ಕುಣಿಯಲಿಕ್ಕೆ ಬಾರದವರು ನೆಲ ಡೊಂಕು: ಶೆಟ್ಟರ್ ಟೀಕೆ

7

ಕುಣಿಯಲಿಕ್ಕೆ ಬಾರದವರು ನೆಲ ಡೊಂಕು: ಶೆಟ್ಟರ್ ಟೀಕೆ

Published:
Updated:
Deccan Herald

ಹುಬ್ಬಳ್ಳಿ: ರೈತರ ಸಾಲ ಮನ್ನಾ ವಿಷಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಕುಣಿಯಲಿಕ್ಕೆ ಬಾರದವರು ನೆಲ ಡೊಂಕು’ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ದಿನಕ್ಕೊಂದು ಹೊಸ ನೆಪಗಳನ್ನು ತೆಗೆಯುತ್ತಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿರು.

ಶುಕ್ರವಾರ ಹೊಸ ನ್ಯಾಯಾಲಯದ ಕಟ್ಟಡ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಲ ಮನ್ನಾ ಘೋಷಣೆ ಮಾಡಿ ಎರಡು ತಿಂಗಳಾಗುತ್ತಾ ಬಂತು. ಇಲ್ಲಿಯವರೆಗೂ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಸಾಲ ವಸೂಲಿಗಾಗಿ ಬ್ಯಾಂಕ್‌ಗಳವರು, ರೈತರ ಮನೆಗಳ ಬಾಗಿಲು ಬಡಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೇ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎನ್ನುತ್ತಾರೆ. ಆದರೆ, ಲೋಕೋಪಯೋಗಿ ಸಚಿವ ರೇವಣ್ಣ, ಬೆಳಗಾವಿಯ ಕೆಶಿಪ್‌ ಕಚೇರಿಯನ್ನು ಹಾಸನಕ್ಕೆ ವರ್ಗಾಯಿಸಿದ್ದಾರೆ. ಇದೇ ರೀತಿ ತಾರತಮ್ಯ ಧೋರಣೆ ಮುಂದುವರಿದರೆ ಜನರು ದಂಗೆ ಏಳಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಭಿನ್ನ ನಿಲುವಿನಿಂದಾಗಿ ಆಡಳಿತ ಯಂತ್ರ ಕುಸಿದು ಹೋಗಿದೆ. ಗುತ್ತಿಗೆದಾರರ ಬಿಲ್‌ ಬಾಕಿ ಸೇರಿದಂತೆ ಯಾವುದಕ್ಕೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಬಿಆರ್‌ಟಿಎಸ್‌, ಸ್ಮಾರ್ಟ್‌ ಸಿಟಿ ಯೋಜನೆಗಳ ಜಾರಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಕಾಮಗಾರಿ ತೀವ್ರಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಹುಬ್ಬಳ್ಳಿಯಲ್ಲಿ ಮಾದರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !