ಭಾನುವಾರ, ಆಗಸ್ಟ್ 25, 2019
27 °C

ಸ್ಮಾರ್ಟ್‌ ಸಿಟಿಯ ಒಂದೇ ಒಂದು ಕೆಲಸ ತೋರಿಸಿ: ಜೋಶಿ

Published:
Updated:
Prajavani

ಹುಬ್ಬಳ್ಳಿ: ಎರಡು ವರ್ಷಗಳ ಹಿಂದೆ ಮಂಜೂರಾದ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಎದ್ದು ಕಾಣುವಂತೆ ಮಾಡಿದ ಒಂದೇ ಒಂದು ಕೆಲಸವಾದರೂ ತೋರಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರ್ಟ್‌ ಸಿಟಿ ಯೋಜನೆ ಮಂಜೂರಾದ ಕ್ಷೇತ್ರಗಳ ಸಂಸದರ ಸಭೆ ನಡೆಸಿ ಈ ಯೋಜನೆಯಲ್ಲಿ ಮಾಡಿದ ಮುಖ್ಯ ಕೆಲಸದ ಮಾಹಿತಿ ನೀಡಿ ಎಂದರೆ; ಹೇಳಲು ಏನೂ ಇರಲಿಲ್ಲ. ನಿಗದಿತ ಕಾಲಮಿತಿಯೊಳಗೆ ಕೆಲಸ ಮುಗಿಸಬೇಕು’ ಎಂದು ತಾಕೀತು ಮಾಡಿದರು.

‘ಇಂದಿರಾ ಗಾಜಿನ ಮನೆ ಅಭಿವೃದ್ಧಿಗೆ ಹಿಂದೆ ₹4.5 ಕೋಟಿ ನೀಡಲಾಗಿತ್ತು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹ 13 ಕೋಟಿ ನೀಡಲಾಗಿದೆ. ತೋಳನಕೆರೆಗೆ ಮತ್ತೆ ಹಣ ಕೊಡಲಾಗಿದೆ. ಒಂದೇ ಯೋಜನೆಗೆ ಪದೇ ಪದೇ ಹಣ ಕೊಡುವುದರಿಂದ ಏನೂ ಪ್ರಯೋಜನವಿಲ್ಲ. ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಅವರಿಗೆ ಸೂಚಿಸಿದರು.

ಇಂದಿರಾ ಗಾಜಿನ ಮನೆಗೆ ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕರೆದಿರುವ ಟೆಂಡರ್ ಕೆಲಸಗಳನ್ನು ಮೊದಲು ಪೂರ್ಣಗೊಳಿಸಿ. ಸದ್ಯಕ್ಕೆ ಯಾವುದೇ ಟೆಂಡರ್‌ ಕರೆಯಬೇಡಿ’ ಎಂದು ಜೋಶಿ ಹೇಳಿದರು.

ಬಸವರಾಜ ಹೊರಟ್ಟಿ ‘ಸ್ಮಾರ್ಟ್‌ ಸಿಟಿಯಲ್ಲಿ ನಗರದ ಅಂದ ಹೆಚ್ಚಿಸುವ ಕೆಲಸವಾಗಲಿ. ಕಾಲಮಿತಿಯೊಳಗೆ ಕೆಲಸವಾಗಬೇಕು’ ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಜಗದೀಶ ಶೆಟ್ಟರ್‌ ‘ಅನುದಾನವಿದೆ. ಹಗಲಿರುಳು ಕೆಲಸ ಮಾಡಿ; ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದೇ ಇರುವುದು ಎಲ್ಲ ಆವಾಂತರಕ್ಕೆ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣನವರ, ಅಮೃತ ದೇಸಾಯಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಮಂಜುಳಾ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ ಇದ್ದರು.

ತಹಶೀಲ್ದಾರ್‌ಗೆ ಶೆಟ್ಟರ್‌ ಚಾಟಿ

ಶಿರಡಿ ನಗರದಲ್ಲಿ ಒತ್ತುವರಿಯಾದ ಜಾಗ ತೆರವು ಮಾಡಿ ರೈಲ್ವೆ ಕೆಳಸೇತುವೆ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸಾಕಷ್ಟು ಸಲ ಹೇಳಿದರೂ ಪ್ರಯೋಜನವಾಗಿಲ್ಲ. ಅಲ್ಲಿ ಒಂದು ಮನೆಯಲ್ಲಿ ತೆಗೆದು ಹಾಕಿದರೆ ಸುಲಭವಾಗಿ ಕಾಮಗಾರಿ ಮಾಡಬಹುದು. ಇದಕ್ಕೆ ತಹಶೀಲ್ದಾರ್‌ ಆಸಕ್ತಿ ತೋರಿಸುತ್ತಿಲ್ಲ. ಹೀಗಾದರೆ ಅಧಿಕಾರಿಗಳು ಯಾಕೆ ಇರಬೇಕು ಎಂದು ಶೆಟ್ಟರ್‌, ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ವಿರುದ್ಧ ಗರಂ ಆದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಡ್ಯಾಳ ‘ಒಂದು ವಾರದಲ್ಲಿ ತೆರವು ಮಾಡಲಾಗುವುದು’ ಎಂದರು.

ದೇವಪ್ರಿಯ ನಗರ (ಕೊಪ್ಪಳ ಲೇ ಔಟ್‌) ಒತ್ತುವರಿ ಜಾಗ ತೆಗೆದು ರಸ್ತೆ ನಿರ್ಮಿಸಲು ಪಾಲಿಕೆ ಎಂಜಿನಿಯರ್‌ಗಳು ಹಿಂದೇಟು ಹಾಕಿದ್ದರು. ಪೊಲೀಸ್ ರಕ್ಷಣೆ ಪಡೆದಿದ್ದರಿಂದ ಈಗ ಕೆಲಸವಾಗಿದೆ. ಅಧಿಕಾರಿಗಳು ಯಾವುದಕ್ಕೂ ಹಿಂಜರಿಯದೇ ಧೈರ್ಯದಿಂದ ಕೆಲಸ ಮಾಡಬೇಕು ಎಂದು ಶೆಟ್ಟರ್‌ ಸೂಚಿಸಿದರು.

’ಬೆದರಿಕೆ ಕರೆ’

ಉಣಕಲ್‌ನಿಂದ ಇಂಡಿಪಂಪ್‌ವರೆಗೆ ನಡೆಯುತ್ತಿರುವ ಕಾಂಕ್ರೀಟ್‌ ರಸ್ತೆ ಕಾಮಗಾರಿ ತತ್ವದರ್ಶಿ ಆಸ್ಪತ್ರೆ ಸಮೀಪ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. ಇದಕ್ಕೆ ಕಾರಣವೇನು ಎಂದು ಶೆಟ್ಟರ್‌ ಪ್ರಶ್ನಿಸಿದಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಎಂಜಿನಿಯರ್‌ ಕೃಷ್ಣ ರೆಡ್ಡಿ ‘ಮಳೆಯ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿದೆ’ ಎಂದರು.

ಇದನ್ನು ಒಪ್ಪದ ಶೆಟ್ಟರ್‌ ‘ಬೆದರಿಕೆ ಕರೆ ಒಡ್ಡಿದ್ದರಿಂದ ಕೆಲಸ ನಿಲ್ಲಿಸಲಾಗಿದೆ ಎಂಬುದು ನನಗೆ ಗೊತ್ತು’ ಎಂದರು. ಬಳಿಕ ಕೃಷ್ಣಾ ರೆಡ್ಡಿ ಇದನ್ನು ಒಪ್ಪಿಕೊಂಡರು. ಆಗ ಶೆಟ್ಟರ್‌ ‘ಅಧಿಕಾರಿಗಳು ಯಾರಿಗೂ ಹೆದರುವ ಅಗತ್ಯವಿಲ್ಲ. ಪೊಲೀಸರ ನೆರವು ಪಡೆದು ಕೆಲಸ ಮುಗಿಸಿ’ ಎಂದು ತಾಕೀತು ಮಾಡಿದರು.

Post Comments (+)