ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೊಳಗೆ ಬೆರೆತಿದ್ದ ಸಿ.ಎಸ್. ಶಿವಳ್ಳಿ

ಕುಸುಮಾವತಿ ಶಿವಳ್ಳಿ ಪರ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
Last Updated 15 ಮೇ 2019, 17:01 IST
ಅಕ್ಷರ ಗಾತ್ರ

ಹುಬ್ಬಳ್ಳಿ (ಕುಂದಗೋಳ): ‘ಸಿ.ಎಸ್. ಶಿವಳ್ಳಿ ಜನರೊಂದಿಗೆ ಬೆರೆತು ಹೋಗಿದ್ದ ನಿಜವಾದ ಜನನಾಯಕ. ಕಡೆ ಗಳಿಗೆಯಲ್ಲೂ ಆತ ಜನರೊಂದಿಗೇ ಇದ್ದ. ವಿಚಾರವಂತ, ಬುದ್ಧಿಜೀವಿ ಹಾಗೂ ಪ್ರಗತಿಪರನೂ ಆಗಿದ್ದ ಆತ, ತಾನು ನಂಬಿದ್ದ ತತ್ವಗಳಿಗೆ ಅನುಗುಣವಾಗಿ ಬದುಕಿದ. ಕ್ಷೇತ್ರದ ಯಜಮಾನನಾಗಿ ಉತ್ತಮ ಕೆಲಸಗಳನ್ನೂ ಮಾಡಿದ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಶಿವಳ್ಳಿ ವ್ಯಕ್ತಿತ್ವವನ್ನು ಬಣ್ಣಿಸಿದರು.

ಕುಂದಗೋಳ ತಾಲ್ಲೂಕಿನ ಕಮಡೊಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಶಾಸಕರ ಭವನದಲ್ಲಿದ್ದ ಶಿವಳ್ಳಿಯ ಕೊಠಡಿ ಒಂದು ರೀತಿಯಲ್ಲಿ ಧರ್ಮಶಾಲೆಯಂತಿತ್ತು. ಯಾರೂ ಬೇಕಾದರೂ ಹೋಗಿ ಉಳಿಯಬಹುದಿತ್ತು. ಎಲ್ಲರಿಗೂ ಊಟ–ತಿಂಡಿ ಸಿಗುತ್ತಿತ್ತು’ ಎಂದರು.

'ತತ್ವಾಧರಿತ ಚುನಾವಣೆ'

‘ಲೋಕಸಭಾ ಹಾಗೂ ರಾಜ್ಯದ ಉಪ ಚುನಾವಣೆಗಳು ತತ್ವದ ಆಧಾರದ ಮೇಲೆ ನಡೆಯುತ್ತಿವೆಯೇ ಹೊರತು, ಜಾತಿ ಆಧಾರದ ಮೇಲಲ್ಲ. ಈ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸುವುದು ಕಾಂಗ್ರೆಸ್ ಆದ್ಯತೆಯಾದರೆ, ಜಾತಿಯಾಧಾರಿತವಾಗಿ ಸಮಾಜ ಒಡೆಯುವುದೇ ಬಿಜೆಪಿಯ ಕೆಲಸವಾಗಿದೆ’ ಎಂದು ಟೀಕಿಸಿದರು.

‘ನರೇಗಾ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದು ದೇಶದ ಬಡವರಿಗೆ ₹ 3ಕ್ಕೆ ಅಕ್ಕಿ ಮತ್ತು ಗೋಧಿ ಕೊಟ್ಟೆವು. ಕರ್ನಾಟಕದಲ್ಲಿದ್ದ ನಮ್ಮ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಅನ್ನಭಾಗ್ಯ’ ಯೋಜನೆಯಡಿ ಉಚಿತವಾಗಿ ಅಕ್ಕಿ ಕೊಟ್ಟಿತು. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ‘ ಎಂದು ಪ್ರಶ್ನಿಸಿದರು.

‘ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಇದ್ದ 4 ಕೋಟಿ ಉದ್ಯೋಗಗಳೂ ಇಲ್ಲವಾದವು. ಕೃಷಿ ಮತ್ತು ಉತ್ಪಾದನಾ ವಲಯದಲ್ಲೂ ನಾವು ಹಿಂದೆ ಬೀಳುವಂತೆ ಮಾಡಿದರು’ ಎಂದು ಟೀಕಿಸಿದರು.

'ಗುರುವಿಗೇ ಏಟು ಕೊಟ್ಟ ಮೋದಿ'

‘ನರೇಂದ್ರ ಮೋದಿಯನ್ನು ಬೆಳೆಸಿದ್ದು ಎಲ್‌.ಕೆ. ಅಡ್ವಾಣಿ. ಆದರೆ, ತನ್ನನ್ನು ಬೆಳೆಸಿದ ಗುರುವಿಗೇ ಮೋದಿ ಏಟು ಕೊಟ್ಟರು. ಅವರು ನಮಸ್ಕರಿಸಿದರೂ, ತಿರುಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಬದಲಿಗೆ, ಪಕ್ಕದಲ್ಲಿದ್ದ ನನಗೆ ‘ಕೈಸೆ ಹೋ ಖರ್ಗೆ ಜೀ’ ಎನ್ನುತ್ತಿದ್ದರು. ಇಂತಹವರಿಗೆ ಚುನಾವಣೆಯಲ್ಲಿ ಓಟು ಹಾಕಬೇಕಾ? ಅವರಿಗೆ ಹಾಕಿದರೆ, ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ’ ಎಂದ ಹೇಳಿದರು.

‘ಉದ್ಘಾಟನೆಗೂ ಕರೆಯದ ಜೋಶಿ!’

‘ನಾನು ಕಾರ್ಮಿಕ ಸಚಿವನಾಗಿದ್ದಾಗ ಹುಬ್ಬಳ್ಳಿಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿಸಿದೆ. ಆದರೆ, ಇಲ್ಲಿನ ಸಂಸದ ಪ್ರಹ್ಲಾದ ಜೋಶಿ ನನ್ನನ್ನು ಕರೆಯದೆ, ತಾನೇ ಉದ್ಘಾಟನೆ ಮಾಡಿದ. ಬಿಜೆಪಿ ಸರ್ಕಾರದಲ್ಲಿ ಯಾವ ವೇದಿಕೆಗೂ ನಮ್ಮನ್ನು ಕರೆಯುತ್ತಿರಲಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ಶಿವಳ್ಳಿಗೆ ನಾನೊಬ್ಬ ಎಂಎಲ್‌ಎ ಮತ್ತು ಸಚಿವ ಎಂಬ ಅಹಂ ಇರಲಿಲ್ಲ. ಮೂರು ಸಲ ಶಾಸಕನಾಗಿದ್ದ ಆತ, ಹಿಂದೆ ಯಾರೂ ಮಾಡದಷ್ಟು ಕೆಲಸಗಳನ್ನು ಮಾಡಿದ್ದಾನೆ’ ಎಂದರು.

ಸಿದ್ದುಗೆ ಮೇಕೆ ಮರಿ ಉಡುಗೊರೆ

ಕಮಡೊಳ್ಳಿಯಲ್ಲಿ ಸಿದ್ದರಾಮಯ್ಯ ಭಾಷಣ ಮುಗಿಸುತ್ತಿದ್ದಂತೆ ವೇದಿಕೆ ಏರಿದ ಅವರ ಅಭಿಮಾನಿಗಳು, ಕೊರಳಿಗೆ ಹಾರ ಹಾಗೂ ಹೆಗಲಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು. ಬಳಿಕ ಮೇಕೆ ಮರಿಯನ್ನು ಉಡುಗೊರೆಯಾಗಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಅಭಿವೃದ್ಧಿಪರವಾಗಿ ನಡೆಯುತ್ತಿರುವ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಗಡುವು ಕೊಡಲು ಬಿಜೆಪಿಯವರು ಯಾರು? ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.

ಮುಖಂಡ ಪ್ರೊ.ಐ.ಜಿ. ಸನದಿ, ‘ಶಿವಳ್ಳಿ ಬಡವರ ಪಾಲಿಗೆ ಬೆಲ್ಲವಾಗಿದ್ದ’ ಎಂದರು.

ಸಿನಿಮಾ ಡೈಲಾಗ್‌ಗೆ ಡಿಮ್ಯಾಂಡ್

ಶಿರೂರದಲ್ಲಿ ಸಂಜೆ ನಡೆದ ಕಾಂಗ್ರೆಸ್ ರೋಡ್‌ ಶೋ ವೇಳೆ ಮಾತನಾಡಲು ಮುಂದಾದ ಕಾಂಗ್ರೆಸ್ ನಾಯಕಿ ಉಮಾಶ್ರೀ ಅವರಿಗೆ ‘ಸಿನಿಮಾ ಡೈಲಾಗ್‌ ಹೇಳಿ’ ಎಂದು ಕಾರ್ಯಕರ್ತರು ಮೊರೆ ಇಟ್ಟರು.

ಕಾರ್ಯಕರ್ತರ ಬೇಡಿಕೆಯನ್ನು ನಯವಾಗೇ ತಿರಸ್ಕರಿಸಿದ ಉಮಾಶ್ರೀ, ‘ಸಿನಿಮಾವೇ ಬೇರೆ, ರಾಜಕೀಯ ಬೇರೆ. ಸಿನಿಮಾದಲ್ಲಿ ರಾಜಕೀಯ ಬೆರೆಸಲು ಇಷ್ಟಪಡುವುದಿಲ್ಲ’ ಎಂದು ಭಾಷಣ ಮುಂದುವರಿಸಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಮುನಿರತ್ನ, ಬೈರತಿ ಸುರೇಶ್, ಮಹಾಂತೇಶ ಕೌಜಲಗಿ, ಮುಖಂಡರಾದ ಉಮಾಶ್ರೀ, ವಿನಯ ಕುಲಕರ್ಣಿ, ಎಂ.ಎಸ್. ಅಕ್ಕಿ, ಚಂದ್ರಶೇಖರ ಜುಟ್ಟಲ, ಅನಿಲ್‌ಕುಮಾರ ಪಾಟೀಲ, ವಿಜಯಲಕ್ಷ್ಮಿ ಪಾಟೀಲ, ನಾಗರಾಜ ಹಾಗೂ ವೀಣಾ ಆನಿ ಇದ್ದರು.

ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಖಂಡರು ಶಿರೂರ, ದೇವನೂರ, ಯಲಿವಾಳ, ಮತ್ತಿಗಟ್ಟಿ ಹಾಗೂ ಬೆಟದೂರಿನಲ್ಲಿ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT