ಮಂಗಳವಾರ, ಏಪ್ರಿಲ್ 20, 2021
31 °C

ಸಿತಾರ್ ವಾದಕ ಶಿವಾನಂದ ತರ್ಲಗಟ್ಟಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಸಿತಾರ್ ವಾದಕ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪಂ. ಶಿವಾನಂದ ತರ್ಲಗಟ್ಟಿ (94) ಶನಿವಾರ ರಾತ್ರಿ ನಿಧನರಾದರು.

ಅವರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದಲ್ಲಿ 1927ರಲ್ಲಿ ಜನಿಸಿದ ತರ್ಲಗಟ್ಟಿ ಅವರು ಆರಂಭದಲ್ಲಿ ಕೊಳಲಿನಲ್ಲಿ ಶಾಸ್ತ್ರೀಯ ಸಂಗೀತ ನುಡಿಸುತ್ತ ನಂತರ ಆರ್.ವಿ. ಗುಡಿಯಾಳ್ ಅವರ ಬಳಿ ಸಿತಾರ್ ತರಬೇತಿ ಪಡೆದರು.

ಕೆಲ ಕಾಲ ಮುಂಬೈನ ಉಸ್ತಾದ್ ಜಿಯಾ ಮೊಹಿಯುದ್ದೀನ್ ಡಾಗರ್ ಅವರ ಬಳಿ ತರಬೇತಿ ಪಡೆದರು. ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರಿಂದ ರಾಗ-ರಾಗಿಣಿ ಕಲಿತು ಸಿತಾರ್ ವಾದನದಲ್ಲಿ ಜೈಪುರ್ ಅತ್ರೋಳಿ ಘರಾಣಾ ಬೆಳೆಸುವ ಪ್ರೇರಣೆ ಪಡೆದರು. ತಮ್ಮ ಬದುಕನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಮುಡಿಪಾಗಿಟ್ಟರು. ಫ್ರಾನ್ಸ್‌ನಲ್ಲಿ 1986ರಲ್ಲಿ ಕಲಾವಿಸ್ತಾರ್ ಸಂಸ್ಥೆಯ ಆಧಾರಸ್ತಂಭವಾಗಿ, ಪಾಶ್ಚಾತ್ಯ ಶ್ರೋತೃಗಳಲ್ಲಿ ಹಿಂದೂಸ್ತಾನಿ ಸಂಗೀತದ ಅರಿವು ಮೂಡಿಸಲು ನೆರವಾದರು.

ಫ್ರಾನ್ಸ್ ದೇಶದ ಸಂಸ್ಕೃತಿ ಮತ್ತು ಶಿಕ್ಷಣ ಸಚಿವಾಲಯಗಳಿಂದ ಫ್ರೆಂಚ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಲು ಆಹ್ವಾನಿತರಾಗಿ 1987ರಿಂದ ಕಾರ್ಯಕ್ರಮಗಳನ್ನು ನೀಡಿದರು. ಇಂಗ್ಲೆಂಡ್‌, ಟ್ಯುನೀಷಿಯಾ, ಸ್ವಿಡ್ಜರ್ಲೆಂಡ್, ದಕ್ಷಿಣ ಅಮೆರಿಕದ ದೇಶಗಳಲ್ಲಿ ಅವರು ಸಿತಾರ್ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 

1998 ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು