ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೊ: ನಿರೀಕ್ಷೆಯಷ್ಟು ಸಿಗದ ಸ್ಪಂದನೆ

Last Updated 5 ಜನವರಿ 2022, 5:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಸಂಸ್ಥೆ ಕಾರ್ಗೊ ಸೌಲಭ್ಯ ಆರಂಭಿಸಿ ಎರಡು ತಿಂಗಳು (ಜ.3ಕ್ಕೆ) ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ 11 ಮೆಟ್ರಿಕ್‌ ಟನ್‌ ಸರಕು ಸಾಗಣೆ ಮಾಡಲಾಗಿದೆ.

ಎರಡು ತಿಂಗಳಿಗೂ ಮೊದಲು ಹೊರ ರಾಜ್ಯಗಳಿಂದ ಹಾಗೂ ಬೆಂಗಳೂರಿನಿಂದ ಕಾರ್ಗೊ ಮೂಲಕ ಇಲ್ಲಿಗೆ ಸರಕು ಬರುತ್ತಿತ್ತು. ಇಲ್ಲಿಂದ ಸರಕು ಬೇರೆಡೆ ಕಳುಹಿಸಲು ಆರಂಭಿಸಿ ಎರಡು ತಿಂಗಳಾಗಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾರ್ಗೊ ಸೌಲಭ್ಯ ಹೊಂದಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ.

ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳು ಹೆಚ್ಚಿದ್ದು, ಕಾರ್ಗೊ ಸೇವೆ ಉದ್ಯಮ ಅಭಿವೃದ್ಧಿಗೆ ನೆರವಾಗುತ್ತದೆ ಎನ್ನುವ ನಿರೀಕ್ಷೆ ಹೆಚ್ಚಿದೆ. ಆದರೆ, ಇಂಡಿಗೊ ಸಂಸ್ಥೆಯ ನಿರೀಕ್ಷೆಗೆ ತಕ್ಕಷ್ಟು ಇಲ್ಲಿನ ಉದ್ಯಮಿಗಳಿಂದ ಸ್ಪಂದನೆ ಸಿಕ್ಕಿಲ್ಲ. ನವೆಂಬರ್‌ನಲ್ಲಿ ಐದು ಹಾಗೂ ಡಿಸೆಂಬರ್‌ನಲ್ಲಿ 6 ಮೆಟ್ರಿಕ್‌ ಟನ್‌ನಷ್ಟು ಸರಕು ಮಾತ್ರ ಕಳುಹಿಸಲಾಗಿದೆ.

ಇಲ್ಲಿನ ವಿಮಾನ ನಿಲ್ದಾಣದ ಹಳೇ ಟರ್ಮಿನಲ್‌ ಕಟ್ಟಡದಲ್ಲಿ ಅಂದಾಜು ₹45 ಲಕ್ಷ ವೆಚ್ಚದಲ್ಲಿ ಕಾರ್ಗೊ ವಿಭಾಗ ಆರಂಭಗೊಂಡಿದ್ದು, 1,000 ಚದರ ಮೀಟರ್‌ ಅಳತೆಯಷ್ಟು ಜಾಗವಿದೆ. ಒಂದೇ ಬಾರಿಗೆ 100 ಮೆಟ್ರಿಕ್‌ ಟನ್‌ ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಅಂಚೆ ಇಲಾಖೆಯಿಂದ ಸ್ಟೀಡ್‌ ಪೋಸ್ಟ್‌, ನೋಂದಾಯಿತ ಅಂಚೆಗಳನ್ನು ಮೊದಲು ರೈಲ್ವೆ ಮೇಲ್‌ ಸರ್ವಿಸ್‌ (ಆರ್‌ಎಂಎಸ್‌) ಮೂಲಕ ಬೆಂಗಳೂರು ಹಾಗೂ ಹೊರರಾಜ್ಯಕ್ಕೆ ಕಳುಹಿಸಲಾಗುತ್ತಿತ್ತು. ಇಲ್ಲಿ ಕಾರ್ಗೊ ಆರಂಭವಾದ ಬಳಿಕ ಅಂಚೆ ಇಲಾಖೆ ಮಾತ್ರ ನಿಯಮಿತವಾಗಿ ‘ಪೋಸ್ಟಲ್‌ ಶಿಪ್‌ಮೆಂಟ್‌’ ಆರಂಭಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಗೊ ವಿಭಾಗದ ಉಸ್ತುವಾರಿಗೋಕುಲ್‌ ‘ಎರಡು ತಿಂಗಳ ಹಿಂದೆಯಷ್ಟೇ ಕಾರ್ಗೊ ಆರಂಭವಾಗಿರುವುದರಿಂದ ಬಹಳಷ್ಟು ಕೈಗಾರಿಕೋದ್ಯಮಿಗಳಿಗೆ ಈ ಸೌಲಭ್ಯ ಇರುವುದು ಗೊತ್ತಾಗಿಲ್ಲ. ಹೀಗಾಗಿ ಸದ್ಯಕ್ಕೆ ಅಂಚೆ ಕಚೇರಿಯಿಂದ ಮಾತ್ರ ಉತ್ತಮ ಸ್ಪಂದನೆ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ತಿಂಗಳಿಗೆ 10ರಿಂದ 15 ಮೆಟ್ರಿಕ್‌ ಟನ್‌ ಸರಕು ಸಾಗಿಸುವ ಗುರಿ ಹೊಂದಲಾಗಿದೆ. ವ್ಯಾಪಕ ಪ್ರಚಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಸ್ಥಳೀಯ ಕೊರಿಯರ್‌ ಕಂಪನಿಗಳು ಸಹ ಕಾರ್ಗೊ ಸೇವೆ ಬಳಸಿಕೊಳ್ಳಬೇಕು. ಈಗ ಬಹುತೇಕ ಸರಕು ಬೆಂಗಳೂರಿಗೆ ರವಾನೆಯಾಗುತ್ತಿದೆ. ಮೊದಲ ಎರಡು ತಿಂಗಳು ನಮ್ಮ ನಿರೀಕ್ಷೆಯಷ್ಟು ಸರಕು ಸಾಗಣೆಯಾಗಿಲ್ಲ’ ಎಂದರು.

ಅಂಚೆ ಇಲಾಖೆಯ ಪೋಸ್ಟಲ್‌ ಶಿಪ್‌ಮೆಂಟ್‌ಗೆ ಮಾತ್ರ ಬೇಡಿಕೆ

ಬೆಂಗಳೂರು ನಗರಕ್ಕೆ ಹೆಚ್ಚು ಸರಕು ರವಾನೆ

ತಿಂಗಳಿಗೆ 10–15 ಮೆಟ್ರಿಕ್‌ ಟನ್‌ ಸಾಮಗ್ರಿ ರವಾನಿಸುವ ಗುರಿ

ಮೊದಲ ಎರಡು ತಿಂಗಳಲ್ಲಿ ಕಾರ್ಗೊಕ್ಕೆ ನಮ್ಮ ನಿರೀಕ್ಷೆಯಷ್ಟು ಬೇಡಿಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಬೇಡಿಕೆ ವ್ಯಕ್ತವಾಗುವ ವಿಶ್ವಾಸವಿದೆ.
ಪ್ರಮೋದ ಕುಮಾರ ಠಾಕರೆ
ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT