ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಸಂತ್ರಸ್ತರನ್ನು ಸ್ಥಳಾಂತರಿಸಿ

ರೈತ ಸೇನಾ ಕರ್ನಾಟಕದ ವೀರೇಶ ಸೊಬರದಮಠ ಒತ್ತಾಯ
Last Updated 20 ಆಗಸ್ಟ್ 2019, 10:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಲಪ್ರಭಾ ನದಿ ಪ್ರವಾಹದಿಂದ ಮುಳುಗಡೆಯಾಗಿರುವ ನದಿ ಪಾತ್ರದ 39 ಗ್ರಾಮಗಳನ್ನು ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಮನೆ ನಿರ್ಮಿಸಿಕೊಳ್ಳಲು ಪತ್ರಿ ಕುಟುಂಬಕ್ಕೆ ತಲಾ ₹15 ಲಕ್ಷ ನೀಡಬೇಕು’ ಎಂದು ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದರು.

‘ಕಳೆದ ವರ್ಷ ಕೊಡುಗು ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ನೀಡಿದ ಮಾದರಿಯಲ್ಲೇ ಮಲಪ್ರಭಾ ಪ್ರವಾಹ ಸಂತ್ರಸ್ತರಿಗೂ ಪರಿಹಾರ ನೀಡಬೇಕು. ಮಳೆ ಕಳೆದುಕೊಂಡವರು ಸ್ವಂತ ಮನೆ ನಿರ್ಮಿಸಿಕೊಳ್ಳುವವರೆಗೆ ಬಾಡಿಗೆ ಮನೆಯಲ್ಲಿರಲು ₹15 ಸಾವಿರ ಕೊಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ನೀರು ಪಾಲಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹2 ಲಕ್ಷ ಪರಿಹಾರ ಒದಗಿಸುವ ಜತೆಗೆ, ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರವೇ ಭರಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ತನಿಖೆಗೆ ಆಗ್ರಹ:‘ಮಲಪ್ರಭಾ ನದಿಯ ರೇಣುಕಾ ಸಾಗರ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37 ಟಿಎಂಸಿ . ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಾಗ ಹಂತ ಹಂತವಾಗಿ 2,500 ಕ್ಯುಸೆಕ್‌ನಿಂದ 3 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿತ್ತು. ಹೀಗಿರುವಾಗ ದಿಢೀರನೆ 1.8 ಲಕ್ಷ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲು ಕಾರಣವೇನು?’ ಎಂದು ಸೊಬರಮಠದ ಪ್ರಶ್ನಿಸಿದರು.

‘ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹಗೊಂಡಾಗ ಹಂತ ಹಂತವಾಗಿ ನೀರನ್ನು ಹೊರಕ್ಕೆ ಬಿಟ್ಟಿದ್ದರೆ ನದಿಪಾತ್ರದ ಹಳ್ಳಿಗಳು ಪ್ರವಾಹಕ್ಕೆ ತುತ್ತಾಗುತ್ತಿರಲಿಲ್ಲ. ಅಧಿಕಾರಿಗಳು ಜಲಾಶಯದ ಗೇಟ್‌ಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದೇ ಇದಕ್ಕೆ ಕಾರಣ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ತೀರ್ಪಿನ ಅಧಿಸೂಚನೆ ಹೊರಡಿಸುವಂತೆ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ತೀರ್ಪಿಗೆ ಯಾರೂ ತಕರಾರು ಸಲ್ಲಿಸಿಲ್ಲ. ಹಾಗಾಗಿ, ರಾಜ್ಯ ಸರ್ಕಾರವೂ ತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಮ್ಮ ಪಾಲಿನ ನೀರಿನ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರೈತ ಸೇನಾ ಕರ್ನಾಟಕದ ಮಲ್ಲಿಕಾರ್ಜುನ ಆಲೇಕರ, ಗುರು ರಾಯನಗೌಡ್ರ, ಪ್ರಶಾಂತಗೌಡ ದುಂಡಿಗೌಡ್ರ, ಆನಂದ ದಾಸಪ್ಪನವರ ಹಾಗೂ ಗಂಗಣ್ಣ ವೀರೇಶನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT