ಭಾನುವಾರ, ಆಗಸ್ಟ್ 18, 2019
26 °C
ದೇಶಪಾಂಡೆ ಫೌಂಡೇಷನ್‌ನಿಂದ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ

ಇಂಗ್ಲಿಷ್‌ ಕಲಿಕೆ ಸುಲಭ ಮಾಡಿದ ‘ಸ್ಕಿಲ್‌ ಇನ್‌ ವಿಲೇಜ್‌’

Published:
Updated:
Prajavani

ಹುಬ್ಬಳ್ಳಿ: ಮೈ ನೇಮ್‌ ಇಸ್‌ ಶ್ವೇತಾ, ಫಾದರ್‌ ನೇಮ್‌ ಇಸ್ ಮಹೇಶ ಶಾನವಾಡ, ಸ್ಟಡೀಂಗ್‌ ಇನ್‌ ಸಿಕ್ಸ್ತ್‌ ಸ್ಟ್ಯಾಂಡರ್ಡ್‌...

ಹೀಗೆ ಪಟಪಟನೇ ಇಂಗ್ಲಿಷ್‌ನಲ್ಲಿ ಮಾತು ಆರಂಭಿಸಿದ್ದು ನವಲಗುಂದ ತಾಲ್ಲೂಕಿನ ಬಲ್ಲಾರವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಶ್ವೇತಾ. ಅವರ ಬಳಿಕ ಕೆಲ ವಿದ್ಯಾರ್ಥಿಗಳು ಕೂಡ ಹೆಚ್ಚು ಆತ್ಮವಿಶ್ವಾಸದಿಂದ ಇಂಗ್ಲಿಷ್‌ನಲ್ಲಿ ತಮ್ಮ ಪರಿಚಯ ಮಾಡಿಕೊಂಡರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್‌ ಬಗ್ಗೆ ಇರುವ ಕೀಳರಿಮೆ ದೂರ ಮಾಡಬೇಕು, ನಿರರ್ಗಳವಾಗಿ ಮಾತನಾಡುವಂತಾಗಬೇಕು ಎನ್ನುವ ಉದ್ದೇಶದಿಂದ ದೇಶಪಾಂಡೆ ಫೌಂಡೇಷನ್‌ ಆಯ್ದ ಗ್ರಾಮಗಳಲ್ಲಿ ‘ಸ್ಕಿಲ್‌ ಇನ್ ವಿಲೇಜ್‌’ ತರಬೇತಿ ನೀಡುತ್ತಿದೆ.

ಈ ಯೋಜನೆ ಅಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ತಾಸು ಇಂಗ್ಲಿಷ್‌ ಕಲಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಿ ಇಂಗ್ಲಿಷ್‌ ಕಲಿಸಲು ನಿಯೋಜಿಸಲಾಗುತ್ತದೆ. ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ವಿದ್ಯಾರ್ಥಿಗಳು ತಮ್ಮ ಇಂಗ್ಲಿಷ್‌ ಕಲಿಕೆಯ ಜ್ಞಾನ ಪ್ರದರ್ಶಿಸಿದರು. ಮಕ್ಕಳಿಗೆ ಹಾಡು, ನೃತ್ಯದ ಮೂಲಕ ಶಿಕ್ಷಕಿ ಲಕ್ಷ್ಮಿ ಭೋವಿ ಇಂಗ್ಲಿಷ್‌ ಕಲಿಸುತ್ತಾರೆ.

5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಹತ್ತು ತಿಂಗಳು ಇಂಗ್ಲಿಷ್‌ ಕಲಿಸಲಾಗುತ್ತದೆ.  2017ರಲ್ಲಿ ಒಂದು ಶಾಲೆಯಿಂದ ಆರಂಭವಾದ ‘ಸ್ಕಿಲ್‌ ಇನ್ ವಿಲೇಜ್‌’ ಕೇಂದ್ರಗಳು ಈಗ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿವೆ. ತೆಲಂಗಾಣದಲ್ಲಿಯೂ ಕೇಂದ್ರಗಳನ್ನು ಹೊಂದಿವೆ.

‘ಈಗ ಎಲ್ಲರಿಗೂ ಇಂಗ್ಲಿಷ್‌ ಅನಿವಾರ್ಯ. ಬೇಗನೆ ಕಲಿಸಿದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳು ಸುಲಭವಾಗಿ ಇಂಗ್ಲಿಷ್ ಮಾತನಾಡುವುದರಿಂದ ಪೋಷಕರು ಕೂಡ ಹೆಮ್ಮೆ ಪಡುತ್ತಿದ್ದಾರೆ’ ಎಂದು ‘ಸ್ಕಿಲ್‌ ಇನ್ ವಿಲೇಜ್‌’ ಯೋಜನೆಯ ನವಲಗುಂದ ತಾಲ್ಲೂಕಿನ ಕ್ಲಸ್ಟರ್‌ ಮುಖ್ಯಸ್ಥ ಹನುಮಂತ ಬಂಗಾಲಿ ತಿಳಿಸಿದರು.

ಕೃಷಿಯಲ್ಲಿ ಖುಷಿ ಕಂಡವರು:

ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ನಿರಂತರವಾಗಿ ಬರಗಾಲ ಕಾಡುತ್ತಿದೆ. ಆದರೆ, ಬಲ್ಲಾರವಾಡದ ಸಂತೋಷ ಶೆರವಾಡ ಹಾಗೂ ಶಿವಾನಂದ ಶಾನವಾಡ ತಮ್ಮ ಹೊಲಗಳಲ್ಲಿ ‘ನೀರ್ ಸಿಂಚನಾ’ ಮೂಲಕ ಕೃಷಿಹೊಂಡ ನಿರ್ಮಿಸಿಕೊಂಡು ಕೃಷಿಯಲ್ಲಿ ಖುಷಿ ಕಂಡಿದ್ದಾರೆ.

ಇವರಿಬ್ಬರೂ ಸೇರಿ ಒಟ್ಟು ಹತ್ತು ಏಕರೆ ಭೂಮಿ ಹೊಂದಿದ್ದು, ಫೌಂಡೇಷನ್‌ ನೆರವಿನಿಂದ 2014ರಿಂದ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಮೊದಲು ಪಪ್ಪಾಯಿ, ನುಗ್ಗೆಕಾಯಿ ಬೆಳೆಯುತ್ತಿದ್ದವರು ಈಗ ರೇಷ್ಮೆ ಬೆಳೆಯುತ್ತಿದ್ದಾರೆ. ಬದುವಿಗೆ ಉಳ್ಳಾಗಡ್ಡಿ ಹಾಕಿದ್ದಾರೆ.

‘ಮೊದಲಾದರೆ ಮಳೆ ಯಾವಾಗ ಬರುತ್ತದೆ ಎಂದು ಕಾಯುವುದೇ ಕೆಲಸವಾಗುತ್ತಿತ್ತು. ಈಗ ಕೃಷಿಹೊಂಡ ನಿರ್ಮಿಸಿಕೊಂಡ ಬಳಿಕ ನೀರು ಸಂಗ್ರಹ ಸುಲಭವಾಗಿದೆ. ಮೊದಲಿಗಿಂತಲೂ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗಿದೆ. 15 ಅಡಿ ಎರಡು ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ’ ಎಂದು ಸಂತೋಷ ಹೇಳಿದರು.

‘ಸ್ವಂತ ಖರ್ಚಿನಿಂದ ಕೃಷಿಹೊಂಡ ತೆಗೆದರೆ ₹ 50ರಿಂದ ₹ 60 ಸಾವಿರ ವೆಚ್ಚವಾಗುತ್ತದೆ. ದೇಶಪಾಂಡೆ ಫೌಂಡೇಷನ್‌ ನೆರವಿನಿಂದ ₹ 30ರಿಂದ ₹ 35 ಸಾವಿರದಲ್ಲಿ ಹೊಂಡ ನಿರ್ಮಿಸಲು ಸಾಧ್ಯವಾಗಿದೆ. ಕಪ್ಪು ಮಣ್ಣಿನ ನೆಲವಾದ ಕಾರಣ ವರ್ಷಪೂರ್ತಿ ನೀರು ಇರುತ್ತದೆ’ ಎಂದು ಶಿವಾನಂದ ಹೇಳಿದರು.

ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರದಲ್ಲಿ ಅರುಣ ಕುರಹಟ್ಟಿ ಎಂಬ ರೈತ ಐದು ಎಕರೆಯಲ್ಲಿ ಕೃಷಿಹೊಂಡದ ನೆರವಿನಿಂದ ಪೇರಲ ಬೆಳೆದಿದ್ದಾರೆ. ಇದರಿಂದ ಅವರಿಗೆ ವರ್ಷಪೂರ್ತಿ ಹೊಂಡದಲ್ಲಿ ನೀರು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಅರುಣ್ ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಾರೆ.

Post Comments (+)