ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಣಿಗಳು ಹದ್ದಾಗಿ | ಕುಮಾರಸ್ವಾಮಿ ಯಾವ ಪ್ರಜ್ಞೆಯಲ್ಲಿ ಮಾತನಾಡಿದರೊ: ಸಿದ್ದರಾಮಯ್ಯ

Last Updated 24 ಸೆಪ್ಟೆಂಬರ್ 2019, 10:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಿದ್ದರಾಮಯ್ಯ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದವು ಎಂದಿರುವ ಎಚ್.ಡಿ. ಕುಮಾರಸ್ವಾಮಿ, ಯಾವ ಪ್ರಜ್ಞೆಯಲ್ಲಿ ಮಾತನಾಡಿದ್ದಾರೊ ಗೊತ್ತಿಲ್ಲ. ಮೈಸೂರು ಮತ್ತು ಕೊಡಗಿನಲ್ಲಿ ಬಿಜೆಪಿಗೆ ಓಟು ಹಾಕಿಸುವಂತೆ ಕುಮಾರಸ್ವಾಮಿಯೇ ನಮಗೆ ಹೇಳಿದ್ದರು ಎಂದು ಅವರ ಪಕ್ಷದ ಜಿ.ಟಿ. ದೇವೇಗೌಡ ಇತ್ತೀಚೆಗೆ ಹೇಳಿದ್ದಾರೆ. ಹಾಗಾದರೆ, ಇದು ಯಾರ ನಾಟಕ?’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಘೋಷಣೆ ಆಗಿರುವುದರಿಂದ ಅವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿರು.

‘ಸಮ್ಮಿಶ್ರ ಸರ್ಕಾರ ಕೆಟ್ಟದಾಗಿತ್ತು ಎಂಬುದನ್ನು ಸ್ವತಃ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ನಾನೇನು ಹೇಳಲಾರೆ’ ಎಂದ ಅವರು, ‘ಅನರ್ಹ ಶಾಸಕ ಎಚ್. ವಿಶ್ವನಾಥ ಅವರ ಸಿ.ಡಿ ಬಿಡುಗಡೆ ಕುರಿತು ಸಾ.ರಾ. ಮಹೇಶ್‌ಗೆ ಕೇಳಿ. ಅವರಿಗೆ ಚನ್ನಾಗಿ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ನಾನು ಸರಿಯಾಗಿ ಮಾಡಿದ್ದೆ:

ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯ ಅವರ ಕಾರು ಹೊರಡುವಾಗ ರೈತರೊಬ್ಬರು, ‘ಸರ್ ನನ್ನ ಸಾಲ ಇನ್ನೂ ಮನ್ನಾ ಆಗಿಲ್ರಿ. ಏನಾದ್ರು ಮಾಡ್ರಿ’ ಎಂದು ಮನವಿ ಮಾಡಿದರು. ಅದಕ್ಕೆ ‘ನಾನು ಸರಿಯಾಗಿ ಸಾಲ ಮನ್ನಾ ಮಾಡಿದ್ದೆ. ಕುಮಾರಸ್ವಾಮಿ ಮಾಡಿದ್ದು ಸರಿ ಇಲ್ಲಪ್ಪಾ. ನಾನೇನು ಮಾಡಲಿ’ ಎಂದು ಸಮಾಧಾನಪಡಿಸಿದರು.

ಪಕ್ಷಾಂತರಿಗಳನ್ನು ಸೋಲಿಸುತ್ತೇವೆ:

‘ಉಪ ಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಲಿದೆ. ಜನರೂ ಪಕ್ಷಾಂತರಿಗಳನ್ನು ಸೋಲಿಸಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಕೂಡಾ ಅವರನ್ನು ಸೋಲಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ’ ಎಂದು ಹೇಳಿದರು.

‘ಸಂಕಷ್ಟದಲ್ಲಿದ್ದಾಗ ಸ್ಪಂದಿಸದ ಕೇಂದ್ರ’

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ‘ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಸ್ಪಂದಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ ಪ್ರವಾಹ ಸಂಭವಿಸಿ ತಿಂಗಳಾಗಿದೆ. ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಆದರೂ, ಕೇಂದ್ರ ಸರ್ಕಾರ ಪರಿಹಾರ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದೆ. ರಾಜ್ಯ ಸರ್ಕಾರವೂ ನೆರವು ತರುವಲ್ಲಿ ವಿಫಲವಾಗಿದೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರ ಸಮಸ್ಯೆಗೆ ಸ್ಪಂದಿಸಲು ದೆಹಲಿಗೆ ಹೋಗಿ, ವರಿಷ್ಠರ ಬಳಿ ಹೋಗುತ್ತಾರೆ. ಆದರೆ, ರಾಜ್ಯದ ನೆರೆ ಪರಿಹಾರಕ್ಕೆ ಹೋಗಲಿಲ್ಲ. ಬಿಜೆಪಿಯ 25 ಸಂಸದರು ಹಾಗೂ ರಾಜ್ಯದ ಸಚಿವರು ಏನು ಮಾಡುತ್ತಿದ್ದಾರೆ? ನೆರೆ ಪರಿಹಾರ ತರುವುದಕ್ಕಿಂತ ದೊಡ್ಡ ಕೆಲಸ ಅವರಿಗೆ ಬೇರೆ ಏನಿದೆ?’ ಎಂದು ಪ್ರಶ್ನಿಸಿದರು.

‘ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಸರ್ವ ಪಕ್ಷ ಸಭೆ ಕರೆದಿಲ್ಲ. ಕಡೆ ಪಕ್ಷ ಕೇಂದ್ರದ ಬಳಿ ನೆರವು ಕೇಳಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ಮುಖ್ಯಮಂತ್ರಿಗೆ ಮನಸ್ಸಿಲ್ಲ. ಕೇಂದ್ರದ ನೆರವಿಗಾಗಿ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ರಾಜ್ಯಕ್ಕೆ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT