ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸಿರಿಧಾನ್ಯಕ್ಕೆ ಆಧುನಿಕ ಸ್ಪರ್ಶ

ಇಂದಿನ ಮಕ್ಕಳು ಬಯಸುವ ಪಾಸ್ತಾ, ನೂಡಲ್ಸ್‌ ರೂಪದಲ್ಲಿ ಕೊರಲೆ
Last Updated 19 ಜನವರಿ 2020, 10:04 IST
ಅಕ್ಷರ ಗಾತ್ರ

ಧಾರವಾಡ: ಈಗಿನ ಪಿಜ್ಜಾ, ಪಾಸ್ತಾ ಜಮಾನದಲ್ಲಿ ನಮ್ಮ ಸಾಂಪ್ರದಾಯಿಕ ತಿನಿಸುಗಳು ತೆರೆಮರೆಗೆ ಸರಿಯುತ್ತಿವೆ. ಫಾಸ್ಟ್‌ಫುಡ್‌ ಭರಾಟೆಯಲ್ಲಿ ಸಿರಿಧಾನ್ಯಗಳ ತಿನಿಸು ಮೂಲೆಗುಂಪಾಗಿದ್ದು ಸುಳ್ಳಲ್ಲ. ಆದರೆ ಅದೇ ಸಿರಿಧಾನ್ಯವಿಂದು ಆಧುನಿಕ ಸ್ಪರ್ಶ ಪಡೆದುಕೊಂಡು ನೋಡುಗರು ಕಣ್ಣಗಲಿಸುವಂತೆ ಮಾಡಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆರಂಭವಾದ ಕೃಷಿ ಮೇಳದಲ್ಲಿ ಸಿರಿಧಾನ್ಯಗಳು ಆಧುನಿಕತೆ ಮೆರೆದವು. ಕೊರಲೆ, ಊದಲು, ಹಾರಕ, ಬರಗು ಪಾಸ್ತಾ, ನೂಡಲ್ಸ್‌ ರೂಪ ಪಡೆದಿದ್ದವು. ಬರಗು ದೋಸೆ ಮಿಕ್ಸ್‌, ನುಗ್ಗೆ ಸೊಪ್ಪಿನ ಬರಗು ದೋಸೆ ಮಿಕ್ಸ್‌ ಕೂಡ ಸಿದ್ಧ ಆಹಾರದ ಪಾಕೀಟುಗಳಲ್ಲಿ ಸೇರಿಕೊಂಡು ಗಮನ ಸೆಳೆದವು.

ಕೃಷಿ ವಿವಿಯ ಗೃಹ ವಿಜ್ಞಾನ ವಿಭಾಗದ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ವಿಭಾಗ ನಮ್ಮ ನೆಲದ ಸಿರಿಧಾನ್ಯಗಳಿಗೆ ಆಧುನಿಕ ತಿಸಿಸುಗಳ ಸ್ಪರ್ಶ ನೀಡಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ₹1.28 ಕೋಟಿ ಅನುದಾನದಡಿಯಲ್ಲಿ ಸಿರಿಧಾನ್ಯದ ಕೊರಲೆ, ಊದಲು, ಹಾರಕ, ಬರಗು ಇಂದಿನ ಮಕ್ಕಳು ಬಯಸುವ ಸ್ನ್ಯಾಕ್ಸ್‌ ರೂಪ ಪಡೆದಿವೆ. ಈಗಾಗಲೇ ಸಾವೆ ನಿಪ್ಪಟ್ಟು, ಸಾವೆ ಚಕ್ಕಲಿ, ನವಣೆ ಲಡ್ಡು, ಅಗಸಿ ಲಡ್ಡು, ನವಣೆ ಸಾವಿಗೆ, ಬಿಸ್ಕತ್‌, ಕುಕ್ಕೀಸ್‌, ಸೋಯಾ ಹುರಿಗಾಳು, ಶೇ 30 ಅಂಶ ಸಿರಿಧ್ಯಾನವೊಳಗೊಂಡ ಬೇಕರಿ ಪದಾರ್ಥಗಳು ಈಗಾಗಲೇ ಪ್ರಚಲಿತದಲ್ಲಿವೆ. ಸಿರಿಧಾನ್ಯ ಆಧಾರಿತ ತರಬೇತಿ ಮೂಲಕ ಸಿರಿಧಾನ್ಯ ಉತ್ಪನ್ನಗಳನ್ನು ಜನರ ಹತ್ತಿರಕ್ಕೆ ಒಯ್ಯುವುದರ ಜೊತೆಗೆ ಅದನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶವು ಗೃಹ ವಿಜ್ಞಾನ ವಿಭಾಗದ ಮುಂದಿದೆ. ಸಾವೆಯ ಮಧುಮೇಹ ಮಿಶ್ರಣ, ಸ್ಪೋರ್ಟ್ಸ್ ಆಹಾರ ವಾಣಿಜ್ಯೀಕರಣಗೊಂಡಿದೆ.

ಸಿರಿಧಾನ್ಯಗಳ ಮೇಲೆ ಇಲ್ಲಿ ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗದೆ ಅದನ್ನು ಜನರ ಹತ್ತಿರಕ್ಕೆ ಒಯ್ಯುವ ಉದ್ದೇಶದಿಂದ ಆಸಕ್ತ ಆಹಾರ ಉದ್ಯಮಿಗಳಿಗೆ ಐದು ದಿನಗಳ ತರಬೇತಿಯನ್ನು ಮುಂದಿನ ತಿಂಗಳಿಂದ ಗೃಹ ವಿಜ್ಞಾನ ವಿಭಾಗ ಹಮ್ಮಿಕೊಳ್ಳುತ್ತಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಯೋಜನೆಯ ಪ್ರಧಾನ ಸಂಶೋಧಕಿ ಡಾ.ಸರೋಜಿನಿ ಕರಕನ್ನವರ್‌ ಹೇಳಿದರು.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳಿಗೆ ಅಗತ್ಯ ಕಬ್ಬಿಣಾಂಶದ ಪೋಷಕಾಂಶ ಒದಗಿಸಲು ಮೈಕ್ರೋ ಮಿಲ್ಲೆಟ್‌ ಅನ್ನು ಆಹಾರ ಸಂಸ್ಕರಣೆ ಮತ್ತು ತಾಂತ್ರಿಕ ಮೌಲ್ಯವರ್ಧನೆ ವಿಭಾಗ ಸಿದ್ಧಪಡಿಸಿದೆ. ಎಳೆಯ ಸೊಪ್ಪನ್ನು ಬಳಸಿಕೊಂಡು ಮೈಕ್ರೋ ಮಿಲ್ಲೆಟ್‌ ಅನ್ನು ಸಂಸ್ಕರಿಸಲಾಗಿದೆ. ಸ್ಟ್ರಾಬೆರಿ ಜ್ಯೂಸ್‌, ಜಾಮ್‌, ಕ್ರಶ್‌ ಮತ್ತು ಕ್ಯಾಂಡಿ, ಕ್ಯಾರೆಟ್‌ ಜ್ಯೂಸ್‌ ಮತ್ತು ಪಾಸ್ತಾ, ಪೇರಲ ಜ್ಯೂಸ್‌, ಅನಾನಸ್ ಜ್ಯೂಸ್‌ಗಳು ಕೃಷಿ ಮೇಳದ ಮಳಿಗೆಯಲ್ಲಿ ಜನರನ್ನು ಸೆಳೆದವು. ಅಲ್ಲಿ ಆಕರ್ಷಕವಾಗಿ ಸೇರಿಸಿಟ್ಟ ಸಿರಿಧಾನ್ಯ ತಿನಿಸಿ, ಸಾಂಪ್ರದಾಯಿಕ ತಿನಿಸು, ವಿವಿಧ ಹಣ್ಣುಗಳ ವೈನ್‌ ಜನರ ಬಾಯಲ್ಲಿ ನೀರೂರಿಸಿದವು.

ಪೋಷಕಾಂಶಗಳ ಆಗರ ಸಿರಿಧಾನ್ಯವನ್ನು ಹೆಚ್ಚು ಜನರು ಬಳಸುವಂತಾಗಲು ಅದನ್ನು ವಿವಿಧ ತಿನಿಸುಗಳ ರೂಪದಲ್ಲಿ ಬಳಸಲಾಗಿದೆ. 15 ವರ್ಷಗಳಿಂದ ಸಿರಿಧಾನ್ಯಗಳ ಮೌಲ್ಯವರ್ಧನೆ ನಡೆಯುತ್ತಿದ್ದು, ಈಗಿನ ಕಾಲಕ್ಕೆ ತಕ್ಕಂತೆಯೂ ಅದನ್ನು ಸಿದ್ಧಪಡಿಸಲಾಗಿದೆ ಎಂದು ಆಹಾರ ಸಂಸ್ಕರಣೆ ಮತ್ತು ತಾಂತ್ರಿಕ ವಿಭಾಗದ ಡಾ.ಹೇಮಲತಾ ಪೋದ್ದಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT