ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯ ಸ್ಮಶಾನದಲ್ಲಿನ ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಹು–ಧಾ ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದು, ಶ್ರೀರಾಮ ಸೇನೆ ಹಾಗೂ ವಿವಿಧ ದಲಿತರ ಸಂಘಟನೆಯಿಂದ ಗುರುವಾರ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್, ‘ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರ ದರ್ಪದಿಂದ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದರು. ನೀವು ಜನಸೇವಕರೇ ಹೊರತು, ಗೂಂಡಾ ಅಲ್ಲ. ಜನರ ಭಾವನೆಗೆ ಮನ್ನಣೆ ಕೊಟ್ಟು, ಕಾನೂನಿನಂತೆ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಕ್ಯಾಂಟೀನ್ ಸ್ಥಳಾಂತರಿಸದಿದ್ದರೆ ನಮ್ಮ ತಾಕತ್ತು ತೋರಿಸುತ್ತಿದ್ದೆವು. ಕ್ಯಾಂಟೀನ್ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರಿಂದ ಅವರು ತಪ್ಪು ಮಾಡಿರುವುದು ಸಾಬೀತಾಗಿದೆ. ಅನಧಿಕೃತವಾಗಿ ಕ್ಯಾಂಟೀನ್ ನಿರ್ಮಿಸಿದವರ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಕ್ಯಾಂಟೀನ್ ನಿರ್ಮಾಣದ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಚಂದ್ರಶೇಖರ ಗೋಕಾಕ ಮಾತನಾಡಿ, ‘ಕ್ಯಾಂಟೀನ್ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಶ್ರೀರಾಮ ಸೇನೆಯ ಗಂಗಾಧರ ಕುಲಕರ್ಣಿ, ಮಂಜುನಾಥ ಕಾಟ್ಕರ, ಅಣ್ಣಪ್ಪ ದಿವಟಗಿ, ಬಸವರಾಜ ಗೌಡರ, ಬಸು ದುರ್ಗದ, ಗುಣಧರ ದಡೋತಿ ಇದ್ದರು.
- ‘ಅಧಿಕಾರಿಗಳ ವಿರುದ್ಧ ಕ್ರಮವಾಗಲಿ’
‘ಹುಬ್ಬಳ್ಳಿಯ ಮಂಟೂರ ರಸ್ತೆಯ ಸ್ಮಶಾನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದ ಗುತ್ತಿಗೆದಾರ ಹಾಗೂ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯ ವಿಜಯ ಗುಂಟ್ರಾಳ ಆಗ್ರಹಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲಾಧಿಕಾರಿ ಪಾಲಿಕೆ ಅಧೀಕ್ಷಕ ಎಂಜಿನಿಯರ್ ನಗರಾಭಿವೃದ್ಧಿ ಘಟಕದ ಯೋಜನಾಧಿಕಾರಿ ದಲಿತರನ್ನು ರಕ್ಷಿಸದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ದೂರು ನೀಡಲಾಗುವುದು’ ಎಂದರು. ‘ಸ್ಮಶಾನದ 2 ಎಕರೆ ಜಾಗ ಕಬಳಿಸಿ ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡು ನಿರ್ಮಿಸಿದ 100 ಅಡಿ ಉದ್ದದ ರಸ್ತೆಯನ್ನು ತೆರವುಗೊಳಿಸಬೇಕು. ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಿ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಬಸಂತಕುಮಾರ ಅನಂತಪುರ ಅನೂಪ ಬಿಜವಾಡ ಶಿವಶಂಕರ ಭಂಡಾರಿ ಶ್ರೀನಿವಾಸ ರಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.