ಗುರುವಾರ , ನವೆಂಬರ್ 14, 2019
19 °C
ಗಾಣಿಗ ಸಂಘದ ಮಹಾಸಭೆ

ಆರ್ಥಿಕ ಶಕ್ತಿಯಿಂದ ಸಾಮಾಜಿಕ ಪ್ರಗತಿ: ಸಚಿವ ಜಗದೀಶ ಶೆಟ್ಟರ್

Published:
Updated:
Prajavani

ಹುಬ್ಬಳ್ಳಿ: ‘ಯಾವುದೇ ಸಮುದಾಯ ಆರ್ಥಿಕವಾಗಿ ಸಬಲವಾಗದ ಹೊರತು, ಸಾಮಾಜಿಕವಾಗಿ ಪ್ರಗತಿ ಸಾಧಿಸದು. ಆ ನಿಟ್ಟಿನಲ್ಲಿ ಗಾಣಿಗ ಸಮುದಾಯ ಆರ್ಥಿಕವಾಗಿ ಶಕ್ತಿಶಾಲಿಯಾಗಬೇಕು’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಗಾಣಿಗ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮುದಾಯದ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ, ಕೆಪಿಎಸ್‌ಸಿಯಲ್ಲಿ ಪ್ರಾತನಿಧ್ಯ, ಶೈಕ್ಷಣಿಕ ಉದ್ದೇಶಕ್ಕೆ 10 ಎಕರೆ ಭೂಮಿ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು. ಕೆಲ ಬೇಡಿಕೆಗಳನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಲು ಒತ್ತಾಯಿಸಲಾಗುವುದು’ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ರಾಜ್ಯದಲ್ಲಿ ಗಾಣಿಗ ಸಮುದಾಯದವರು ಬಿಜೆಪಿಯನ್ನು ಹಿಂದಿನಿಂದಲೂ ಬೆಂಬಲಿಸಿಕೊಂಡು ಬಂದಿದೆ. ಅದಕ್ಕೆ ತಕ್ಕಂತೆ ಪಕ್ಷವೂ ಪ್ರಾತಿನಿಧ್ಯ ನೀಡಿದೆ. ರಾಜ್ಯ ಸರ್ಕಾರದಲ್ಲಿ ಅದೇ ಸಮುದಾಯಕ್ಕೆ ಸೇರಿದ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ’ ಎಂದ ಅವರು, ‘ಹುಬ್ಬಳ್ಳಿಯಲ್ಲಿ ಗಾಣಿಗ ಸಮುದಾಯದ ಹಾಸ್ಟೆಲ್‌ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿದರೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದರು.

ಸಂಸದ ಶಿವಕುಮಾರ ಉದಾಸಿ, ‘ಗದಗ ಜಿಲ್ಲೆಯಲ್ಲಿ ಗಾಣಿಗ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹25 ಲಕ್ಷ ಬಿಡುಗಡೆ ಮಾಡಲಾಗಿದೆ. ಮತ್ತಷ್ಟು ಅನುದಾನವನ್ನು ಉಳಿದ ನಾಯಕರಿಂದ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಚಿತ್ರದುರ್ಗದ ಜಯಬಸವ ಸ್ವಾಮೀಜಿ ಮಾತನಾಡಿ, ‘ಗಾಣಿಗ ಸಮುದಾಯ ಇದುವರೆಗೆ ಸರ್ಕಾರದಿಂದ ಯಾವುದೇ ನೆರವು ಪಡೆದಿಲ್ಲ. ಹಾಗಾಗಿ, ವಿಜಯಪುರದಲ್ಲಿರುವ ಸಮುದಾಯದ ವನಶ್ರೀ ಮಠಕ್ಕೆ ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಬೇಕು. ಜತೆಗೆ, ಸಮುದಾಯಕ್ಕೆ 2ಎ ಪ್ರಮಾಣಪತ್ರ ನೀಡುವಿಕೆಯಲ್ಲಿ ಆಗುತ್ತಿರುವ ತೊಂದರೆ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.

ಸ್ವಾಮೀಜಿ ಮನವಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವರೂ ಆದ ಗೋವಿಂದ ಕಾರಜೋಳ, ‘ಗಾಣಿಗ ಸಮುದಾಯದ ಹಿರಿಯರು ಹಿಂದೂ ಲಿಂಗಾಯತ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಬಂದಿರುವುದರಿಂದ ಸಮಸ್ಯೆ ತಲೆದೋರಿದೆ. ಹಾಗಾಗಿ, ಮುಂದೆ ಹಿಂದೂ ಗಾಣಿಗ ಎಂದೇ ತಮ್ಮ ಜಾತಿಯನ್ನು ನಮೂದಿಸಬೇಕು. ಸದ್ಯದ ಸಮಸ್ಯೆ ನಿವಾರಿಸಲು ಸುತ್ತೋಲೆ ಹೊರಡಿಸಲು ಸೂಚಿಸುವೆ’ ಎಂದು ಭರವಸೆ ನೀಡಿದರು.‌

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮುಖಂಡರಾದ ಶಿವರಾಜ ಸಜ್ಜನರ, ಜಿ.ಎಸ್. ನ್ಯಾಮಗೌಡ್ರ, ಗಾಣಿಗ ಸಂಘದ ಸಲಹಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಡ್ನಿ, ಜಮಖಂಡಿ ಸಿದ್ದಮಠದ ಸಿದ್ದ ಮುತ್ಯಾ ಸ್ವಾಮೀಜಿ, ಬೆಳಗಾವಿಯ ಶಿವಾನಂದ ಸ್ವಾಮೀಜಿ, ಸಂಘದ ಅಧ್ಯಕ್ಷ ಗುರಣ್ಣ ಜಿ. ಗೋಡಿ, ಗೌರವಾಧ್ಯಕ್ಷ ಡಾ. ಶೇಖರ ಡಿ. ಸಜ್ಜನ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ, ಪ್ರಧಾನ ಕಾರ್ಯದರ್ಶಿ ಪಿ.ಎಂ. ತಟ್ಟಿಮನಿ, ಮಹಾಪೋಷಕ ತಿಪ್ಪಣ್ಣ ಮಜ್ಜಗಿ ಮುಂತಾದವರು ಇದ್ದರು.

ಪ್ರತಿಕ್ರಿಯಿಸಿ (+)