ಗುರುವಾರ , ನವೆಂಬರ್ 21, 2019
26 °C

ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

Published:
Updated:

ಹುಬ್ಬಳ್ಳಿ: ಇಲ್ಲಿನ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ, ವಿಕ್ಕಿ ಹಾಗೂ ಇತರ ನಾಲ್ವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಬುಧವಾರ ಪ್ರಕರಣ ದಾಖಲಾಗಿದೆ.

ಮಧ್ಯಾಹ್ನ 2ರ ಸುಮಾರಿಗೆ ಬಾಲಕಿ ಹೊಲಿಗೆ ತರಬೇತಿಗಾಗಿ ಹೋಗುತ್ತಿದ್ದಳು. ಈ ಬೈಕ್‌ನಲ್ಲಿ ಬಂದ ಬಾಲಕಿಗೆ ಪರಿಚಿತನಾದ ವಿಕ್ಕಿ, ನಿನ್ನ ತಂದೆ–ತಾಯಿ ಅಂಚಟಗೇರಿಯಲ್ಲಿರುವ ದರ್ಗಾಗೆ ಹೋಗಿದ್ದಾರೆ. ಹಾಗಾಗಿ, ನಿನ್ನನ್ನು ಕರೆದುಕೊಂಡು ಬರುವಂತೆ ನನಗೆ ಹೇಳಿದ್ದಾರೆ ಎಂದು ಸುಳ್ಳು ಹೇಳಿ, ಆಕೆಯನ್ನು ಬೈಕ್‌ ಮೇಲೆ ದರ್ಗಾ ಕಡೆಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಹೆಚ್ಚಿನ ಜನ ಇದ್ದುದ್ದನ್ನು ಕಂಡ ವಿಕ್ಕಿ, ಆಕೆಯನ್ನು ಅಲ್ಲಿ ಇಳಿಸದೆ ಬೇರೆ ಕಡೆ ಹೋಗೋಣ ಎಂದಿದ್ದಾನೆ. ಬಾಲಕಿ ಬರಲು ನಿರಾಕರಿಸಿದಾಗ ಆಕೆಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು, ಗಮನಿಸಿದ ವ್ಯಕ್ತಿಯೊಬ್ಬರು  ಆಕೆಯನ್ನು ಬಿಡಿಸಿಕೊಳ್ಳಲು ಬಂದಿದ್ದಾರೆ. ಆಗ ವಿಕ್ಕಿಯ ನಾಲ್ವರು ಸಹಚರರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಮತ್ತಷ್ಟು ಮಂದಿ ವ್ಯಕ್ತಿಯ ನೆರವಿಗೆ ಬಂದಿದ್ದಾರೆ. ಕೂಡಲೇ, ವಿಕ್ಕಿ ಹಾಗೂ ಆತನ ಸಹಚರರು ಬಾಲಕಿಯನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಮನೆಗೆ ಬಂದ ಬಾಲಕಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ತಾಯಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಕಸಬಾಪೇಟೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)