ಗುರುವಾರ , ನವೆಂಬರ್ 26, 2020
20 °C
ಧಾರವಾಡ, ಬೆಳಗಾವಿ ವಿಭಾಗದ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ವರ್ಗ: ಜೋಶಿ ಹೇಳಿಕೆ

ಭಿನ್ನ ಎನ್ನುವುದು ಕಾರ್ಯದಲ್ಲಿ ತೋರಿಸಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಶಿಸ್ತು, ಸಿದ್ದಾಂತ ಮತ್ತು ವೈಚಾರಿಕತೆ ವಿಷಯದಲ್ಲಿ ನಾವು ಭಿನ್ನ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ವಿಚಾರಗಳನ್ನು ನೀವೆಲ್ಲರೂ ಕೆಲಸಗಳ ಮೂಲಕ ತೋರಿಸಿಕೊಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.

ಕುಸುಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಧಾರವಾಡ ಮತ್ತು ಬೆಳಗಾವಿ ವಿಭಾಗದ ಬಿಜೆಪಿ ಪ್ರಮುಖರ ಪ್ರಶಿಕ್ಷಣ ಪ್ರಕೋಷ್ಠ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಜಕಾರಣವೆಂದರೆ ಕೇವಲ ಅಧಿಕಾರ ಪಡೆಯುವುದು, ಜನರನ್ನು ಆಳುವುದಲ್ಲ. ಪ್ರತಿಯೊಬ್ಬ ಕಾರ್ಯಕರ್ತ ಸ್ವಚಾರಿತ್ರ್ಯ, ಆತ್ಮಗೌರವ ಕಾಪಾಡಿಕೊಂಡು ಪಕ್ಷದ ಘನತೆ ಹೆಚ್ಚಿಸಬೇಕು. ನಾವು ಭಿನ್ನವಾಗಿ ಯೋಚಿಸಿ, ಯೋಜಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಾಗ ಜನರಿಗೆ ಹತ್ತಿರವಾಗುತ್ತೇವೆ. ಅವರೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ’ ಎಂದರು.

‘ಎಲ್ಲ ಕಾರ್ಯಕರ್ತರು ಕಾಯಾ, ವಾಚಾ ಮತ್ತು ಮನಃಪೂರ್ವಕವಾಗಿ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬಿಜೆಪಿ ಹೊರತುಪಡಿಸಿದರೆ ಉಳಿದ ಯಾವ ಪಕ್ಷಗಳಲ್ಲಿಯೂ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿಕೊಡುವುದಿಲ್ಲ. ಈ ಅವಕಾಶ ಬಳಸಿಕೊಂಡು ಕಾರ್ಯಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಬಿಜೆಪಿ ಹೊರತು ಪಡಿಸಿ ಉಳಿದ ಎಲ್ಲ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿವೆ. ತಳಮಟ್ಟದಿಂದ ಗಟ್ಟಿ ಬುನಾದಿ ಹೊಂದಿರುವ ಬಿಜೆಪಿಗೆ ಮಾತ್ರ ಪ್ರಬಲ ರಾಷ್ಟ್ರ ನಿರ್ಮಾಣ ಸಾಧ್ಯ. ಬಿಜೆಪಿ ದೇಶದ ಜನರಿಗೆ ರಾಷ್ಟ್ರೀಯ ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ’ ಎಂದರು.

ಬೆಳಗಾವಿ ವಿಭಾಗದ ಸಂಚಾಲಕ ಶ್ರೀಕಾಂತ ಕುಲಕರ್ಣಿ ಮಾತನಾಡಿ ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ದೇಶದಾದ್ಯಂತ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಇದರಲ್ಲಿ ಪಾಲ್ಗೊಂಡವರು ತಮ್ಮ ವ್ಯಾಪ್ತಿಯ ಕಾರ್ಯಕರ್ತರಿಗೆ ಪಕ್ಷದ ನಿಲುವು, ಸಿದ್ದಾಂತ ಮತ್ತು ಯೋಜನೆಗಳನ್ನು ಮುಟ್ಟಿಸಬೇಕು’ ಎಂದು ತಿಳಿಸಿದರು.

ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಸಹಪ್ರಭಾರಿ ನಾರಾಯಣ ಜರತಾರಘರ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ,  ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ, ಗಣೇಶ ಕಾರ್ಣಿಕ್‌, ಶಾಸಕರಾದ ಅಭಯ ಪಾಟೀಲ, ಅನಿಲ ಬೆಣಕೆ ಮಾಜಿ ಶಾಸಕರಾದ ಯು.ಬಿ.ಬಣಕಾರ, ಸೀಮಾ ಮಸೂತಿ, ರಾಜ್ಯ ಪ್ರಧಾನ ಕಾರ್ಯದರ್ಶಿಮಹೇಶ ಟೆಂಗಿನಕಾಯಿ, ಗಿರೀಶ ಪಾಟೀಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ಪಕ್ಷದ ವಕ್ತಾರ ರವಿ ನಾಯ್ಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು