ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ನಿ ಸೀಮಂತಕ್ಕೆ ಬರುತ್ತೇನೆಂದವ ಬಾರದ ಲೋಕಕ್ಕೆ ಹೋದ’

ಆತ್ಮಹತ್ಯೆ ಮಾಡಿಕೊಂಡ ಯೋಧ ಮಂಜಪ್ಪ ಓಲೇಕಾರ ಮನೆಯಲ್ಲಿ ನೀರವ ಮೌನ
Last Updated 2 ಅಕ್ಟೋಬರ್ 2019, 15:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೀಪಾವಳಿ ಹಬ್ಬಕ್ಕೆ ಊರಿಗೆ ಬರುತ್ತೇನೆ. ಪತ್ನಿಯ ಸೀಮಂತವನ್ನು ಅದ್ಧೂರಿಯಾಗಿ ಮಾಡೋಣ...’ – ಜಮ್ಮು ಕಾಶ್ಮೀರದಲ್ಲಿ ಅ. 1ರಂದು ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಇನಾಂ ವೀರಾಪುರದ ಯೋಧ ಮಂಜಪ್ಪ ಹನುಮಂತಪ್ಪ ಓಲೇಕಾರ, ಸಾಯುವುದಕ್ಕೆ ಹಿಂದಿನ ರಾತ್ರಿ ತಮ್ಮ ತಂದೆಗೆ ಕರೆ ಮಾಡಿ ಹೇಳಿದ ಮಾತಿದು.

ಮನೆಯಲ್ಲಿ ಶುಭ ಕಾರ್ಯ ನಡೆಸುವುದಕ್ಕಾಗಿ ಮಂಜಪ್ಪ ಬರುವುದನ್ನೇ ಕಾಯುತ್ತಿದ್ದ ಅವರ ಕುಟುಂಬ, ಆತನ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಕುಗ್ಗಿ ಹೋಗಿದ್ದಾರೆ. ಅದರಲ್ಲೂ ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಎಲ್ಲರಿಗೂ ಆಘಾತ ತಂದಿದೆ.

‘ಬೆಳಿಗ್ಗೆ 9.30ರ ಸುಮಾರಿಗೆ ನನ್ನ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ನಿಮ್ಮ ಮಗನ ಜತೆ ನಾನು ಕೆಲಸ ಮಾಡುತ್ತೇನೆ. ಗುಂಡಿನ ಚಕಮಕಿಯಲ್ಲಿ ನಿಮ್ಮ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಿ ಕರೆ ಕಟ್ ಮಾಡಿದ. ಬಳಿಕ, ಆತನನ್ನು ಸಂಪರ್ಕಿಸಲು ಮತ್ತೆ ಆ ಸಂಖ್ಯೆಗೆ ಕರೆ ಮಾಡಲು ಯತ್ನಿಸಿದಾಗ, ಆ ಸಂಖ್ಯೆ ಸ್ವಿಚ್ ಆಫ್ ಆಗಿತ್ತು’ ಎಂದು ಮಂಜಪ್ಪ ಅವರ ತಂದೆ ಹನುಮಂತಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನನ್ನ ಮಗ ಹೇಡಿಯಲ್ಲ:

ಮಂಜಪ್ಪ ಅವರ ಸಾವಿಗೆ ನಿಖರ ಕಾರಣವೇನು ಎಂದು ಬುಧವಾರ ಮಧ್ಯಾಹ್ನದವರೆಗೆ ಕುಟುಂಬದವರಿಗೆ ಗೊತ್ತಾಗಿರಲಿಲ್ಲ. ಆದರೆ, ಸಂಜೆ ಗ್ರಾಮಕ್ಕೆ ಭೇಟಿ ಮಾಡಿದ ಧಾರವಾಡದ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕಡೊಳ್ಳಿ, ‘ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬದವರಿಗೆ ತಿಳಿಸಿದರು. ಇದರಿಂದ ದಿಗ್ಬ್ರಾಂತರಾದ ಕುಟುಂಬದವರು ಕಾರಣ ಕೇಳಿದಾಗ, ‘ನಮಗೆ ಗೊತ್ತಿರುವ ಮಾಹಿತಿ ಇಷ್ಟು’ ಎಂದ ಸಮಾಧಾನಪಡಿಸಿದರು.

‘ಮಂಜಪ್ಪ ಅವರದು ಆತ್ಮಹತ್ಯೆ ಎಂದು ಸೇನೆ ತಿಳಿಸಿದ್ದು, ಆ ಕುರಿತು ಕುಟುಂಬದವರಿಗೆ ತಿಳಿಸುವಂತೆ ಜಿಲ್ಲಾಧಿಕಾರಿ ನನಗೆ ಸೂಚಿಸಿದರು. ಅದರಂತೆ ಮನೆಯವರಿಗೆ ವಿಷಯ ತಿಳಿಸಿದ್ದೇನೆ. ಸಾವಿನ ಬಗ್ಗೆ ಮಿಲಿಟರಿಯ ಕೋರ್ಟ್ ಆಫ್ ಎನ್‌ಕ್ವೈರಿ ನಡೆದಾಗ, ನಿಖರ ಕಾರಣ ಗೊತ್ತಾಗಲಿದೆ. ಜತೆಗೆ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಆತನ ಸಹೋದ್ಯೋಗಿಗಳ ವಿಚಾರಣೆ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಸಂಗಪ್ಪ ಬಾಡಗಿ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಅಂತ್ಯಕ್ರಿಯೆ ಇಂದು

ಜಮ್ಮು–ಕಾಶ್ಮೀರದಲ್ಲಿ ಮೃತಪಟ್ಟ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಯೋಧ ಮಂಜಪ್ಪ ಹನುಮಂತಪ್ಪ ವಾಲೀಕರ (29) ಅವರ ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮದಲ್ಲಿ ನಡೆಯಲಿದೆ.

‘ಅ. 1ರಂದು ಮೃತಪಟ್ಟಿದ್ದ ಯೋಧನ ಶವವನ್ನು ವಿಮಾನದ ಮೂಲಕ ಮಂಗಳವಾರ ಸಂಜೆ 4.30‌ಕ್ಕೆ ಹುಬ್ಬಳ್ಳಿಗೆ ತರಲಾಗುವುದು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದರು. ಆದರೆ, ಪ್ರತಿಕೂಲ ವಾತಾವರಣದಿಂದಾಗಿ ವಿಮಾನ ಲಭ್ಯವಾಗಿಲ್ಲ. ಹಾಗಾಗಿ, ಬೆಳಿಗ್ಗೆ 9ಕ್ಕೆ ಮೃತದೇಹ ವಿಮಾನದ ಮೂಲಕ ಬರಲಿದೆ. ಬಳಿಕ, ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಗ್ರಾಮೀಣ ತಹಶೀಲ್ದಾರ್ ಸಂಗಪ್ಪ ಬಾಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬುಧವಾರವೇ ಶವ ಬರಲಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದರಿಂದ, ಗ್ರಾಮದಲ್ಲಿ ಬುಧವಾರವೇ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗ್ರಾಮದುದ್ದಕ್ಕೂ ಮಂಜಪ್ಪ ಅವರ ಭಾವಚಿತ್ರಗಳನ್ನು ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT