ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಫ್‌ ಕ್ರೀಡಾಕೂಟಕ್ಕೆ ಸಿದ್ದಾರ್ಥ್‌

ಮೂರು ಸ್ಪರ್ಧೆಗಳಲ್ಲಿ ಹುಬ್ಬಳ್ಳಿಯ ಪ್ಯಾರಾ ಕ್ರೀಡಾಪಟು ಭಾಗಿ
Last Updated 22 ಮಾರ್ಚ್ 2022, 16:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಹುಬ್ಬಳ್ಳಿಯ ಸಿದ್ದಾರ್ಥ್‌ ಬಳ್ಳಾರಿ ಈಗ 19ನೇ ಅಂತರರಾಷ್ಟ್ರೀಯ ಶಾಲಾ ಸ್ಪೋರ್ಟ್ಸ್ ಫೆಡರೇಷನ್‌ (ಐಎಸ್‌ಎಫ್‌) ಆಯೋಜಿಸಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ಕ್ರೀಡಾಕೂಟಗಳಲ್ಲಿ ಪ್ಯಾರಾ ಸ್ಪರ್ಧಿಗಳಿಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಈ ಕ್ರೀಡಾಕೂಟ ಮೇ 14ರಿಂದ ಫ್ರಾನ್ಸ್‌ನಲ್ಲಿ ಆಯೋಜನೆಯಾಗಿದೆ. 18 ವರ್ಷದ ಒಳಗಿನ ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರು. ಸಿದ್ದಾರ್ಥ್‌ ನಗರದಲ್ಲಿ ಶಾಂತಿನಿಕೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ನಡೆದ ವಿದ್ಯುತ್‌ ಅವಘಡದಲ್ಲಿ ಸಿದ್ದಾರ್ಥ್‌ಗೆ 11 ಸಾವಿರ ಕೆ.ವಿ. ವೋಲ್ಟೇಜ್‌ನ ವಿದ್ಯುತ್‌ ತಂತಿ ತಗುಲಿ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು. ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಈಗಲೂ ಎಡಗೈ ಸ್ವಾಧೀನವಿಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ದೇಹದಲ್ಲಿ 6,500ಕ್ಕೂ ಹೆಚ್ಚು ಹೊಲಿಗೆಗಳು ಇವೆ.

ಈ ಎಲ್ಲಾ ಸವಾಲುಗಳ ನಡುವೆ ಅರಳಿ ನಿಂತಿರುವ ಸಿದ್ದಾರ್ಥ್‌ ಐಎಸ್‌ಎಫ್‌ ಕ್ರೀಡಾಕೂಟದಲ್ಲಿ 100 ಮೀಟರ್‌, 400 ಮೀ. ಮತ್ತು ಲಾಂಗ್‌ಜಂಪ್‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ತಂಡದ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ಭಾರತ ಸ್ಕೂಲ್‌ ಗೇಮ್ಸ್ ಫೆಡರೇಷನ್‌ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಅರ್ಹತೆ ಪಡೆದಿದ್ದಾರೆ.

ಸಿದ್ದಾರ್ಥ್‌ ‌ಪ್ಯಾರಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿ ಮೂರು ವರ್ಷಗಳಷ್ಟೇ ಕಳೆದಿವೆ. 2021ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಜಯಿಸಿದ್ದರು. ಕಳೆದ ತಿಂಗಳು ಮೈಸೂರಿನಲ್ಲಿ ರಾಜ್ಯತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ 100, 200 ಮೀ. ಓಟ ಹಾಗೂ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಮಗನ ಆಯ್ಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಿದ್ದಾರ್ಥ್‌ ತಂದೆ ಮಂಜುನಾಥ ಬಳ್ಳಾರಿ ‘ವಿದ್ಯುತ್‌ ಅವಘಡವಾದಾಗ ಮಗ ಬದುಕುಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿ ನಾವಿದ್ದೆವು. ಈಗ ಮರುಜನ್ಮ ಪಡೆದು ಶಾಲಾ ಕ್ರೀಡಾಕೂಟದಲ್ಲಿ ವಿಶ್ವಮಟ್ಟಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಇದಕ್ಕಿಂತ ದೊಡ್ಡ ಖುಷಿ ಬೇರೆ ಏನೂ ಇಲ್ಲ. ನನ್ನ ಶ್ರಮಕ್ಕೆ ಫಲ ತಂದುಕೊಡುತ್ತಿದ್ದಾನೆ’ ಎಂದು ಭಾವುಕರಾದರು.

ನನ್ನ ಜೀವನ ಸುಂದರವಾಗಿರುವಂತೆ ಮಾಡಲು ಅಪ್ಪ ಸಾಕಷ್ಟು ಶ್ರಮಿಸಿದ್ದಾರೆ. ವಿಶ್ವಮಟ್ಟದ ಸ್ಪರ್ಧೆಯಲ್ಲಿ ಪದಕ ಗೆದ್ದು ಅವರ ಆಸೆ ಈಡೇರಿಸುವೆ.
-ಸಿದ್ದಾರ್ಥ್‌ ಬಳ್ಳಾರಿ, ಕ್ರೀಡಾಪಟು

ಕ್ರೀಡಾಭ್ಯಾಸ ಆರಂಭಿಸಿದ ಹೊಸದರಲ್ಲಿ ಸಿದ್ದಾರ್ಥ್‌ ಚೆನ್ನಾಗಿ ನಡೆದಾಡಿದರೆ ಸಾಕು ಎನ್ನುವ ಸ್ಥಿತಿಯಿತ್ತು. ಕಠಿಣ ಅಭ್ಯಾಸದಿಂದ ಈಗ ಎಲ್ಲರನ್ನೂ ಹಿಂದಿಕ್ಕಿ ಓಡುವುದನ್ನು ಕಲಿತಿದ್ದಾನೆ.
-ಸಂತೋಷ ಹೊಸಮನಿ, ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT