ಬುಧವಾರ, ಸೆಪ್ಟೆಂಬರ್ 18, 2019
25 °C

ಡಿಕೆಶಿ ಬಂಧನ, ರಾಜಕೀಯ ಷಡ್ಯಂತ್ರ: ಶಾಕೀರ್‌ ಟೀಕೆ

Published:
Updated:
Prajavani

ಹುಬ್ಬಳ್ಳಿ: ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿ.ಕೆ. ಶಿವಕುಮಾರ್‌ ಅವರ ವರ್ಚಸ್ಸು ಕಡಿಮೆ ಮಾಡುವ ಉದ್ದೇಶದಿಂದ ಜಾರಿ ನಿರ್ದೇಶನಾಲಯದಿಂದ (ಇಡಿ) ಅವರನ್ನು ತನಿಖೆ ಮಾಡಿಸಲಾಗುತ್ತಿದೆ. ತನಿಖೆಗೆ ಸಹಕರಿಸುತ್ತಿಲ್ಲ ಎಂಬ ನೆಪವೊಡ್ಡಿ ಅವರ ಬಂಧನ ಮಾಡಿದ್ದು ರಾಜಕೀಯ ಷಡ್ಯಂತ್ರ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಶಿವಕುಮಾರ್ ದೇಶಬಿಟ್ಟು ಓಡಿ ಹೋಗಲು ತಯಾರಿ ನಡೆಸಿರಲಿಲ್ಲ. ಅವರು ಮಹಾತ್ವಾಕಾಂಕ್ಷಿ ರಾಜಕಾರಣಿಯಾಗಿದ್ದು, ಎಷ್ಟೇ ಕಷ್ಟ ಎದುರಾದರೂ ದಿಟ್ಟತನದಿಂದ ಎದುರಿಸುವ ಛಾತಿ ಇದೆ. ದೇಶದ ಅಭಿವೃದ್ಧಿಗಾಗಿ ಕಾನೂನುಗಳನ್ನು ಬಳಸುವುದನ್ನು ಬಿಟ್ಟು, ಎದುರಾಳಿ ಪಕ್ಷದವರನ್ನು ವೈರಿಯಂತೆ ನೋಡಲು ಬಳಸಲಾಗುತ್ತಿದೆ. ಷಡ್ಯಂತ್ರದ ಮೂಲಕ ಅವರ  ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಸ್ವಾತಂತ್ರ್ಯಾನಂತರ ದೇಶ ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಥಿಕ ದುರ್ಬಲತೆ ಮತ್ತು ಹಿಂಜರಿತದಿಂದ ಜರ್ಜರಿತವಾಗಿದೆ. ನಿರುದ್ಯೋಗ ತಾಂಡವಾಡುತ್ತಿದೆ. ಉದ್ಯೋಗಗಳ ಸೃಷ್ಟಿಯಂತೂ ಕನಸಿನ ಮಾತಾಗಿದೆ. ಹಿಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಜನವಿರೋಧಿ ಆರ್ಥಿಕ ನೀತಿಗಳೇ ಇವೆಲ್ಲದಕ್ಕೂ ಕಾರಣ. ಏಷ್ಯಾದ ಸಣ್ಣ ರಾಷ್ಟ್ರಗಳು ನಮ್ಮನ್ನು ಹಿಂದಿಕ್ಕಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ’ ಎಂದಿದ್ದಾರೆ.

ದೇಶದ ಪ್ರಗತಿಗಾಗಿ ದುಡಿಯಬಲ್ಲ ಬಹಳಷ್ಟು ಪ್ರತಿಭಾವಂತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಮ್ಮಲ್ಲಿದ್ದಾರೆ.  ಅಂತವರನ್ನು ಬಳಸಿಕೊಳ್ಳುವ ಬದಲು ಕೇಂದ್ರ ವೈಯಕ್ತಿಕ ಇಡಿಯನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

Post Comments (+)