ನೂ ಕೊಟ್ಟರು. ನಂತರ ಅದನ್ನು ಇತರ ತರಗತಿಗಳ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಮಕ್ಕಳ ಈ ಪ್ರಯೋಗವನ್ನು ಕಾಣಲು ಬಂದ ಪೋಷಕರಿಗೂ ಉಣಬಡಿಸಿದರು. ತಮ್ಮ ಮಕ್ಕಳು ಮಾಡಿದ ಅವಲಕ್ಕಿಯನ್ನು ತಿಂದ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ.

ಮಕ್ಕಳ ಆರೋಗ್ಯದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳುವ ಹಾಗೂ ಆದಷ್ಟು ಸಾವಯವ ಕೃಷಿ ಪದ್ಧತಿಯಿಂದ ಬೆಳೆಯಲಾದ ಧಾನ್ಯಗಳನ್ನು ಬಳಸಲು ಒತ್ತು ನೀಡುವ ಈ ಶಾಲೆಯಲ್ಲಿ ಸಾವೆ ಅಕ್ಕಿ (ಸಾವಕ್ಕಿ) ಬೆಲ್ಲ ಹಾಕಿ ತಯಾರಿಸಿದ ಪಾಯಸವನ್ನು ಮಕ್ಕಳು ಉಣಬಡಿಸಿದರು. ಜೊತೆಗೆ ಚಹಾ ಬದಲು ಕೋಕಂ ಜ್ಯೂಸ್‌ ಕೊಡಲಾಯಿತು. ಕೋಕಂ ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡಿ ತಂಪಾಗಿಡುವ ಪೇಯವೆಂದೇ ಖ್ಯಾತಿ ಪಡೆದಿದೆ. ಇಂತಹ ಹಲವಾರು ತಿನಿಸುಗಳನ್ನು ಪ್ರತಿ ಶನಿವಾರದ ಸೇವಾ ಕೆಫೆಯಲ್ಲಿ ತಯಾರಿಸುವ ಯೋಜನೆ ಇದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ ಕುಲಕರ್ಣಿ.

ಈ ಕಾರ್ಯದಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕ–ಬಾಲಕಿಯರಷ್ಟೇ ಅಲ್ಲದೇ ಆಸಕ್ತ ಇತರ ತರಗತಿಯ ಮಕ್ಕಳೂ ಭಾಗವಹಿಸಬಹುದು. ಶಿಕ್ಷಕರು ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಮಕ್ಕಳು ಬರೀ ಓದಿನಲ್ಲಿ ತೊಡಗುವ ಬದಲು ಇಂತಹ ಚಟುವಟಿಕೆಗಳನ್ನು ಕೊಟ್ಟರೆ ಅವರಿಗೂ ನವಚೈತನ್ಯ ತುಂಬಿದಂತಾಗುತ್ತದೆ ಎನ್ನುತ್ತಾರೆ ಪ್ರತಿಭಾ.

ಆಹಾರ ತಜ್ಞರು, ಪರಿಸರ ತಜ್ಞರನ್ನು ಆಗಾಗ ಶಾಲೆಗೆ ಕರೆಸಿ ಸರಳ ಭಾಷೆಯಲ್ಲಿ ಉಪನ್ಯಾಸ ಕೊಡಿಸುವ ವ್ಯವಸ್ಥೆಯೂ ಈ ಶಾಲೆಯಲ್ಲಿದೆ. ಅದರ ಮುಂದುವರಿಕೆ ಭಾಗವಾಗಿ ಸೇವಾ ಕೆಫೆ ಆರಂಭಿಸಲಾಗಿದೆ ಎನ್ನುತ್ತಾರೆ ಬಾಲಬಳಗ ಸೃಜನಶೀಲ ಟ್ರಸ್ಟ್‌ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT