ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣಕ್ಕೆ ಹರಿಹಾಯ್ದ ಶೆಟ್ಟರ್

Last Updated 20 ಏಪ್ರಿಲ್ 2019, 15:10 IST
ಅಕ್ಷರ ಗಾತ್ರ

ಧಾರವಾಡ: ‘ದೇವೇಗೌಡರ ಕುಟುಂಬದಲ್ಲಿ ಚನ್ನಮ್ಮಾಜಿ ಒಬ್ಬರನ್ನು ಬಿಟ್ಟರೆ, ಇಡೀ ಕುಟುಂಬ ರಾಜಕೀಯ ವಲಯದಲ್ಲಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದೇಶಕ್ಕಾಗಿ ಮೋದಿ, ಮೋದಿಗಾಗಿ ನ್ಯಾಯವಾದಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚೆನ್ನಮ್ಮಾಜಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರೆ ಅವರ ಕುಟಂಬ ಸಂಪೂರ್ಣವಾಗಿ ರಾಜಕೀಯ ವಲಯದಲ್ಲಿ ಇರಲಿದೆ ಎಂದು ಹೇಳಿಕೆ ನೀಡಿದ್ದಕ್ಕೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲಘಟಗಿಯ ಸಮಾವೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದರಲ್ಲಿ ಬೇಸರದ ಸಂಗತಿಯೇ ಇಲ್ಲ. ಅಲ್ಲದೇ, ಹೊರಗೆ ಬೇಸರ ವ್ಯಕ್ತಪಡಿಸಿ ಒಳಗೊಳಗೆ ನಮ್ಮ ತಾಯಿ ರಾಜ್ಯಸಭಾ ಸದಸ್ಯರಾಗುತ್ತಾರೆಂಬ ಖುಷಿಯೂ ಇರುತ್ತದೆ’ ಎಂದು ವ್ಯಂಗ್ಯವಾಡಿದರು.

‘ನರೇಂದ್ರ ಮೋದಿ ಅವರ ಸರ್ಕಾರ ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹುಬ್ಬಳ್ಳಿ–ಧಾರವಾಡ ಅವಳಿ ನಗರವನ್ನು ಇಡೀ ದೇಶದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವ ಯೋಜನೆ ಹೊಂದಲಾಗಿದೆ. ಈಗಾಗಲೇ ಅವಳಿ ನಗರಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದು, ಪ್ರಹ್ಲಾದ ಜೋಶಿ 4ನೇ ಬಾರಿ ಸಂಸದರಾಗಿ ಆಯ್ಕೆಯಾದರೆ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ’ ಎಂದರು.

‘ಕ್ಷೇತ್ರಕ್ಕಾಗಿ ನಾನು ಏನೆಲ್ಲಾ ಮಾಡಲಿದ್ದೇನೆ ಎಂದು ಸ್ಪಷ್ಟ ಕಲ್ಪನೆಯ ಮೇರೆಗೆ ಪ್ರಹ್ಲಾದ ಜೋಶಿ ಅವರು ಮತ ಕೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಳಿ ಕ್ಷೇತ್ರದ ಬಗ್ಗೆ ಯಾವ ಚಿತ್ರಣವಿಲ್ಲ. ಬರೀ ಜಾತಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಯಾವ ಯೋಜನೆಗಳನ್ನು ಜಾರಿಗೆ ತಂದರು ಎಂಬುದನ್ನು ತಿಳಿಸಲಿ. ಸುಮ್ಮನೆ ಸಂಸದರಾಗುವ ಅಗತ್ಯತೆ ಇಲ್ಲ’ ಎಂದು ಶೆಟ್ಟರ್‌ ಹೇಳಿದರು.

‘ಮಹಾಘಟಬಂಧನ ಮಾಡಿಕೊಂಡವರಿಗೆ ಮೋದಿ ಬಗ್ಗೆ ತುಂಬ ಭಯವಿದೆ. ಮೋದಿ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಮಾಡುವವರನ್ನು ಬಿಟ್ಟಿಲ್ಲ. ಹೀಗಾಗಿ ಅವರಿಗೆ ಚಿಂತೆ ಕಾಡುತ್ತಿದೆ. ಐಟಿ ದಾಳಿಯಾದ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಿದ್ದರಾಮಯ್ಯ ಅವರೂ ಐಟಿ ಕಚೇರಿ ಎದುರು ಧರಣಿ ನಡೆಸಿದ್ದು, ತೀರಾ ಖಂಡನೀಯ. ಅವರ ಮನೆಯ ಮೇಲೆ ಐಟಿ ದಾಳಿ ನಡೆಯದಿದ್ದರೂ ಧರಣಿ ನಡೆಸಿದ್ದು ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗಿದೆ. ಇವರ ಕಪ್ಪು ಹಣವೆಲ್ಲವೂ ಗುತ್ತಿಗೆದಾರರ ಬಳಿ ಇರುವುದರಿಂದಲೇ ಧರಣಿ ನಡೆಸಿದ್ದಾರೆ. ರಾಜಕೀಯ ಮಾಡಲು ಇವರೆಲ್ಲಾ ಅನರ್ಹರು’ ಎಂದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ‘ರಾಹುಲ್ ಗಾಂಧಿ ಒಮ್ಮೆ ವರ್ಷಕ್ಕೆ ₹72 ಸಾವಿರ ಇನ್ನೊಂದೆಡೆ ತಿಂಗಳಿಗೆ ₹72 ಸಾವಿರ ಎಂದು ಹೇಳುತ್ತಿದ್ದಾರೆ. ದೇವೇಗೌಡರ ವಿಷಯವೇ ಬೇರೆ. ಓರ್ವ ಪ್ರಧಾನಿಗೆ ಏಕವಚನದಲ್ಲಿ ಮಾತನಾಡುವ ಈ ಕುಟುಂಬದವರಿಗೆ ಜ್ಞಾನವಿಲ್ಲ.ಅಂಬಾನಿಗೆ ಮೋದಿ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಅಜ್ಜಿ ಕಾಲದಿಂದಲೂ ಅಂಬಾನಿ ಶ್ರೀಮಂತರಿದ್ದಾರೆ. ಮೋದಿ ಕಾಲದಲ್ಲಿ ದಿಢೀರ ಶ್ರೀಮಂತರಾದವರಲ್ಲ’ ಎಂದರು.

ನಂತರ ವಕೀಲರೊಂದಿಗೆ ಸಂವಾದ ನಡೆಯಿತು.ಕೆ.ಬಿ. ನಾವಲಗಿಮಠ, ಡಾ. ಕಲ್ಮೇಶ ಹಾವೇರಿಪೇಟ, ಶರಣು ಅಂಗಡಿ, ಅರುಣ ಜೋಶಿ, ಮಾರುತಿ ಕರೆಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT