ಗೃಹಸಚಿವರ ಕಾರು ತೆರಳಲು ಅನುವು ಮಾಡಿಕೊಟ್ಟಿದ್ದಕ್ಕೆ ಎಸಿಪಿಗೆ ನೋಟಿಸ್‌!

7

ಗೃಹಸಚಿವರ ಕಾರು ತೆರಳಲು ಅನುವು ಮಾಡಿಕೊಟ್ಟಿದ್ದಕ್ಕೆ ಎಸಿಪಿಗೆ ನೋಟಿಸ್‌!

Published:
Updated:
Prajavani

ಹುಬ್ಬಳ್ಳಿ: ರಸ್ತೆಯಲ್ಲಿ ಸಂಚರಿಸುವಾಗ ತಮಗೆ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಬಾರದು ಎಂದು ಗೃಹಸಚಿವ ಎಂ.ಬಿ.ಪಾಟೀಲ ಅವರು ನೀಡಿದ ಸೂಚನೆಯ ಹೊರತಾಗಿಯೂ ಸಚಿವರ ಕಾರು ತೆರಳಲು ಸಾರ್ವಜನಿಕರ ವಾಹನಗಳನ್ನು ಕೆಲ ಕಾಲ ನಿಲ್ಲಿಸಿದ್ದಕ್ಕಾಗಿ ಸಂಚಾರ ಎಸಿಪಿ ಹಾಗೂ ಇಬ್ಬರು ಇನ್‌ಸ್ಪೆಕ್ಟರ್‌ಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ.

ಸಚಿವರು ಬುಧವಾರ ರಾತ್ರಿ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿದ್ದರು. ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗೋಕುಲ ರಸ್ತೆಯ ಬಸವೇಶ್ವರ ರಸ್ತೆ ಕ್ರಾಸ್‌ ಹಾಗೂ ಕೇಶ್ವಾಪುರ ಬಳಿಯ ದೇಸಾಯಿ ಕ್ರಾಸ್‌ ಬಳಿಯ ಸೇತುವೆ ಬಳಿ ಏಕಮುಖ ಸಂಚಾರ ಇತ್ತು. ಈ ಎರಡು ಸ್ಥಳಗಳಲ್ಲಿ ಸಚಿವರ ಕಾರು ಹೋಗುವವರೆಗೆ ಇತರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಸಂಚಾರ ಎಸಿಪಿ ಎಂ.ವಿ. ನಾಗನೂರ, ಉತ್ತರ ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶ್ರೀಕಾಂತ ತೋಟಗಿ ಹಾಗೂ ಪೂರ್ವ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಶ್ರೀಪಾದ ಜಲ್ದೆ ಅವರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಾವು ಸಹಿಸುವುದಿಲ್ಲ. ತಮಗೆ ಜೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಬಾರದು ಎಂದು ನೂತನ ಗೃಹ ಸಚಿವ ಎಂ.ಬಿ. ಪಾಟೀಲ ಇತ್ತೀಚೆಗೆ ಹೇಳಿದ್ದರು. ಅವರ ಸೂಚನೆ ಮೇರೆಗೆ ಜೀರೊ ಟ್ರಾಫಿಕ್‌ ವ್ಯವಸ್ಥೆ ಇರಲಿಲ್ಲ. ಅದರ ಹೊರತಾಗಿಯೂ ಕೆಲಕಾಲ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿದ್ದಕ್ಕಾಗಿ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !