ಶನಿವಾರ, ಮೇ 8, 2021
25 °C
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಆಡಳಿತದಿಂದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ

ಆರು ಧಾರ್ಮಿಕ ಕಟ್ಟಡ ತೆರವು: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ತಾಲ್ಲೂಕಿನ ಗ್ರಾಮೀಣ ಭಾಗದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಧಾರ್ಮಿಕ ಕಟ್ಟಡಗಳನ್ನು ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಆಡಳಿತ ಬುಧವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಜೆಸಿಬಿಯಿಂದ ತೆರವುಗೊಳಿಸಿತು.

ತಹಶೀಲ್ದಾರ್‌ ಪ್ರಕಾಶ ನಾಶಿ ನೇತೃತ್ವದಲ್ಲಿ ಬೆಳಿಗ್ಗೆ 6ರಿಂದಲೇ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಾವನೂರು–ಕಟ್ನೂರು ರಸ್ತೆಯ ಗಿರಿಯಾಲ ಬಳಿ ಇರುವ ದರ್ಗಾ, ಬ್ಯಾಹಟ್ಟಿ–ತಿರ್ಲಾಪುರ ರಸ್ತೆಯಲ್ಲಿರುವ ಬಸವೇಶ್ವರ ಗುಡಿ, ಕುಸಗಲ್‌–ಬ್ಯಾಹಟ್ಟಿ ರಸ್ತೆಯಲ್ಲಿ ಗುಡಿ, ಅಣ್ಣಿಗೇರಿ–ಸೂಪಾ ರಸ್ತೆಯ ಆಶ್ರಯ ಕಾಲೊನಿಯಲ್ಲಿದ್ದ ನಾಗಪ್ಪನ ಕಟ್ಟೆ, ಕೋಳಿವಾಡ ಗ್ರಾಮದಲ್ಲಿರುವ ನಾಗಪ್ಪನ ಗುಡಿ ತೆರವುಗೊಳಿಸಲಾಯಿತು.

ಅದರಗುಂಚಿಯಲ್ಲಿ ಧರಣಿ, ನೂಕಾಟ: ತಾಲ್ಲೂಕಿನ ಅದರಗುಂಚಿ ಗ್ರಾಮದ ಹಳ್ಯಾಳ ರಸ್ತೆಯಲ್ಲಿರುವ ಏಳು ಮಕ್ಕಳ ತಾಯವ್ವ ಗುಡಿ ತೆರವು ಕಾರ್ಯಾಚರಣೆಗೆ ಸಿಬ್ಬಂದಿ ತೆರಳಿದಾಗ, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಗ್ರಾಮಸ್ಥರು ಜೆಸಿಬಿ ತಡೆಯಲು ಮುಂದಾದಾಗ ಅವರ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಮಹಿಳೆಯರು ಗುಡಿಯ ಎದುರು ನಿಂತು ಜೆಸಿಬಿ ತರದಂತೆ ತಡೆದರು. ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತಾದರೂ ಪ್ರಕಾಶ ನಾಶಿ, ಗ್ರಾಮಸ್ಥರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ನಂತರ ಪೊಲೀಸ್‌ ಭದ್ರತೆಯಲ್ಲಿಯೇ ಗುಡಿ ತೆರವು ಮಾಡಲಾಯಿತು.

ಇದಕ್ಕೂ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಗುಡಿಯ ಎದುರು ಧರಣಿ ಕುಳಿತು, ತೆರವು ಕಾರ್ಯಾಚರಣೆ ನಡೆಸದಂತೆ ಪಟ್ಟು ಹಿಡಿದಿದ್ದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಪ್ರತಿಭಟನೆ ನಡೆಸುತ್ತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

‘2009ರ ಸುಪ್ರೀಂ ಕೋರ್ಟ್‌ ಆದೇಶ ಎನ್ನುತ್ತ ಏಕಾಏಕಿ ಬಂದು ಗುಡಿ ತೆರವು ಮಾಡುತ್ತಿರುವುದು ಸರಿಯಲ್ಲ. ಅಂದಾಜು ಎರಡು ನೂರು ವರ್ಷಕ್ಕಿಂತ ಹಳೆಯದಾದ ಗುಡಿ ಇದಾಗಿದೆ. ಏಳು ಮಕ್ಕಳ ತಾಯವ್ವ ಈ ಭಾಗದ ರೈತ ಸಮುದಾಯದ ಆರಾಧ್ಯ ದೈವ. ಜನರ ನಂಬಿಕೆ ಮೇಲೆ ತಾಲ್ಲೂಕಾಡಳಿತ ಪ್ರಹಾರ ನಡೆಸುತ್ತಿದೆ’ ಎಂದು ಅದರಗುಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಹೇಳಿದರು.

‘ನಗರ ಪ್ರದೇಶದಲ್ಲಿ ವಾಹನ ಸಂಚಾರ ಹಾಗೂ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಧಾರ್ಮಿಕ ಗುಡಿಗಳು ಸಾಕಷ್ಟಿವೆ. ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಅನೇಕ ಕಟ್ಟಡಗಳಿವೆ. ಅವುಗಳನ್ನೇ ತೆರವು ಮಾಡಿಲ್ಲ’ ಎಂದು ದೂರಿದರು.

‘ಸರ್ವೆ ಮಾಡಿದಾಗ ತಾಯವ್ವ ಗುಡಿ ನನ್ನ ಹೊಲದಲ್ಲಿತ್ತು. ಗುಡಿ ಇದ್ದಷ್ಟು ಜಾಗ ಬಿಟ್ಟು ಪಕ್ಕದಲ್ಲಿ ಬೇಲಿ ಹಾಕಿದ್ದೇನೆ. ತಾಲ್ಲೂಕಾಡಳಿತ ಏಕಾಏಕಿ ರಸ್ತೆಯಲ್ಲಿ ಗುಡಿಯಿದೆ ಎಂದು ತೆರವು ಮಾಡಲು ಬಂದಿದೆ’ ಎಂದು ಮಹೇಶ್ವರ ಅಂಗಡಿ ಆರೋಪಿಸಿದರು.

ಶಂಕರಗೌಡ ನೀಲಪ್ಪಗೌಡ, ಮಕ್ತುಂ ಹುಸೇನ್ ಬಡಿಗೇರ, ಮಲ್ಲಿಕಾರ್ಜುನಗೌಡ ಕಾನಗೌಡ, ರಾಮಪ್ಪ ಮುದಣ್ಣವರ, ಸಂಗಪ್ಪ ವಿಜಾಪುರ, ಮಹೇಶ್ವರ ಅಂಗಡಿ, ಶ್ರೀಕಾಂತ ಅಂಗಡಿ, ಶಾರದಾ ನೀಲಪ್ಪಗೌಡರ, ಬಸಮ್ಮ ಮಾಳಗಿ, ಗಿರಿಜಾ ಹುಳಿಕೊಪ್ಪ, ನಿರ್ಮಲಾ ಬಾಗೆವಾಡಿ, ಅನಿತಾ ಇಟಗಿ ಹಾಗೂ ಗ್ರಾಮಸ್ಥರು ಇದ್ದರು.

ಕಾನೂನು ಪಾಲಿಸಿದ್ದೇವೆ: ತಹಶೀಲ್ದಾರ್‌: ‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಹುಬ್ಬಳ್ಳಿ ಗ್ರಾಮೀಣ ಭಾಗದ ರಸ್ತೆಯಲ್ಲಿದ್ದ ಆರು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಅದರಗುಂಚಿಯಲ್ಲಿದ್ದ ಗುಡಿ ತೆರವು ಮಾಡುವಾಗ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಜಿಲ್ಲಾಡಳಿತದ ಕಟ್ಟು ನಿಟ್ಟಿನ ಸೂಚನೆ ಮೇರೆಗೆ, ಅವರಿಗೆ ಎಚ್ಚರಿಕೆ ನೀಡಿ ಗುಡಿ ತೆರವು ಮಾಡಿದ್ದೇವೆ. ಕಾನೂನು ಪ್ರಕಾರ ಕಾರ್ಯ ನಿರ್ವಹಿಸಿದ್ದೇವೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು